ಆಯಿಷ್‌ನಲ್ಲಿ ಗುರುವಾರ ಆಯೋಜಿಸಿದ್ದ ಮಾತು ಮತ್ತು ಸಂಗೀತ ಸಂಶೋಧನೆ ಕುರಿತ ಸಮ್ಮೇಳನವನ್ನು ಧಾರವಾಡದ ಐಐಐಟಿ ನಿರ್ದೇಶಕ ಪ್ರೊ.ಎಸ್.ಆರ್.ಮಹದೇವ ಪ್ರಸನ್ನ ಉದ್ಘಾಟಿಸಿದರು. ಪ್ರೊ.ಶಂಖ ಸನ್ಯಾಲ್, ಪ್ರೊ.ಪಿ.ಮಂಜುಳಾ, ಪ್ರೊ.ಅಜೀಶ್ ಕೆ.ಅಬ್ರಾಹಂ, ಕಾರ್ತಿಕ್ ವೆಂಕಟ್ ಶ್ರೀಧರನ್ ಇದ್ದರು.
ವಾಕ್ ಮತ್ತು ಶ್ರವಣ ದೋಷ ಇರುವವರಿಗೆ ಸಾಧನ ಉನ್ನತೀಕರಿಸಬೇಕು
ಶ್ರವಣ ಸಾಧನಗಳ ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ಸಹಕಾರ
ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಸೇವೆಗಳು ದೊರೆಯಲಿ
ಮೈಸೂರು: ಎಲ್ಲ ಕ್ಷೇತ್ರಗಳಲ್ಲೂ ವೇಗವಾಗಿ ಬಳಕೆಯಾಗುತ್ತಿರುವ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನವನ್ನು ವಾಕ್ ಮತ್ತು ಶ್ರವಣ ದೋಷ ನಿವಾರಣೆಯಲ್ಲೂ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕಿದೆ ಎಂದು ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ನಿರ್ದೇಶಕ ಪ್ರೊ.ಎಸ್.ಆರ್.ಮಹದೇವ ಪ್ರಸನ್ನ ಹೇಳಿದರು.
ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಮಾತು ಮತ್ತು ಸಂಗೀತ ಸಂಶೋಧನೆ ಕುರಿತು ಸಮ್ಮೇಳನದಲ್ಲಿ ಮಾತನಾಡಿದರು.
ಎಐ ತಂತ್ರಜ್ಞಾನವು ತ್ವರಿತವಾಗಿ ಅಭಿವೃದ್ಧಿಯಾಗುತ್ತಿದೆ. ಇದನ್ನು ಎಲ್ಲ ಕ್ಷೇತ್ರದಲ್ಲೂ ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಈವರೆಗೂ ಸಾಧಿಸಿದ್ದು, ಮುಂದಿನ 10 ವರ್ಷಗಳಲ್ಲಿ ಸಂಶೋಧನೆಗಳಿಗೆ ಸರಿಸಮನಾಗಲಿದೆ.
ಆದ್ದರಿಂದ ಎಐ ತಂತ್ರಜ್ಞಾನವನ್ನು ಮಾನವತೆಯ ಕಡೆಗೆ ಬಳಸಬೇಕಿರುವುದು ತಂತ್ರಜ್ಞರು, ವೈದ್ಯರ ಹೊಣೆಗಾರಿಕೆಯಾಗಿದ್ದು, ಸಾರ್ವಜನಿಕರಿಗೂ ತಂತ್ರಜ್ಞಾನದ ಪ್ರಯೋಜನ ತಲುಪಬೇಕು ಎಂದರು.
ಎಐ ತಂತ್ರಜ್ಞಾನ ಪ್ರದರ್ಶಕ ಕಲೆಗಳಲ್ಲೂ ಉಪಯೋಗವಾಗುತ್ತಿದೆ. ವಾಕ್ ಮತ್ತು ಶ್ರವಣ ದೋಷ ಇರುವವರಿಗೆ ಸಾಧನಗಳನ್ನು ಉನ್ನತೀಕರಿಸಬೇಕು. ಇದಕ್ಕಾಗಿ ತಂತ್ರಜ್ಞರು ಕಾರ್ಯೋನ್ಮುಖವಾಗಬೇಕು. ಇದರಿಂದ ಬಹಳಷ್ಟು ಜನರಿಗೆ ಅನುಕೂಲವಾಗಲಿದೆ ಎಂದರು.
ಆಯಿಷ್ ಮತ್ತು ಐಐಐಟಿ ಜಂಟಿಯಾಗಿ ವಾಕ್ ಮತ್ತು ಶ್ರವಣ ಪೀಡಿತರ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತಿವೆ. ಟೆಕ್ನೋಕ್ರಾಟ್ಸ್‌ಗಳು ಈಗಾಗಲೇ ಆಯಿಷ್‌ನ ತಂತ್ರಜ್ಞರನ್ನು ಬಳಸಿಕೊಂಡು ಸುಧಾರಿತ, ಎಲ್ಲರಿಗೂ ಸುಲಭ ಬೆಲೆಯಲ್ಲಿ ಸಿಗಬಹುದಾದ ಪರಿಕರಗಳನ್ನು ಸಂಶೋಧನೆ ನಡೆಸಬೇಕು. ಯಾವುದೇ ತಾಂತ್ರಿಕ ಸಾಧನ ತಯಾರಾಗಲು ಅನೇಕ ವರ್ಷದ ಸಂಶೋಧನೆ ಅಗತ್ಯವಾಗಿದೆ ಎಂದರು.
ವರ್ಚ್ಯುವಲ್ ಆಗಿ ಮಾತನಾಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿಜ್ಞಾನ ಸಂಯೋಜಕಿ ಸುನಿತಾ ವರ್ಮಾ, ಸಚಿವಾಲಯವು ಶ್ರವಣ ಸಾಧನಗಳ ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ಸಹಕಾರ ನೀಡುತ್ತಿದೆ.
ಎಂಆರ್‌ಐ ಸೇರಿದಂತೆ ಪ್ರಮುಖ ವೈದ್ಯಕೀಯ ಸಾಧನಗಳನ್ನು ದೇಶದಲ್ಲೇ ತಯಾರಿಸಲು ಸಚಿವಾಲಯವು ತನ್ನ ಸಂಸ್ಥೆಗಳ ಮೂಲಕ ನೆರವಾಗುತ್ತಿದೆ. ಜನರಿಗೆ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಸೇವೆಗಳು ದೊರೆಯಲಿದೆ ಎಂದು ಹೇಳಿದರು.
ಎಐ ಸೇರಿದಂತೆ ಆಧುನಿಕ ತಂತ್ರಜ್ಞಾನಗಳು ಭವಿಷ್ಯದಲ್ಲಿ ವಾಕ್ ಮತ್ತು ಶ್ರವಣ ದೋಷಗಳ ನಿರ್ಮೂಲನೆಗೆ ಮಹತ್ವದ ಪಾತ್ರ ವಹಿಸಲಿವೆ. ವಿಜ್ಞಾನಿಗಳು, ತಂತ್ರಜ್ಞರು ವೈದ್ಯಕೀಯ ಸಮಸ್ಯೆಗಳನ್ನು ಬಗೆಹರಿಸಲು ಸಾಂಘಿಕ ಪರಿಶ್ರಮ ಹಾಕಬೇಕು ಎಂದರು.
ಜಾಧವ್‌ಪುರ ವಿಶ್ವವಿದ್ಯಾಲಯದ ಪ್ರೊ.ಶಂಖ ಸನ್ಯಾಲ್, ಆಯಿಷ್ ಪ್ರಭಾರ ನಿರ್ದೇಶಕಿ ಪ್ರೊ.ಪಿ.ಮಂಜುಳಾ, ಮೂಲಸೌಕರ್ಯ ಡೀನ್ ಪ್ರೊ.ಅಜೀಶ್ ಕೆ.ಅಬ್ರಾಹಂ, ವಾಕ್ ತಜ್ಞ ಕಾರ್ತಿಕ್ ವೆಂಕಟ್ ಶ್ರೀಧರನ್ ಇದ್ದರು.