ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಆಲ್ ದಿ ಬೆಸ್ಟ್!

ಎಸ್ಸೆಸ್ಸೆಲ್ಸಿ ಪರೀಕ್ಷೆ
ಎಸ್ಸೆಸ್ಸೆಲ್ಸಿ ಪರೀಕ್ಷೆ
Published on

ಪ್ರಮುಖ ಮುಖ್ಯಾಂಶಗಳು

  • ಮಾರ್ಚ್ 18ರಿಂದ 10ನೇ ಕ್ಲಾಸ್ ಪರೀಕ್ಷೆ
  • ಮೈಸೂರು ಜಿಲ್ಲೆಯಲ್ಲಿ ಸಕಲ ಸಿದ್ಧತೆ
  • ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯತಂತ್ರ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ವಿದ್ಯಾರ್ಥಿಯ ಭವಿಷ್ಯದ ಶೈಕ್ಷಣಿಕ ಮತ್ತು ವೃತ್ತಿಪರ ಜೀವನ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.18ರಿಂದ ಶುರುವಾಗಲಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರೌಢ ಶಿಕ್ಷಣ ಪೂರ್ಣಗೊಳಿಸಿ, ಮುಂದಿನ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಮೂಲಭೂತ ಜ್ಞಾನದ ಅಡಿಪಾಯ ಹಾಕುವ ಇದು ವಿದ್ಯಾರ್ಥಿಗಳ ಪಾಲಿಗೆ ಮಹತ್ವ ಘಟ್ಟ. ಇದಕ್ಕಾಗಿ ಸಜ್ಜಾಗಿರುವ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್ ಹೇಳೋಣ.
2025-26ನೇ ಶೈಕ್ಷಣಿಕ ಸಾಲಿನ 10ನೇ ತರಗತಿಯ ಪರೀಕ್ಷೆಗೆ ಇನ್ನೂ ಒಂದು ದಿನ ಮಾತ್ರ ಬಾಕಿ ಉಳಿದಿದೆ. 39,349 ವಿದ್ಯಾರ್ಥಿಗಳು  ವಾರ್ಷಿಕ ಪರೀಕ್ಷೆಗೆ ಬಹುತೇಕ ತಯಾರಿ ಮಾಡಿಕೊಂಡಿದ್ದು, 36,179 ಹೊಸಬರು, 2,458 ಪುನರಾವರ್ತಿರು, 278 ಖಾಸಗಿ ವಿದ್ಯಾರ್ಥಿಗಳು, 133 ಖಾಸಗಿ ಪುನರಾವರ್ತಿತರರು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ನಗರದಲ್ಲಿ 43, ಗ್ರಾಮಾಂತರದಲ್ಲಿ 93 ಸೇರಿದಂತೆ 136 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಶಾಲಾ ಶಿಕ್ಷಣ ಇಲಾಖೆ ವಿವಿಧ ಕಸರತ್ತು ಕೈಗೊಂಡಿದೆ. ಈ ಬಾರಿ ಶೇ.15ರಿಂದ 20ರಷ್ಟು ಫಲಿತಾಂಶ ಹೆಚ್ಚಿಸಿಕೊಳ್ಳುವ ಗುರಿಯೊಂದಿಗೆ ಉತ್ತಮ ಸ್ಥಾನದತ್ತ ತೆಗೆದುಕೊಂಡು ಹೋಗುವ ಪ್ರಯತ್ನವನ್ನೂ ಮಾಡಿದೆ. ಕಳೆದ ಸಾಲಿನ ಪರೀಕ್ಷೆಯಲ್ಲಿ ಜಿಲ್ಲೆಯ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಶೇ.67.83ರಷ್ಟು ತೇರ್ಗಡೆಯೊಂದಿಗೆ ರಾಜ್ಯಮಟ್ಟದಲ್ಲಿ 7ನೇ ಸ್ಥಾನದಿಂದ 15ನೇ ಸ್ಥಾನಕ್ಕೆ ಇಳಿಕೆ ಕಂಡಿತ್ತು. ಇದು ಮುಜುಗರಕ್ಕೂ ಕಾರಣವಾಗಿತ್ತು.
ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಹಿಂದಿನ ವರ್ಷದ ಫಲಿತಾಂಶ ಸುಧಾರಣೆ ಮಾಡುವ ಕ್ರಮಗಳು ಫಲಕೊಟ್ಟಿರಲಿಲ್ಲ. ಅಗ್ರ 10ರೊಳಗಿನ ಸ್ಥಾನ ಉಳಿಸಿಕೊಳ್ಳಲು ಸಹ ವಿಫಲವಾಗಿತ್ತು. ಇದು ಕಳವಳಕ್ಕೆ ಕಾರಣವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. 
ಹೀಗಾಗಿ ಈ ಸಲ ಶಾಲಾ ಶಿಕ್ಷಣ ಇಲಾಖೆಯು ಫಲಿತಾಂಶ ಸುಧಾರಣೆಗೆ ಪಣತೊಟ್ಟಿದ್ದು, ಅನೇಕ ಕಾರ್ಯತಂತ್ರ ಮಾಡುತ್ತಿದೆ. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿಗೊಳಿಸುವಲ್ಲಿ ಯೋಜಿತ ರೀತಿಯಲ್ಲಿ ಶ್ರಮಿಸಿದೆ. ಈ ಸಲ ಫಲಿತಾಂಶ ಸುಧಾರಣೆಗೆ ವಿಶೇಷ ಆಸಕ್ತಿ ವಹಿಸಲಾಗಿದೆ. ಕಳೆದ ಬಾರಿಗಿಂತ ಶೇ.20ರಷ್ಟು ಫಲಿತಾಂಶ ವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಇದು ಸಕಾರಾವಾಗಲಿದೆಯೇ ಕಾಯ್ದನೋಡಬೇಕಿದೆ.
ಅಂತಿಮ ಹಂತದ ಸಿದ್ಧತೆಗಳು: ಅಂತಿಮ ಹಂತದ ಸಿದ್ಧತೆಯನ್ನೂ ಕೈಗೊಳ್ಳಲಾಗಿದೆ. ಪ್ರತಿ ಬ್ಲಾಕ್‌ನಲ್ಲಿ ವಿಷಯವಾರು ಶಿಕ್ಷಕರ ತಂಡ ರಚಿಸಿ ವಿಷಯವಾರು ಸಂಪನ್ಮೂಲ ಶಿಕ್ಷಕರು ಸಂಜೆ 6 ರಿಂದ ರಾತ್ರಿ 10ರ ವರೆಗೆ ಮಕ್ಕಳು ದೂರವಾಣಿ ಮೂಲಕ ಕರೆ ಮಾಡಿ ತಿಳಿವಳಿಕೆ ನೀಡಿ ಪ್ರಶ್ನೆಗಳಿಗೆ ಉತ್ತರ ಬರೆಯಲು ಅನುಕೂಲವಾಗುವಂತೆ ಮಾರ್ಗದರ್ಶನ ಮಾಡಿದ್ದಾರೆ. ಇದು ಪರೀಕ್ಷೆ ಮುಗಿಯುವ ವರೆಗೂ ಚಾಲ್ತಿಯಲ್ಲಿ ಇರಲಿದೆ.
ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆಗಳು, ರಾಜ್ಯಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಬರೆಯುವ ವಿಧಾನವನ್ನು ವಿದ್ಯಾರ್ಥಿಗಳು ಪುನರಾವರ್ತನೆ ಮಾಡಿಸಲಾಗಿದೆ. ಇದರ ಮೇಲೆ ಶಿಕ್ಷಕರು ನಿಗಾ ವಹಿಸಿದ್ದಾರೆ. ಈಗಾಗಲೇ ಪಾಲಕರ, ತಾಯಂದಿರ ಸಭೆ ನಡೆಸಿ ವಿದ್ಯಾರ್ಥಿಗಳ ದೈನಂದಿನ ಕಲಿಕೆಯ ಕುರಿತು ಮಾಹಿತಿ ನೀಡಿ ಓದಿಗೆ ಉತ್ತೇಜನ ಕೊಡಲಾಗಿದೆ. ಶಾಲಾ ಮಂಡಳಿ ನೀಡಿರುವ  ಕೀ-ಉತ್ತರಗಳ ಪ್ರಮುಖಾಂಶ ಗಮನಿಸಿ ಅದರಂತೆ ಉತ್ತರ ಬರೆಯಲು ಅಭ್ಯಾಸ ಮಾಡಿಸಲಾಗಿದೆ.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪಾಲಕರ, ಎಸ್‌ಡಿಎಂಸಿ ಒಪ್ಪಿಗೆ ಪಡೆದು ಭಾನುವಾರದ ರಾತ್ರಿ ತರಗತಿ ನಡೆಸಿ ಹೆಚ್ಚುವರಿ ಕಲಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಅಲ್ಲದೆ, ಈ ಮಕ್ಕಳಿಗೆ ಪ್ರತಿ ವಿಷಯದಲ್ಲಿ 40 ಅಂಕಗಳಿಗೆ ಮಾದರಿ ಪ್ರಶ್ನೆ ಪತ್ರಿಕೆ, ಎಲ್‌ಬಿಎ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿ ಪರೀಕ್ಷೆ ಅಂತಿಮ ತಯಾರಿಯನ್ನೂ ಮಾಡಿಸಲಾಗಿದೆ.
ವಿಷಯ ಶಿಕ್ಷಕರು ವಿವಿಧ ಕಲಿಕಾ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಆಯಾ ವಿದ್ಯಾರ್ಥಿಗಳ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಅಭ್ಯಾಸದ ಹಾಳೆ ನೀಡಿ ಕಲಿಕೆಯನ್ನು ಸುಗಮಗೊಳಿಸಲಾಗಿದೆ. ಕಲಿಕಾ ಮಟ್ಟ ಅಳೆಯುವ ಕಲಿಕಾ ಕಾರ್ಡ್‌ಗಳನ್ನು ಶಿಕ್ಷಕರು ತಯಾರಿಸಿ ನಿರಂತರ ಮೌಲ್ಯಮಾಪನದೊಂದಿಗೆ ವಿದ್ಯಾರ್ಥಿಗಳು ಕಲಿಸುವ ಕುರಿತು ಖಚಿತ ಪಡಿಸಿಕೊಳ್ಳಲಾಗಿದೆ. ಈ ರೀತಿ ಸಜ್ಜಾಗಿರುವ ವಿದ್ಯಾರ್ಥಿಗಳು ಆತ್ಮವಿಶ್ವಾಸ, ಧೈರ್ಯದಿಂದ ಪರೀಕ್ಷೆ ಬರೆದು ಉತ್ತಮ ಅಂಕ ತಮ್ಮದಾಗಿಸಿಕೊಳ್ಳಬೇಕಿದೆ. ಆಗಲೇ ಈ ಎಲ್ಲ ರೀತಿ ಸಿದ್ಧತೆಗಳು ಸಾರ್ಥಕವಾಗಲಿವೆ.
..

ವೆಬ್ ಕಾಸ್ಟಿಂಗ್ ಕಣ್ಗಾವಲು

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯವನ್ನೂ ಕಲ್ಪಿಸಿದ್ದು, ವಿದ್ಯಾರ್ಥಿಗಳು ಮೇಲೆ ಸಿಸಿ ಕ್ಯಾಮರಾ ಮತ್ತು ವೆಬ್ ಕಾಸ್ಟಿಂಗ್ ವ್ಯವಸ್ಥೆಯ ಕಣ್ಗಾವಲು ಇರಲಿದೆ. ಪರೀಕ್ಷಾ ಕೇಂದ್ರಗಳ ಸುತ್ತಲು 200 ಮೀಟರ್ 144 ಕಾಲಂ ಅಡಿ ನಿಷೇಧಾಜ್ಞೆ ಹೊರಡಿಸಲಾಗಿದೆ. ಸುಳ್ಳು ಸುದ್ದಿ, ವದಂತಿ ಹಬ್ಬಿಸುವ, ಕುಚೋದ್ಯ ಚಟುವಟಿಕೆಗಳಿಗೆ ಅವಕಾಶ ನೀಡುವವರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಮೊಬೈಲ್ ಬಳಕೆಗೆ ನಿರ್ಬಂಧ

ಪರೀಕ್ಷಾ ಅಕ್ರಮ ತಡೆಗಟ್ಟಲು ಮೊಬೈಲ್ ಬಳಕೆ ನಿರ್ಬಂಧಿಸಿದ್ದು, ಮೊಬೈಲ್ ಸ್ವಾಧೀನ ಅಧಿಕಾರಿ ಪ್ರತಿ ಕೇಂದ್ರದಲ್ಲೂ ನಿಯೋಜಿಸಲಾಗುತ್ತದೆ. ಪ್ರತಿ ಸಿಬ್ಬಂದಿ, ವಿದ್ಯಾರ್ಥಿಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಒಂದು ವೇಳೆ ತಂದಿದ್ದರೆ ಮೊಬೈಲ್ ವಶಕ್ಕೆ ಪಡೆದು, ಪರೀಕ್ಷೆ ಮುಗಿದ ಬಳಿಕ ಹಿಂದಿರುಗಿಸಲಾಗುತ್ತದೆ.

ಸ್ಮಾರ್ಟ್‌ವಾಚ್ ತರುವಂತಿಲ್ಲ

ಅನಲಾಗ್, ಮೆಕ್ಯಾನಿಕ್ ಕೈಗಡಿಯಾರವನ್ನು ಮಾತ್ರ ಹಾಕಿಕೊಂಡು ಬರಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ಹೊರತು ಪಡಿಸಿ ಸ್ಮಾರ್ಟ್‌ವಾಚ್, ಯಾವುದೇ ಎಲೆಕ್ಟ್ರಾನಿಕ್ ಉಪಕರಣ ತರಲು ನಿರ್ಬಂಧಿಸಲಾಗಿದೆ. 
ಸ್ಥಾನಿಕ ಜಾಗೃತ ದಳ, ಸಂಚಾರ ಜಾಗೃತ ದಳ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿವೆ. ಪ್ರಶ್ನೆ ಪತ್ರಿಕೆಗಳು ಜಿಲ್ಲಾ ಕೇಂದ್ರದಿಂದ ತಾಲೂಕು ಖಜಾನೆಗಳಿಗೆ ರವಾನಿಸಲಾಗುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಪರೀಕ್ಷಾ ಕೇಂದ್ರಗಳಿಗೆ ಹಸ್ತಾಂತರಿಸಲಾಗುತ್ತದೆ. 

ಪರೀಕ್ಷಾ ಭಯ ಹೋಗಲಾಡಿಸಲೂ ಕ್ರಮ

ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸಲು ಕ್ರಮ ವಹಿಸಿದ್ದು, ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ಮುಖ್ಯ ಅಧೀಕ್ಷಕರಿಗೆ ಸೂಚನೆ ನೀಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಕೌಂಟರ್ ಸಹ ತೆರೆಯಲಾಗುತ್ತದೆ. ತಾಪಮಾನ ಪರಿಶೀಲಿಸಿ, ವಿದ್ಯಾರ್ಥಿಗಳನ್ನು ಒಳಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ವರ್ಷ ಫಲಿತಾಂಶ ಜಿಲ್ಲೆಯ ಸ್ಥಾನ
2025 ಶೇ.67.83 15
2024 ಶೇ.87.19 7
2023 ಶೇ.89.53 19
2022 ಶೇ.91.37 11
2021 ಶೇ.100
"

ಪ್ರಸ್ತಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಜಿಲ್ಲಾದ್ಯಂತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಲ ಫಲಿತಾಂಶ ಸುಧಾರಣೆಗೂ ಹೆಚ್ಚಿನ ಗಮನ ಕೊಡಲಾಗಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ಮೂಲಕ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net