ಮೈಸೂರಿನಲ್ಲಿ ಎಐಡಿಎಸ್‌ಒ ವತಿಯಿಂದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜನ್ಮ ದಿನಾಚರಣೆ

ಕುಕ್ಕರಹಳ್ಳಿ ಕೆರೆಯಲ್ಲಿ ಎಐಡಿಎಸ್‌ಒ ವತಿಯಿಂದ ಸುಭಾಷ್ ಚಂದ್ರ ಬೋಸ್  ಜನ್ಮದಿನ ಆಚರಿಸಲಾಯಿತು.
ಕುಕ್ಕರಹಳ್ಳಿ ಕೆರೆಯಲ್ಲಿ ಎಐಡಿಎಸ್‌ಒ ವತಿಯಿಂದ ಸುಭಾಷ್ ಚಂದ್ರ ಬೋಸ್ ಜನ್ಮದಿನ ಆಚರಿಸಲಾಯಿತು.
Published on
ಮೈಸೂರು: ಎಐಡಿಎಸ್‌ಒ ವತಿಯಿಂದ ಸ್ವಾತಂತ್ರೃ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಶುಕ್ರವಾರ ನಗರದ ಓವಲ್ ಮೈದಾನ, ಕುಕ್ಕರಹಳ್ಳಿ ಉದ್ಯಾನ, ಜೆಪಿ ನಗರ ಉದ್ಯಾನ, ಯುವರಾಜ ಕಾಲೇಜು ಹಾಗೂ ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು.
ಈ ಸಂದರ್ಭ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ನಿತಿನ್ ಮಾತನಾಡಿ, ‘ನಾನು ಲಕ್ಷಾಂತರ ಭಾರತೀಯರ ಪರವಾಗಿ ನಿಲ್ಲುತ್ತೇನೆ ಮತ್ತು ವಿಮೋಚನೆಗಾಗಿ ನನ್ನ ಪ್ರಾಣವನ್ನೇ ಅರ್ಪಿಸುತ್ತೇನೆ. ಸತ್ಯಕ್ಕೆ ಬೆಲೆಯಿದ್ದರೆ, ಈ ದೇಶದ ಜನರು ಎಂದಾದರೂ ಒಂದು ದಿನ ನನ್ನ ಹೃದಯದ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ’ ಎಂದು ಸುಭಾಷ್‌ಚಂದ್ರ ಬೋಸ್ ಕರೆ ನೀಡಿದ್ದರು. ದೇಶಕೋಸ್ಕರ ತಮ್ಮ ಪ್ರಾಣವನ್ನೇ ಅರ್ಪಿಸಿದ ಅವರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ರಾಜಕೀಯದಿಂದ ದೂರವಿರಬೇಕು ಎಂಬ ವಿಚಾರವನ್ನು ಬ್ರಿಟಿಷರು ಅಂದು ಕುತಂತ್ರದಿಂದ ಪ್ರಚಾರ ಮಾಡುತ್ತಿದ್ದರು. ಇದನ್ನು ವಿರೋಧಿಸಿದ ಸುಭಾಷ್‌ಚಂದ್ರ ಬೋಸ್, ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚಿಸುವುದನ್ನು ರಾಜಕೀಯ ಎಂದು ಕರೆಯುವುದಾದರೆ, ಮಾತೃಭೂಮಿಯ ಸ್ಥಿತಿಯನ್ನು ಸುಧಾರಿಸುವ ಪ್ರಯತ್ನಗಳನ್ನು ರಾಜಕೀಯ ಎಂದು ಕರೆಯುವುದಾದರೆ, ವಿದ್ಯಾರ್ಥಿಗಳಾಗಲಿ ಅಥವಾ ಶಿಕ್ಷಕರಾಗಲಿ ರಾಜಕೀಯಕ್ಕೆ ಸೇರುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಹೇಳಿದರು.
ಧಾರ್ಮಿಕ ಮತಾಂಧರನ್ನು ನೇತಾಜಿ ತೀವ್ರವಾಗಿ ವಿರೋಧಿಸಿದ್ದರು. ‘ಹಿಂದುಗಳು ಮತ್ತು ಮುಸ್ಲಿಮರ ಹಿತಾಸಕ್ತಿಗಳು ಒಂದೇ ಅಲ್ಲ ಎಂದು ಹೇಳುವವರು ವಾಸ್ತವವಾಗಿ ಸತ್ಯವನ್ನು ಹೇಳುತ್ತಿಲ್ಲ. ಹಸಿವು, ನಿರುದ್ಯೋಗ, ಅನಕ್ಷರತೆ... ಈ ಪ್ರಶ್ನೆಗಳ ಮೇಲೆ ಹಿಂದುಗಳು ಮತ್ತು ಮುಸ್ಲಿಮರ ಹಿತಾಸಕ್ತಿಗಳು ಒಂದೇ ಆಗಿವೆ’ ಎಂಬುದು ನೇತಾಜಿ ಅವರ ಅಭಿಪ್ರಾಯವಾಗಿತ್ತು ಎಂದರು.
ದೇಶಕ್ಕೆ ಸ್ವಾತಂತ್ರೃ ದೊರೆತು ಏಳು ದಶಕಗಳು ಕಳೆದರೂ ಪ್ರತಿದಿನ 4,000ಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ. ಶೇ.60 ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಶಿಕ್ಷಣದ ವ್ಯಾಪಾರೀಕರಣದಿಂದಾಗಿ ಶೇ.85 ಯುವಜನರು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶೇ.10 ಭಾರತೀಯರು ದೇಶದ ಶೇ.58 ಸಂಪತ್ತನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಜನರು ಜಾಗೃತರಾಗಿ ನೇತಾಜಿಯವರ ನಿಜವಾದ ಉತ್ತರಾಧಿಕಾರಿಗಳಾಗಿ ಶೋಷಣಾ ವ್ಯವಸ್ಥೆಯನ್ನು ಕೊನೆಗೊಳಿಸಲು ಮತ್ತು ನೇತಾಜಿ ಕನಸಿನ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಹೇಮಾ, ಚಂದ್ರಿಕಾ, ಚಂದನ, ದಿಶಾ, ಅಂಜಲಿ, ಅಭಿಷೇಕ್ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net