ಬನ್ನಿಕುಪ್ಪೆ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜನುಮದಿನವನ್ನು ಆಚರಿಸಲಾಯಿತು. ಡಿ.ಎಂ ತ್ರಿವೇಣಿ, ಪುಟ್ಟರಾಜು, ಚಿಕ್ಕಸ್ವಾಮಿ, ಕೆಂಗಯ್ಯ, ಪ್ರಸನ್ನಕುಮಾರ್ ಇತರರು ಇದ್ದರು.
ಬನ್ನಿಕುಪ್ಪೆ: ಡಾ.ಅಂಬೇಡ್ಕರ್ ಅವರು ಯಾವುದೇ ಒಂದು ವರ್ಗಕ್ಕೆ ಸೀಮಿತವಾದವರಲ್ಲ. ಈ ದೇಶ ಕಂಡ ಮಹಾನ್ ಮಾನವತಾವಾದಿಯಾದ ಅವರ ವಿಚಾರಧಾರೆಗಳು ಇಂದಿನ ಯುವ ಸಮೂಹಕ್ಕೆ ಪ್ರೇರೇಪಣೆಯಾಗಿದೆ ಎಂದು ಮಡಿಲು ಸಂಸ್ಥೆಯ ವ್ಯವಸ್ಥಾಪಕರೂ ಆದ ಕರ್ನಾಟಕ ರಾಜ್ಯ ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಡಿ.ಎಂ ತ್ರಿವೇಣಿ ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಬನ್ನಿಕುಪ್ಪೆ ಗ್ರಾಮದಲ್ಲಿ ಆಯೋಜಿಸಿದ್ದ 135ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂವಿಧಾನವನ್ನು ಅಧ್ಯಯನ ಮಾಡಿದರೆ ಮಾತ್ರ ಅಂಬೇಡ್ಕರ್ ಹಾಗೂ ಈ ದೇಶದ ಸವಾಲುಗಳು ಏನು ಎಂಬುದನ್ನು ತಿಳಿಯಲು ಸಾಧ್ಯ ಎಂದರು.
ಇಂದು ನಾವೆಲ್ಲರೂ ಸ್ವತಂತ್ರವಾಗಿ ಬದುಕುವುದಕ್ಕೆ ಸಂವಿಧಾನವೇ ಕಾರಣ. ನಾವು ಸಂವಿಧಾನದ ಆಶಯಗಳನ್ನು ಪಾಲಿಸುವುದರಲ್ಲಿ ವಿಫಲರಾಗಿದ್ದೇವೆ. ಬಾಬಾ ಸಾಹೇಬರ ಚಿಂತನೆಗಳನ್ನು ನಾವು ಪಾಲಿಸಬೇಕು ಹಾಗೂ ರಕ್ಷಿಸಬೇಕು. ಇದು ನಮ್ಮ ಕರ್ತವ್ಯವಾಗಿದೆ ಎಂದರು.
ಅಂಬೇಡ್ಕರ್ ಅವರ ಭಾವಚಿತ್ರವನ್ನು ವಾಹನದ ಮೂಲಕ ಬನ್ನಿಕುಪ್ಪೆ ಗೇಟಿನಿಂದ ಗ್ರಾಮಕ್ಕೆ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಕೀಲ ಪುಟ್ಟರಾಜು, ಮುಖಂಡ ಚಿಕ್ಕಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆಂಗಯ್ಯ, ಮುಖಂಡರು ಇತರರು ಭಾಗವಹಿಸಿದ್ದರು.