ಮಾಲಿನ್ಯ ನಿಯಂತ್ರಣದಲ್ಲಿ ವಿಫಲರಾದ ಜಿಲ್ಲಾಧಿಕಾರಿ, ಜಿಪಂ ಸಿಇಒ, ತಾಪಂ ಇಒ, ತಹಸೀಲ್ದಾರರ ವಿರುದ್ಧ ಎಫ್‌ಐಆರ್ ದಾಖಲಿಸಲು ತೀರ್ಮಾನ
ಮೈಸೂರು:
ಕಪಿಲಾ ನದಿಗೆ ಸರಗೂರು, ಎಚ್.ಡಿ.ಕೋಟೆ ಪಟ್ಟಣದ ತ್ಯಾಜ್ಯ ನೇರವಾಗಿ ಸೇರುತ್ತಿದೆ. ಹಾಗಾಗಿ ಕಲುಷಿತ ನೀರನ್ನೇ ಜನ ಕುಡಿಯುವ ಸ್ಥಿತಿ ಎದುರಾಗಿದೆ ಎಂದು ಸೇವ್ ಕಬಿನಿ ಸಂಘಟನೆ ಕಳವಳ ವ್ಯಕ್ತಪಡಿಸಿದೆ.
ಈ ಸಮಸ್ಯೆ ಕುರಿತು ಆ.15ರಂದು ಚಾಮರಾಜನಗರದಲ್ಲಿ ಹಮ್ಮಿಕೊಂಡಿರುವ ಸ್ವಾತಂತ್ರೃ ದಿನದ ಧ್ವಜಾರೋಹಣ ಸಂದರ್ಭ ಸಚಿವರಿಗೆ ಅದೇ ನೀರು ಕುಡಿಯುವಂತೆ ಒತ್ತಾಯಿಸಿ ಪ್ರತಿಭಟಿಸಲಾಗುವುದು. ಮಾಲಿನ್ಯ ನಿಯಂತ್ರಣದಲ್ಲಿ ವಿಫಲರಾದ ಜಿಲ್ಲಾಧಿಕಾರಿ, ಜಿಪಂ ಸಿಇಒ, ತಾಪಂ ಇಒ, ತಹಸೀಲ್ದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಮುಖಂಡ, ವಕೀಲ ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
.
ಕಪಿಲಾ ನದಿಗೆ ಚರಂಡಿ, ಮಲತ್ಯಾಜ್ಯ ಸೇರುವುದರಿಂದ ನೀರು ಮಲಿನವಾಗುತ್ತಿದೆ. ಈ ಬಗ್ಗೆ ಮಾಹಿತಿ ತಿಳಿಯಲು ನಮ್ಮ ತಂಡವು ನೀರನ್ನು ಸಂಗ್ರಹಿಸಿ ರಾಷ್ಟ್ರೀಯ ಪ್ರಯೋಗಾಲಯಕ್ಕೆ ಕಳುಹಿಸಿತ್ತು.
ಅದರ ವರದಿಯಂತೆ ನೀರಿನಲ್ಲಿ ವಿಷಯುಕ್ತ ಅಲ್ಯುಮಿನಿಯಂ ಅಂಶ, ಬ್ಯಾಕ್ಟೀರಿಯಾಗಳು ಗರಿಷ್ಠ ಮಟ್ಟದಲ್ಲಿರುವುದು ದೃಢಪಟ್ಟಿದೆ. ಇದು ನಾಗರಹೊಳೆ ಹುಲಿ ಸಂರಕ್ಷಿತ ವನ್ಯಜೀವಿಗಳಿಗಳಲ್ಲದೆ, ಜಲಚರಗಳು ಹಾಗೂ ಈ ನೀರು ಸೇವಿಸುವ ಜನ, ಜಾನುವಾರುಗಳಿಗೂ ಅನಾರೋಗ್ಯ ತಂದೊಡ್ಡಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಸ್ಕರಿಸುತ್ತಿಲ್ಲ:
ಎಚ್.ಡಿ.ಕೋಟೆ, ಸರಗೂರು ಪಟ್ಟಣ ಮತ್ತು ನದಿ ಪಾತ್ರದ ಗ್ರಾಮಗಳ ಚರಂಡಿ, ಕಲುಷಿತ ನೀರನ್ನು ಸಂಸ್ಕರಿಸದೇ ನದಿಗೆ ಬಿಡಲಾಗುತ್ತಿದೆ. ಎರಡೂ ಪಟ್ಟಣ ಪಂಚಾಯಿತಿಗಳು ಹಾಗೂ ಗ್ರಾಪಂಗಳು ನೀರಿನ ಸಂಸ್ಕರಣಾ ಕೆಲಸ ಸಮರ್ಪಕವಾಗಿ ಮಾಡುತ್ತಿಲ್ಲ. ಅಲ್ಲದೆ, ಜನಪ್ರತಿನಿಧಿಗಳೂ ಈ ಬಗ್ಗೆ ಗಮನ ಹರಿಸಿಲ್ಲ ಎಂದು ರವಿಕುಮಾರ್ ಕಿಡಿಕಾರಿದರು.
ನದಿ ನೀರಿನ ಮಾದರಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೂ ರವಾನಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಕೋರಲಾಗುವುದು.
ಜತೆಗೆ, ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಹಾಗೂ ಇನ್ನಿತರ ಪ್ರಮುಖರಿಗೂ ನೀರಿನ ಮಾದರಿ ರವಾನಿಸಿ ಅವರ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು. ಸಂಘದ ಮುಖಂಡರಾದ ಹೊನ್ನೂರು ಪ್ರಕಾಶ್, ಮಂಜುಕಿರಣ್, ಭಾನು ಮೋಹನ್, ಕುಮಾರಸ್ವಾಮಿ, ಡಿಪಿಕೆ ಪರಮೇಶ್, ಜಗದೀಶ್, ಮಧುಕೇಶ್ ಇದ್ದರು.