ಮೈಸೂರಿನಲ್ಲಿ 19ರಿಂದ 27ರವರೆಗೆ ಅಗ್ನಿವೀರ್ ರ್ಯಾಲಿ: ಕರ್ನಲ್ ವಿವೇಕ್ ಜಮಾದಾರ್ ಮಾಹಿತಿ

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಅಗ್ನಿವೀರ್ ರ‌್ಯಾಲಿ ಸಂಬಂಧ ಕರ್ನಲ್ ವಿವೇಕ್ ಜಮಾದಾರ್ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಮೇಜರ್ ಕಪಿಲ್ ಕುಮಾರ್ ಶರ್ಮ, ಸುಬೇದಾರ್ ಮೇಜರ್ ಶಾಮ್ ಸಿಂಗ್, ಮಂಜುನಾಥ್ ರೆಡ್ಡಿ, ಡಾ.ಗೋಪಿನಾಥ್, ಭಾಸ್ಕರ್ ಇತರರು ಇದ್ದರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಅಗ್ನಿವೀರ್ ರ‌್ಯಾಲಿ ಸಂಬಂಧ ಕರ್ನಲ್ ವಿವೇಕ್ ಜಮಾದಾರ್ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಮೇಜರ್ ಕಪಿಲ್ ಕುಮಾರ್ ಶರ್ಮ, ಸುಬೇದಾರ್ ಮೇಜರ್ ಶಾಮ್ ಸಿಂಗ್, ಮಂಜುನಾಥ್ ರೆಡ್ಡಿ, ಡಾ.ಗೋಪಿನಾಥ್, ಭಾಸ್ಕರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎರಡನೇ ಹಂತದ (ಸ್ಕ್ರೀನಿಂಗ್ ಪರೀಕ್ಷೆ) ಅಗ್ನಿವೀರ್ ರ‌್ಯಾಲಿ ಪರೀಕ್ಷೆ ಏ.19 ರಿಂದ ನಡೆಯಲಿದೆ
  • ರ್ಯಾಲಿ 6,043 ಪುರುಷ ಹಾಗೂ 192 ಮಹಿಳಾ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ
ಮೈಸೂರು:ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಏ.19ರಿಂದ 27 ರವರೆಗೆ ಭಾರತೀಯ ಸೇನೆಯ ಅಗ್ನಿವೀರ್ ರ‌್ಯಾಲಿ ನಡೆಯಲಿದ್ದು , ಸುಮಾರು 6,235 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದು ಬೆಂಗಳೂರಿನ ಭಾರತೀಯ ಸೇನೆ ನೇಮಕಾತಿ ಅಧಿಕಾರಿ ಕರ್ನಲ್ ವಿವೇಕ್ ಜಮಾದಾರ್ ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಿದ್ಧತೆ ಕುರಿತ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಅಗ್ನಿವೀರ್ ರ‌್ಯಾಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಳೆದ ಸಾಲಿನ ಜೂನ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿದ್ದು, ಎರಡನೇ ಹಂತದ (ಸ್ಕ್ರೀನಿಂಗ್ ಪರೀಕ್ಷೆ) ಅಗ್ನಿವೀರ್ ರ‌್ಯಾಲಿ ಪರೀಕ್ಷೆ ಏ.19 ರಿಂದ ನಡೆಯಲಿದೆ ಎಂದರು.
ರ‌್ಯಾಲಿಯಲ್ಲಿ 6,043 ಪುರುಷ ಹಾಗೂ 192 ಮಹಿಳಾ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಪ್ರತಿ ದಿನ 800 ಅಭ್ಯರ್ಥಿಗಳ ದೈಹಿಕ ಸೇರಿದಂತೆ ಇತರ ಪರೀಕ್ಷೆ ನಡೆಯಲಿದೆ. ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಏ.27ರಂದು ಮಹಿಳಾ ಅಭ್ಯರ್ಥಿಗಳ ರ‌್ಯಾಲಿ ನಡೆಯಲಿದೆ ಎಂದರು.
ರ‌್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ನಂಜರಾಜ ಬಹದ್ದೂರ್ ಛತ್ರದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ರ‌್ಯಾಲಿಯಲ್ಲಿ ಭಾಗವಹಿಸಿ ದೈಹಿಕ ಪರೀಕ್ಷೆಯಲ್ಲಿ ಆಯ್ಕೆಯಾದವರು ಮಾತ್ರ ವೈದ್ಯಕೀಯ ಪರೀಕ್ಷೆಗೆ ಹಾಜರಾಗುತ್ತಾರೆ. ಒಬ್ಬ ಅಭ್ಯರ್ಥಿಯು ಒಂದರಿಂದ ಎರಡು ದಿನಗಳು ಮಾತ್ರ ವಾಸ್ತವ್ಯ ಮಾಡಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ನಡೆಯಲಿರುವ ರ‌್ಯಾಲಿ ವೀಕ್ಷಿಸಲು ಪ್ರೌಢಶಾಲೆಯ ವಿದ್ಯಾರ್ಥಿಗಳು, ಎನ್‌ಸಿಸಿ , ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವುದರಿಂದ ವಿದ್ಯಾರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯ ಬಗ್ಗೆ ತಿಳಿವಳಿಕೆ ಹಾಗೂ ಸೇನೆ ಸೇರುವ ಬಗ್ಗೆ ಆಸಕ್ತಿ ಮೂಡುತ್ತದೆ. ವಿದ್ಯಾರ್ಥಿಗಳು ಭಾಗವಹಿಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ತಿಳಿಸಿದರು.
ರ‌್ಯಾಲಿ ನಡೆಯುವ ದಿನದಂದು ಆರೋಗ್ಯ ಇಲಾಖೆಯಿಂದ ಆಂಬುಲೆನ್ಸ್, ಅಗತ್ಯ ವೈದ್ಯರು, ಸಿಬ್ಬಂದಿ ಹಾಗೂ ಔಷಧಗಳ ವ್ಯವಸ್ಥೆ ಮಾಡಿಕೊಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕೋರಿದರು.
ಅಲ್ಲದೇ ಮೈಸೂರು ಮಹಾನಗರ ಪಾಲಿಕೆಯಿಂದ ಕುಡಿಯುವ ನೀರು, ತಾತ್ಕಾಲಿಕ ಶೌಚಗೃಹ, ಸ್ವಚ್ಛತಾ ವ್ಯವಸ್ಥೆ, ಪೊಲೀಸ್ ಇಲಾಖೆಯಿಂದ ಬಂದೋಬಸ್ತ್, ಸಿಸಿಟಿವಿ ವ್ಯವಸ್ಥೆ , ನಿರ್ಮಿತಿ ಕೇಂದ್ರದಿಂದ ಅಗತ್ಯ ಟೆಂಟ್‌ಗಳು ಇನ್ನಿತರ ಅಗತ್ಯ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದರು.
ಭಾರತೀಯ ಸೇನೆಯಲ್ಲಿ 2030ನೇ ಸಾಲಿನವರೆಗೆ ಹೆಚ್ಚಿನ ನೇಮಕಾತಿ ಪ್ರಕ್ರಿಯೆ ನಡೆಯುವುದರಿಂದ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಕೋರಿದರು.
ಬೆಂಗಳೂರು ಭಾರತೀಯ ಸೇನೆಯ ನೇಮಕಾತಿ ವಿಭಾಗದ ವೈದ್ಯಕೀಯ ಅಧಿಕಾರಿ ಮೇಜರ್ ಕಪಿಲ್ ಕುಮಾರ್ ಶರ್ಮ, ಉಪ ನೇಮಕಾತಿ ಅಧಿಕಾರಿ ಸುಬೇದಾರ್ ಮೇಜರ್ ಶಾಮ್ ಸಿಂಗ್, ಸೈನಿಕ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ರೆಡ್ಡಿ, ಆರೋಗ್ಯ ಇಲಾಖೆಯ ಡಾ.ಗೋಪಿನಾಥ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ಇನ್ನಿತರ ಅಧಿಕಾರಿಗಳು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net