ಅಕ್ಕಮಹಾದೇವಿ ಸಾಹಿತ್ಯ ಪರಂಪರೆಯ ಅಭಿವ್ಯಕ್ತಿಯ ಸಂಕೇತ:ಪ್ರೊ.ಕವಿತಾ ರೈ ಬಣ್ಣನೆ

ನಟರಾಜ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಶ್ರೀ ಸಿದ್ಧಬಸವ ಸ್ವಾಮೀಜಿ, ಪ್ರೊ.ಎಸ್.ಶಿವರಾಜಪ್ಪ, ಪ್ರೊ.ಕವಿತಾ ರೈ, ಡಾ.ಶಾರದಾ, ಡಾ.ಪ್ರಸಾದ್‌ಮೂರ್ತಿ ಇತರರು ಇದ್ದರು.
ನಟರಾಜ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಶ್ರೀ ಸಿದ್ಧಬಸವ ಸ್ವಾಮೀಜಿ, ಪ್ರೊ.ಎಸ್.ಶಿವರಾಜಪ್ಪ, ಪ್ರೊ.ಕವಿತಾ ರೈ, ಡಾ.ಶಾರದಾ, ಡಾ.ಪ್ರಸಾದ್‌ಮೂರ್ತಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಲಿಂಗ ತಾರತಮ್ಯ ಮತ್ತು ಲೌಕಿಕ ಬಂಧನಗಳ ವಿರುದ್ಧ ದೊಡ್ಡ ಸಾಮಾಜಿಕ ಚಿಕಿತ್ಸಕಳಾಗಿ ಅಕ್ಕ ಮಹಾದೇವಿ ನಿಂತಿದ್ದರು
  • ಸಮಾಜದ ಕಟ್ಟುಪಾಡುಗಳ ವಿರುದ್ಧದ ಬಂಡಾಯ ಎದ್ದಿದ್ದ ಅಕ್ಕನಿಗೆ ಅನುಭವ ಮಂಟಪದಲ್ಲಿ ಉನ್ನತ ಗೌರವವಿತ್ತು
ಮೈಸೂರು:ವಚನ ಚಳವಳಿಯ ಪ್ರಮುಖ ಶಿವಶರಣೆಯಾದ ಅಕ್ಕಮಹಾದೇವಿ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕ್ರಾಂತಿಕಾರಿ ಮತ್ತು ಆದ್ಯ ವಚನಗಾರ್ತಿ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕ್ಕಮಹಾದೇವಿ ಸಂಶೋಧನಾ ಮತ್ತು ವಿಸ್ತರಣಾ ಪೀಠದ ನಿರ್ದೇಶಕಿ ಪ್ರೊ.ಕವಿತಾ ರೈ ಬಣ್ಣಿಸಿದರು.
ನಟರಾಜ ಪ್ರತಿಷ್ಠಾನದಿಂದ ನಗರದ ಹೊಸಮಠದ ನಟರಾಜ ಕಲ್ಯಾಣ ಭವನದಲ್ಲಿ ಆಯೋಜಿಸಿದ್ದ ಅಲ್ಲಮಪ್ರಭು, ಬಸವೇಶ್ವರ ಮತ್ತು ಅಕ್ಕಮಹಾದೇವಿ ಜಯಂತಿ ಹಾಗೂ ಗುರುಶಾಂತ ಸ್ವಾಮೀಜಿ ಅವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಕಂದಾಚಾರ, ಲಿಂಗ ತಾರತಮ್ಯ ಮತ್ತು ಲೌಕಿಕ ಬಂಧನಗಳ ವಿರುದ್ಧ ದೊಡ್ಡ ಸಾಮಾಜಿಕ ಚಿಕಿತ್ಸಕಳಾಗಿ ಅಕ್ಕ ಮಹಾದೇವಿ ನಿಂತಿದ್ದರು. ಲೌಕಿಕ ಸುಖಗಳನ್ನು ತ್ಯಜಿಸಿದ ಇವರು, ತಮ್ಮ ವಚನಗಳಲ್ಲಿ ಸ್ತ್ರೀ ಸಂವೇದನೆ, ವೈರಾಗ್ಯ ಮತ್ತು ತೀವ್ರವಾದ ದೈವಿಕ ಹಂಬಲ ಕಾಣಬಹುದು. ಹೀಗಾಗಿ ಅಕ್ಕಮಹಾದೇವಿ ಕೇವಲ ಶರಣೆಯಲ್ಲ, ಕನ್ನಡ ಸಾಹಿತ್ಯ ಪರಂಪರೆಯ ಅಭಿವ್ಯಕ್ತಿಯ ಸಂಕೇತ ಎಂದರು.
ಲೌಕಿಕ ಜೀವನವನ್ನು ಸಂಪೂರ್ಣವಾಗಿ ತ್ಯಜಿಸಿ, ಪಾರಮಾರ್ಥಿಕ ಪಥವನ್ನು ಆರಿಸಿಕೊಂಡ ಅಕ್ಕಮಹಾದೇವಿ, ಶರೀರವು ನಶ್ವರವಾದುದು. ಆತ್ಮವು ಪರಮಾತ್ಮನಿಗೆ ಸೇರಿದ್ದು. ದೇಹಕ್ಕೆ ಏನಾದರೂ ಆದರೆ ಅದು ಪ್ರಕೃತಿಗೆ ಸೇರುವ ಮಣ್ಣು, ಆದರೆ ಅಂತರಾತ್ಮ ದೇವರಿಗೆ ಎನ್ನುವ ವೈರಾಗ್ಯದ ಭಾವ ಹೊಂದಿದ್ದರು ಎಂದು ವಿಶ್ಲೇಷಿಸಿದರು.
ಆಧ್ಯಾತ್ಮಿಕ ತುಡಿತ, ಸಮಾಜದ ಕಟ್ಟುಪಾಡುಗಳ ವಿರುದ್ಧದ ಬಂಡಾಯ ಎದ್ದಿದ್ದ ಅಕ್ಕನಿಗೆ ಅನುಭವ ಮಂಟಪದಲ್ಲಿ ಉನ್ನತ ಗೌರವವಿತ್ತು. ಅವರು ಸಾಮಾಜಿಕ ಕ್ರಾಂತಿಯ ದಿಟ್ಟ ಪ್ರತೀಕವಾಗಿದ್ದರು ಎಂದರು.
ಕುದೇರು ಮಠದ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಹೊಸಮಠದ ಕಿರಿಯ ಶ್ರೀ ಸಿದ್ಧಬಸವ ಸ್ವಾಮೀಜಿ, ಪ್ರೊ.ಎಸ್.ಶಿವರಾಜಪ್ಪ, ಡಾ.ಶಾರದಾ, ಡಾ.ಪ್ರಸಾದ್‌ಮೂರ್ತಿ ಇತರರು ಇದ್ದರು. ವಿ.ಸಿದ್ದರಾಮಣ್ಣ ರಚನೆಯ ಶಿವಶರಣ ಹರಳಯ್ಯ ನಾಟಕವನ್ನು ವಾತ್ಸಲ್ಯ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net