ನಂಜನಗೂಡಿನಲ್ಲಿ ಶಿವರಾತ್ರಿ ಜಾಗರಣೆಗೆ ಸಕಲ ಸಿದ್ಧತೆ

ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಜಾಗರಣೆ ಹಿನ್ನೆಲೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಜಾಗರಣೆ ಹಿನ್ನೆಲೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
Published on

ಪ್ರಮುಖ ಮುಖ್ಯಾಂಶಗಳು

  • Shivaratri
ನಂಜನಗೂಡು: ಫೆಬ್ರವರಿ 15ರಂದು ನಡೆಯುವ ಮಹಾ ಶಿವರಾತ್ರಿ ಹಬ್ಬದ ಜಾಗರಣೆ ಅಂಗವಾಗಿ ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ಶಿವರಾತ್ರಿ ಹಿನ್ನಲೆಯಲ್ಲಿ ಅಂದು ಮುಂಜಾನೆ 4 ರಿಂದಲೇ ಸ್ವಾಮಿಯವರಿಗೆ ಏಕ ರುದ್ರಾಭಿಷೇಕ, ಪ್ರಥಮ ಕಾಲ, ಉಷ ಕಾಲ, ಸಂಗಮ ಕಾಲ,ಮಾದ್ಯಮ ಕಾಲ, ಸಂಜೆ ಪ್ರದೋಶ ಕಾಲ,ಏಕಾಂತ ಕಾಲ, ಅಭಿಷೇಕ ಮಾಡಲಾಗುತ್ತದೆ. ರಾತ್ರಿ ಜಾಗರಣೆ ವಿಶೇಷವಾಗಿ ವಿವಿಧ ಬಗೆಯ ಪುಷ್ಪಗಳಿಂದ ಹಲವಾರು ರೀತಿಯ ಅಲಂಕಾರಗಳನ್ನು ಮಾಡಲಾಗುತ್ತದೆ ಸಂಜೆ 6ರಿಂದ 9 ತನಕ ಶಂಕರ ಮಠದ ವತಿಯಿಂದ ಮೊದಲಯಾಮ ಪೂಜೆ,9 ರಿಂದ 12 ರವರೆಗೆ ಶ್ರೀರಾಘವೇಂದ್ರ ಮಠದ ವತಿಯಿಂದ ಎರಡನೇ ಯಾಮ ಪೂಜೆ, 12 ರಿಂದ 3 ಹಾಗೂ 3 ರಿಂದ 6 ರವರಗೆ ಮೂರನೇ ಹಾಗೂ ಅಂತಿಮ ಪೂಜೆಗಳನ್ನು ನಡೆಸಲಾಗುತ್ತದೆ. 6 ರ ನಂತರ ಕೈಲಾಸ ವಾಹನ ಉತ್ಸವ ನೇರವೆರಿಲಾಗುತ್ತದೆ. ಮುಂಜಾನೆ 4 ರಿಂದ ರಾತ್ರಿ 8.30 ರ ತನಕ ದೇವಾಲಯದಲ್ಲಿ ನಿರಂತರವಾಗಿ ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆಯಬಹುದು ಎಂದು ದೇವಾಲಯದ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್ ಹಾಗೂ ಶಂಕರ್ ದೀಕ್ಷಿತ್ ತಿಳಿಸಿದರು.
ದೇವಾಲಯಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತರಿಗೆ ಯಾವುದೇ ರೀತಿ ಲೋಪ ದೋಷಗಳಾಗದಂತೆ ದೇವಾಲಯದ ವತಿಯಿಂದ ಇದೆ ಮೊದಲ ಬಾರಿಗೆ ವಿಶೇಷವಾಗಿ ಗರ್ಭಿಣಿಯರು, 65 ವರ್ಷ ವಯೋವೃದ್ಧರು ಮತ್ತು ಚಿಕ್ಕ ಮಕ್ಕಳಿಗೆ ಅನುಕೂಲವಾಗುವಂತೆ ವಿಶೇಷ ಸರದಿ ಸಾಲನ್ನು ಮಾಡಲಾಗಿದೆ. ಉಳಿದಂತೆ 100 ರೂ.ಗಳ ವಿಶೇಷ ದರ್ಶನ, ಧರ್ಮದರ್ಶನ, ಗಣ್ಯರು ಮತ್ತು ಅತಿ ಗಣ್ಯರಿಗೆ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಆಯ್ದ ಜಾಗದಲ್ಲಿ ಕುಡಿಯುವ ನೀರು, ಶೌಚಾಲಯ,ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ. ಭಕ್ತಾದಿಗಳು ಶಿವನ ಧ್ಯಾನ ಮಾಡಲು ಸಂಜೆ 6 ರಿಂದ ಮರುದಿನ 6 ತನಕ ಭರತನಾಟ್ಯ, ಹರಿಕಥೆ, ಭಜನೆ ಹಾಗೂ ಪ್ರಖ್ಯಾತ ಹಿನ್ನೆಲೆ ಗಾಯಕಿ ಎಂ.ಡಿ. ಪಲ್ಲವಿಯವರಿಂದ ಭಕ್ತಿ ಗೀತೆಗಳು, ದೇವರ ನಾಮ ಇನ್ನು ಮಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ರಾಜ್ಯದ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ವಿಶೇಷವಾಗಿ ಚಾಮರಾಜನಗರ ಮೈಸೂರು ಹಾಗೂ ಬೆಂಗಳೂರಿನಿಂದ ನಿರಂತರ 24 ಗಂಟೆ ಕೆಎಸ್‌ಅರ್‌ಟಿಸಿ ಬಸ್ ಸೇವೆ ಕಲ್ಪಿಸಲಾಗಿದೆ. ದೇವಾಲಯದ ಆಯ್ದ ಭಾಗಗಳಲ್ಲಿ ಮತ್ತು ಭಕ್ತಾದಿಗಳು ಸಂಚಾರಿಸುವ ಕೆಲವು ಭಾಗಗಳಲ್ಲಿ 250ಕ್ಕೂ ಹೆಚ್ಚು ಪೊಲೀಸ್ ಹಾಗೂ 500ಕ್ಕೂ ಹೆಚ್ಚು ಹೋಂ ಗಾರ್ಡ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net