ವೈದ್ಯಕೀಯ ಕ್ಷೇತ್ರದಲ್ಲಿ ಎಐ ಅತ್ಯಂತ ಉಪಯುಕ್ತ:ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅಭಿಪ್ರಾಯ
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪಿ.ಜಿ.ಆರ್.ಸಿಂಧ್ಯಾ, ಡಾ.ಬಿ.ಸುರೇಶ್, ಡಾ. ಸಿ.ಜಿ.ಬೆಟಸೂರಮಠ, ಡಾ.ಎಚ್. ಬಸವನಗೌಡಪ್ಪ, ಡಾ. ವಿಕ್ರಮ್ ಪಾಟೀಲ್, ಡಾ.ಮಂಜುನಾಥ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವೈದ್ಯಕೀಯ ಜ್ಞಾನ ಮತ್ತು ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿದ್ದು, ಆರೋಗ್ಯ ಕ್ಷೇತ್ರದ ವೃತ್ತಿಪರರು ಕಾಲಕಾಲಕ್ಕೆ ಹೊಸ ಕೌಶಲಗಳನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ
ಎಐ ಮಾದರಿಗಳು ಆಸ್ಪತ್ರೆಯ ಕೆಲಸಗಳನ್ನು ಸುಲಭಗೊಳಿಸಿದರೂ, ಅಂತಿಮ ವೈದ್ಯಕೀಯ ನಿರ್ಧಾರ ಮತ್ತು ರೋಗಿಯ ಕಾಳಜಿ ಯಾವಾಗಲೂ ವೈದ್ಯರ ಕೈಯಲ್ಲೇ ಇರಬೇಕು
ಮೈಸೂರು:
ಇತ್ತೀಚಿನ ದಿನಗಳಲ್ಲಿ ಆಧುನೀಕ ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯು (ಎಐ) ಅತ್ಯಂತ ಉಪಯುಕ್ತ ಹಾಗೂ ಅನಿವಾರ್ಯವಾಗಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (ಜೆಎಸ್‌ಎಸ್ ಎಎಚ್‌ಇಆರ್) ಕೌಶಲಾಭಿವೃದ್ಧಿ ವಿಭಾಗದಿಂದ ನಗರದ ಬನ್ನಿಮಂಟಪದಲ್ಲಿರುವ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಆರೋಗ್ಯ ಕ್ಷೇತ್ರದಲ್ಲಿ ಎಐ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ದೂರದರ್ಶಿತ್ವ ಮತ್ತು ನಾಯಕತ್ವದಿಂದ ಹಲವು ಮಹತ್ವದ ಕಾರ್ಯಗಳು ನಡೆಯುತ್ತಿವೆ. ಧಾರ್ಮಿಕತೆ ಜತೆಗೆ ಅಕ್ಷರ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿಯೂ ಸಮಾಜಕ್ಕೆ ಅವರ ಕೊಡುಗೆ ಶ್ಲಾಘನೀಯ ಎಂದರು.
ಭಾರತೀಯ ವೈದ್ಯಕೀಯ ವ್ಯವಸ್ಥೆಗೆ ಸೂಕ್ತವಾದ ಇಂತಹ ವಿಶೇಷ ಕೋರ್ಸನ್ನು ಆರಂಭಿಸಿ, ಗೂಗಲ್ ಹಾಗೂ ಎಲ್ ಆ್ಯಂಡ್ ಟಿ ಸಂಸ್ಥೆಗಳ ಸಹಯೋಗದೊಂದಿಗೆ ವೈದ್ಯರು ತಮ್ಮ ಸ್ವಂತ ಆಸ್ಪತ್ರೆಗಳಿಗೆ ಎಐ ಮಾದರಿಗಳನ್ನು ರೂಪಿಸಿಕೊಳ್ಳಲು ತರಬೇತಿ ನೀಡುವ ಕಾರ್ಯ ಉಪಯುಕ್ತ ಎಂದು ಹೇಳಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕಲಿಕೆಗೆ ಕೊನೆಯಿಲ್ಲ, ಅದು ನಿರಂತರ ಪ್ರಕ್ರಿಯೆ. ವೈದ್ಯಕೀಯ ಜ್ಞಾನ ಮತ್ತು ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿದ್ದು, ಆರೋಗ್ಯ ಕ್ಷೇತ್ರದ ವೃತ್ತಿಪರರು ಕಾಲಕಾಲಕ್ಕೆ ಹೊಸ ಕೌಶಲಗಳನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ ಎಂದು ಸಲಹೆ ನೀಡಿದರು.
ಎಐ ಮಾದರಿಗಳು ಆಸ್ಪತ್ರೆಯ ಕೆಲಸಗಳನ್ನು ಸುಲಭಗೊಳಿಸಿದರೂ, ಅಂತಿಮ ವೈದ್ಯಕೀಯ ನಿರ್ಧಾರ ಮತ್ತು ರೋಗಿಯ ಕಾಳಜಿ ಯಾವಾಗಲೂ ವೈದ್ಯರ ಕೈಯಲ್ಲೇ ಇರಬೇಕು. ಸೂಕ್ತ ಉಪಚಾರ, ಆರೈಕೆ ರೋಗಿಯ ಮನಸ್ಸು ಪ್ರಶಾಂತವಾಗಿ ಬೇಗ ಗುಣಮುಖವಾಗುವಂತೆ ಮಾಡಬೇಕು ಎಂದು ಹೇಳಿದರು.
ಕೋರ್ಸ್‌ನ ರೂಪುರೇಷೆ ನೀಡಿದ ಡಾ. ವಿಕ್ರಮ್ ಪಾಟೀಲ್ ಅವರು, ವೆಲ್ಲೂರು, ವಾರಂಗಲ್ ಸೇರಿದಂತೆ ದೇಶದ ಪ್ರಮುಖ ವೈದ್ಯಕೀಯ ಕೇಂದ್ರಗಳಿಂದ 300ಕ್ಕೂ ಹೆಚ್ಚು ವೃತ್ತಿಪರರು ಈ ಕೋರ್ಸ್‌ಗೆ ನೋಂದಾಯಿಸಿಕೊಂಡಿದ್ದರು. ಈ ತಂಡದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ವಾಕ್ ಮತ್ತು ಶ್ರವಣ, ನರ್ಸಿಂಗ್, ಫಿಜಿಯೋಥೆರಪಿ, ಫಾರ್ಮಸಿ, ಇಂಜಿನಿಯರಿಂಗ್ ಮತ್ತು ಆಸ್ಪತ್ರೆ ಆಡಳಿತ ಕ್ಷೇತ್ರದ 150ಕ್ಕೂ ತಜ್ಞರು ಮೊದಲ ತಂಡವಾಗಿ ಪ್ರಮಾಣ ಪತ್ರ ಸ್ವೀಕರಿಸಿದರು.
ಕಾರ್ಯನಿರತ ವೈದ್ಯರಿಗೆ ಅನುಕೂಲವಾಗುವಂತೆ ಈ ಕೋರ್ಸನ್ನು ಎಲ್ಲಿದ್ದರೂ, ಯಾವಾಗ ಬೇಕಾದರೂ ಕಲಿಯುವ ಆನ್‌ಲೈನ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅಗತ್ಯ ಇರುವವರು ಇದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಸಾಗರದ ವೈದ್ಯ ಡಾ. ಅರುಣ್ ಕುಮಾರ್ ಮಾತನಾಡಿ, ಈ ನವ್ಯ ಕಲಿಕಾ ಮಾದರಿಯು ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ತಜ್ಞ ವೈದ್ಯರಿಗೂ ಅತ್ಯಂತ ಪ್ರಾಯೋಗಿಕ ಹಾಗೂ ಉಪಯುಕ್ತವಾಗಿದೆ ಎಂದು ತಿಳಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ.ಬೆಟಸೂರಮಠ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಎಎಚ್‌ಇಆರ್ ಪ್ರೊ-ಚಾನ್ಸಲರ್ ಡಾ. ಬಿ.ಸುರೇಶ್, ಕುಲಪತಿ ಡಾ.ಎಚ್.ಬಸವನಗೌಡಪ್ಪ, ಕುಲಸಚಿವ ಡಾ. ಮಂಜುನಾಥ್ ಇತರರು ಇದ್ದರು.