ಸಾಧಕರೆಲ್ಲ ಕನ್ನಡ ಮಾಧ್ಯಮದಲ್ಲೇ ಓದಿದವರು: ಲೇಖಕ ಪೃಥ್ವಿರಾಜ್ ಹಾಲಹಳ್ಳಿ

ಕನ್ನಡ
ಕನ್ನಡ
Published on

ಪ್ರಮುಖ ಮುಖ್ಯಾಂಶಗಳು

  • ಭಾಷೆಯನ್ನು ಬಳಸದಿದ್ದರೆ ಅದು ನಶಿಸುತ್ತದೆ
  • ಇಂಗ್ಲೀಪ್ ಮಾಧ್ಯಮದಲ್ಲಿ ಓದಿದರೆ ಮಾತ್ರ ಸಾಧನೆ ಮಾಡುತ್ತಾರೆ ಎಂಬ ಭ್ರಮೆ
ಮೈಸೂರು: ಕನ್ನಡ ನಾಡಿನಲ್ಲಿ ಸಾಧಕರೆಲ್ಲ ಬಹುತೇಕರು ಕನ್ನಡ ಮಾಧ್ಯಮದಲ್ಲೇ ಓದಿದವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಬಳಸಬೇಕು ಮತ್ತು ಬೆಳೆಸಬೇಕು ಎಂದು ಲೇಖಕ ಪೃಥ್ವಿರಾಜ್ ಹಾಲಹಳ್ಳಿ ಹೇಳಿದರು.
ನಗರದ ಆರ್‌ಟಿಒ ಕಚೇರಿ ಸಮೀಪವಿರುವ ಜೆಎಸ್‌ಎಸ್ ವಿದ್ಯಾರ್ಥಿನಿಲಯ ಪ್ರಧಾನ ಭವನದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಪ್ರಾಚೀನತೆ, ಪರಂಪರೆ ಇದೆ. ಇಂಗ್ಲೀಪ್ ಮಾಧ್ಯಮದಲ್ಲಿ ಓದಿದರೆ ಮಾತ್ರ ಸಾಧನೆ ಮಾಡುತ್ತಾರೆ ಎಂಬ ಭ್ರಮೆ ಇದೆ. ಆದರೆ ಕನ್ನಡದಲ್ಲಿ ಓದಿದವರು ಸಾಧನೆ ಮಾಡಿದ್ದಾರೆ ಎಂದರು.
ಕನ್ನಡ ಕೇವಲ ಭಾಷೆಯಲ್ಲ, ಅದು ಸಂಸ್ಕೃತಿ. ಹಲ್ಮಡಿ ಶಾಸನದಿಂದ ಭಾಷೆ ಬರವಣಿಗೆಯ ರೂಪದಲ್ಲಿ ದೊರೆತು ಇಂದು ವೈವಿಧ್ಯಮಯ ಸಾಹಿತ್ಯ ಕನ್ನಡದಲ್ಲಿ ಹೊರಹೊಮ್ಮಿದೆ. ಕುವೆಂಪು, ಬೇಂದ್ರೆ ಸೇರಿದಂತೆ ಇಂದಿನ ಸಾಹಿತಿಗಳು ಕನ್ನಡ ಸಾಹಿತ್ಯ ಕಟ್ಟಿದರು ಎಂದು ತಿಳಿಸಿದರು.
ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿ, ಕನ್ನಡ ನಾಡಿನ ಏಕೀಕರಣಕ್ಕೆ ಶ್ರಮಿಸಿದವರು ಆಲೂರು ವೆಂಕಟರಾಯರು. ಕನ್ನಡ ಭಾಷೆಗೆ ತನ್ನದೇ ಆದ ಸೊಗಡಿದೆ, ಐತಿಹಾಸಿಕ ಹಿನ್ನೆಲೆ ಇದ್ದು, ಭಾಷೆಯನ್ನು ಬಳಸದಿದ್ದರೆ ಅದು ನಶಿಸುತ್ತದೆ ಎಂದರು.
ನಿಲಯ ಪಾಲಕ ಡಾ.ಎನ್.ಮಹದೇವಸ್ವಾಮಿ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಪ್ರಾಮುಖ್ಯತೆ ಇದ್ದು, ಹಲ್ಮಡಿಯಿಂದ ಇಂದಿನ ತಾಂತ್ರಿಕ ಯುಗದವರೆಗೆ ಭಾಷೆ ವಿಕಾಸ ಹೊಂದಿದೆ. ಕರ್ನಾಟಕ ಏಕೀಕರಣಕ್ಕೆ ಹಲವಾರು ಮಹನೀಯರು ದುಡಿದರೂ ಕರ್ನಾಟಕ ಭೌಗೋಳಿಕವಾಗಿ ಏಕೀಕರಣಗೊಂಡಿದೆ. ಆದರೆ ಮಾನಸಿಕವಾಗಿ ಇನ್ನೂ ಏಕೀಕರಣವಾಗಿಲ್ಲ ಎಂದರು. 
ಆಲೂರು ವೆಂಕಟರಾಯರು ಕರ್ನಾಟಕ ಗತವೈಭವವನ್ನು ಮತ್ತೆ ಕಾಣುವ ಉದ್ದೇಶದಿಂದ ಇಲ್ಲಿನ ಸಾಂಸ್ಕೃತಿಕ ಪರಂಪರೆಯನ್ನು ಗ್ರಂಥ ರೂಪದಲ್ಲಿ ಹೊರತಂದರು. ಅದೇ ಕರ್ನಾಟಕ ಗತವೈಭವ ಕೃತಿ. ಹ.ರ.ದೇಶಪಾಂಡೆ, ಹರ್ಡೇಕರ್ ಮಂಜಪ್ಪ, ದೊಡ್ಡಮೇಟಿ ಅನ್ನದಾನಪ್ಪ ಮುಂತಾದ ಮಹನೀಯರ ಹೋರಾಟದ ಪರಿಣಾಮ ಕರ್ನಾಟಕ ಏಕೀಕರಣ ಸಾಧ್ಯವಾಗಿ 1956ರಲ್ಲಿ ವಿಶಾಲ ಮೈಸೂರು ರಾಜ್ಯ ಸ್ಥಾಪನೆಯಾಯಿತು ಎಂದು ತಿಳಿಸಿದರು. 
ವಿದ್ಯಾರ್ಥಿನಿಲಯದ ವ್ಯವಸ್ಥಾಪಕರಾದ ಡಿ.ಜಿ. ಪ್ರದೀಪ್‌ಕುಮಾರ್, ಕೆ.ಆರ್.ಸತೀಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net