ಬೀದಿ ನಾಯಿಮರಿಗಳಿಗೆ ದತ್ತು ಭಾಗ್ಯ

ಮೈಸೂರಿನಲ್ಲಿ ಕಂಡು ಬಂದ ಬೀದಿನಾಯಿ ಮರಿ
ಮೈಸೂರಿನಲ್ಲಿ ಕಂಡು ಬಂದ ಬೀದಿನಾಯಿ ಮರಿ
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ನಗರ ಪಾಲಿಕೆಯಿಂದ ಯೋಜನೆ
  • ಶ್ವಾನಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ನಗರ ಪಾಲಿಕೆ ಬೀದಿ ನಾಯಿಗಳ ಸಂತತಿ ಹೆಚ್ಚಾಗದಂತೆ ತಡೆಯಲು ಸಂತಾನ ಶಕ್ತಿಹರಣ ಚಿಕಿತ್ಸೆ ನಡೆಸುತ್ತಿರುವ ಜತೆಗೆ ಇದೀಗ ನಾಯಿಮರಿಗಳನ್ನು ದತ್ತು ನೀಡುವ ಕಾರ್ಯಕ್ಕೂ ಮುಂದಾಗಿದೆ.
ಬೀದಿನಾಯಿಗಳ ಸಂತಾನ ಶಕ್ತಿಹರಣ ಚಿಕಿತ್ಸೆ ಹಾಗೂ ನಾಯಿ ಮರಿಗಳ ದತ್ತು ಯೋಜನೆ ಮೂಲಕ ನಗರದಲ್ಲಿ ಬೀದಿನಾಯಿಗಳ ಸಂತತಿ ಗಣನೀಯ ಪ್ರಮಾಣದಲ್ಲಿ ವೃದ್ಧಿಸದಂತೆ ತಡೆಯುವುದು ಒಂದೆಡೆಯಾದರೆ ಬೀದಿನಾಯಿಗಳ ಮರಿಗಳಿಗೂ ಉತ್ತಮ ಜೀವನ ದೊರೆಯಲಿದೆ.
ಡಿ.15ಕ್ಕೆ ದತ್ತು ಸ್ವೀಕಾರ: ನಗರ ಪಾಲಿಕೆಯು ಪುರಭವನ ಆವರಣದಲ್ಲಿ ಡಿ.15 ರಂದು ಮಧ್ಯಾಹ್ನ 12ಕ್ಕೆ ಬೀದಿ ನಾಯಿಗಳ ಮರಿಗಳನ್ನು ದತ್ತು ನೀಡುವ ಕಾರ್ಯ ಕೈಗೊಂಡಿದೆ. ಪ್ರಾಣಿಪ್ರಿಯರು, ಪ್ರಾಣಿಗಳ ಸಂರಕ್ಷಣೆಯ ಸಂಕಲ್ಪ ಹೊಂದಿರುವವರು, ಪ್ರಾಣಿಗಳ ಮೇಲೆ ದಯೆ ಇರುವವರು ನಾಯಿ ಮರಿಗಳನ್ನು ದತ್ತು ಪಡೆಯಬಹುದು. ನಗರ ಪಾಲಿಕೆ ಪ್ರಥಮ ಬಾರಿಗೆ ಕೈಗೊಂಡಿರುವ ದತ್ತು ಯೋಜನೆಗೆ ನಗರದ ನಾಗರಿಕರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದುನ್ನು ಕಾದು ನೋಡಬೇಕಾಗಿದೆ. ಇದರ ಜತೆಗೆ ಆಶ್ರಯ ತಾಣದಲ್ಲಿರುವ ಬೀದಿ ನಾಯಿಗಳಿಗೆ ಆಹಾರ ಪೂರೈಸಲು ಇಚ್ಛಿಸುವವರು ಪಾಲಿಕೆಯನ್ನು ಸಂಪರ್ಕಿಸಬಹುದು.

ಸಂತಾನಶಕ್ತಿ ಹರಣ ಚಿಕಿತ್ಸೆ

ನಗರದಲ್ಲಿ ಕಳೆದ ಒಂದು ದಶಕದಿಂದ ನಿರಂತರವಾಗಿ ಬೀದಿ ನಾಯಿಗಳ ಸಂತಾನ ಶಕ್ತಿಹರಣ ಚಿಕಿತ್ಸೆ ಕೈಗೊಂಡರೂ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿಲ್ಲ. ನಗರದ ಹಲವಾರು ಬೀದಿಗಳಲ್ಲಿ ಪ್ರತಿ ವರ್ಷ ಸಾಕಷ್ಟು ಸಂಖ್ಯೆಯಲ್ಲಿ ಬೀದಿ ನಾಯಿಗಳು ಮರಿಗಳಿಗೆ ಜನ್ಮ ನೀಡುತ್ತಿವೆ. ಎಲ್ಲ ನಾಯಿಗಳಿಗೂ ಸಂತಾನ ಶಕ್ತಿಹರಣ ಚಿಕಿತ್ಸೆ ಕೈಗೊಳ್ಳಲು ಸಾಧ್ಯವಾಗದೆ ಇರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಯಾವ ವರ್ಷ ಎಷ್ಟು ಚಿಕಿತ್ಸೆ?

ನಗರದಲ್ಲಿ 2021 ರಿಂದ 25ರವರೆಗೆ ನಗರದಲ್ಲಿ ಒಟ್ಟು 15,508 ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ನೀಡಲಾಗಿದೆ. 2021-22ರಲ್ಲಿ 4533 ಬೀದಿನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ನೀಡಲಾಗಿದೆ. ಅದೇ ರೀತಿ 2022-23 ರಲ್ಲಿ 4586 ನಾಯಿಗಳಿಗೆ, 2023-24ರಲ್ಲಿ 3071 ನಾಯಿಗಳಿಗೆ, 2024-25ರಲ್ಲಿ 1438 ನಾಯಿಗಳಿಗೆ, 2025-26ನೇ ಸಾಲಿನಲ್ಲಿ 1880 ನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ನೀಡಲಾಗಿದೆ.
ವಿವಿಧ ಬಡಾವಣೆಗಳು, ಮಾರುಕಟ್ಟೆ, ಉದ್ಯಾನಗಳಲ್ಲಿ ಇರುವ ಬೀದಿ ನಾಯಿಗಳನ್ನು ಗುರುತಿಸಿ ಅವುಗಳನ್ನು ಸೆರೆ ಹಿಡಿದು ನಂತರ ಸಂತಾನ ಶಕ್ತಿಹರಣ ಚಿಕಿತ್ಸೆ ನಡೆಸಿ ನಂತರ ವ್ಯಾಕ್ಸಿನ್ ನೀಡಿ ಸೆರೆ ಹಿಡಿದ ಜಾಗದಲ್ಲಿಯೇ ಬಿಡಲಾಗುತ್ತದೆ. ಸೆರೆ ಹಿಡಿದ ನಾಯಿಗಳನ್ನು ಬೇರೆ ಜಾಗದಲ್ಲಿ ಬಿಟ್ಟರೆ ನಾಯಿಗಳ ನಡುವೆ ಸಂಘರ್ಷ ಉಂಟಾಗುವ ಹಿನ್ನೆಲೆಯಲ್ಲಿ ಸೆರೆ ಹಿಡಿದ ಜಾಗದಲ್ಲಿಯೇ ಬಿಡುಗಡೆ ಮಾಡಲಾಗುತ್ತಿದೆ. ಒಂದು ಬಾರಿ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿದ ಬೀದಿ ನಾಯಿಗೆ ಮತ್ತೆ ಚಿಕಿತ್ಸೆ ಮಾಡುವುದನ್ನು ತಪ್ಪಿಸಲು ಚಿಕಿತ್ಸೆ ಪೂರ್ಣವಾದ ನಾಯಿಗಳ ಒಂದು ಕಿವಿಯನ್ನು ವಿ ಆಕಾರದಲ್ಲಿ ಕತ್ತರಿಸಲಾಗುತ್ತದೆ. ಹೀಗಾಗಿ ಚಿಕಿತ್ಸೆ ಪೂರ್ಣಗೊಂಡ ನಾಯಿಗಳನ್ನು ಸುಲಭವಾಗಿ ಗುರುತಿಸಬಹುದು.
2011ರಲ್ಲಿ ನಡೆದ ಸಮೀಕ್ಷೆಯಲ್ಲಿ ನಗರದಲ್ಲಿ ಒಟ್ಟು 26 ಸಾವಿರ ಬೀದಿ ನಾಯಿಗಳು ಕಂಡು ಬಂದಿದ್ದವು. ಇದೀಗ ಈ ಸಂಖ್ಯೆಯು 53,000ಕ್ಕೆ ಏರಿಕೆಯಾಗಿದೆ. ಬೀದಿ ನಾಯಿಗಳು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಇರುವ ಹಿನ್ನೆಲೆಯಲ್ಲಿ ಎಲ್ಲ ನಾಯಿಗಳಿಗೂ ಏಕ ಕಾಲದಲ್ಲಿ ಸಂತಾನ ಶಕ್ತಿಹರಣ ಚಿಕಿತ್ಸೆ ಕೈಗೊಳ್ಳಲು ಸಾಧ್ಯವಿಲ್ಲ. ಹಂತ ಹಂತವಾಗಿ ಚಿಕಿತ್ಸೆ ಕೈಗೊಳ್ಳಲಾಗುತ್ತಿದ್ದು, ಮತ್ತೊಂದೆಡೆ ಚಿಕಿತ್ಸೆಗೆ ಒಳಗಾಗದ ನಾಯಿಗಳು ಮರಿಗಳಿಗೆ ಜನ್ಮ ನೀಡುತ್ತಲೇ ಇವೆ. ಬೀದಿ ನಾಯಿಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಬಡಾವಣೆಗಳ ನಿವಾಸಿಗಳು, ನಗರದ ನಾಗರಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ನಾಯಿಗಳು ಜನರ ಮೇಲೆ ದಾಳಿ ನಡೆಸುತ್ತಿದ್ದು, ಕೆಲವು ನಾಯಿಗಳು ವಾಹನಗಳನ್ನು ಕಂಡರೆ ಅಟ್ಟಾಡಿಸುವ ಗುಣವನ್ನು ಹೊಂದಿವೆ. ಸಾಕಷ್ಟು ಜನರು ನಾಯಿಗಳ ದಾಳಿಯಿಂದ ಗಾಯಗೊಂಡಿದ್ದಾರೆ.
ನಗರದಲ್ಲಿ ಬೀದಿ ನಾಯಿಗಳ ಸಂತತಿ ಹೆಚ್ಚುವುದನ್ನು ತಡೆಯುವ ಉದ್ದೇಶದಿಂದ ನಗರ ಪಾಲಿಕೆಯು ಸಂತಾನ ಶಕ್ತಿಹರಣ ಚಿಕಿತ್ಸೆಯನ್ನು ನಿರಂತರವಾಗಿ ನಡೆಸುತ್ತಿದೆ. ನಗರದ ವಿವಿಧ ಕಡೆಗಳಲ್ಲಿರುವ ಬೀದಿ ನಾಯಿಗಳನ್ನು ಸೆರೆ ಹಿಡಿದು ಚಿಕಿತ್ಸೆ ನಡೆಸಿ ನಂತರ ಅವುಗಳು ಇರುವ ಜಾಗದಲ್ಲಿಯೇ ಬಿಡಲಾಗುವುದು. ಇದರಿಂದ ನಾಯಿಗಳ ಸಂತತಿ ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುವುದು ತಪ್ಪುತ್ತದೆ. ಇದರ ಜತೆಗೆ ಇದೀಗ ನಾಯಿ ಮರಿಗಳನ್ನು ದತ್ತು ನೀಡುವ ಯೋಜನೆಯನ್ನು ಸಹ ಜಾರಿಗೆ ತರಲಾಗಿದ್ದು, ಪ್ರಾಣಿಗಳ ಬಗ್ಗೆ ಪ್ರೀತಿ ಹೊಂದಿರುವ ನಗರದ ನಾಗರಿಕರು ನಾಯಿ ಮರಿಗಳನ್ನು ದತ್ತು ಪಡೆಯಲು ಮುಂದೆ ಬರಬಹುದು.
ಡಾ.ವೆಂಕಟೇಶ್, ಪಾಲಿಕೆ ಆರೋಗ್ಯಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net