ಕುಲಕಸುಬನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಅಳವಡಿಸಿಕೊಳ್ಳಿ

ಹುಣಸೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಸುಜ್ಞಾನತೀರ್ಥ ಸ್ವಾಮೀಜಿ, ಎಚ್.ಪಿ.ಮಂಜುನಾಥ್, ಕೆ.ಎನ್.ಕುಮಾರ್, ಪವಿತ್ರಾ ಆಚಾರ್, ಕೆಂಡಗಣ್ಣ ವಿಶ್ವಕರ್ಮ, ಚಂದ್ರಶೇಖರ್ ಇತರರಿದ್ದರು.
ಹುಣಸೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಸುಜ್ಞಾನತೀರ್ಥ ಸ್ವಾಮೀಜಿ, ಎಚ್.ಪಿ.ಮಂಜುನಾಥ್, ಕೆ.ಎನ್.ಕುಮಾರ್, ಪವಿತ್ರಾ ಆಚಾರ್, ಕೆಂಡಗಣ್ಣ ವಿಶ್ವಕರ್ಮ, ಚಂದ್ರಶೇಖರ್ ಇತರರಿದ್ದರು.
Published on

ಹುಣಸೂರು: ವಿಶ್ವಕರ್ಮ ಸಮುದಾಯ ತಮ್ಮ ಕುಲಕಸುಬನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಅಳವಡಿಸಿಕೊಂಡು ಸಮಾಜದ ಸಮಷ್ಠಿಯೊಂದಿಗೆ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕೆಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಸಲಹೆ ನೀಡಿದರು.

ತಾಲೂಕು ವಿಶ್ವಕರ್ಮ ಸಮಾಜ ಸಂಘದ ವತಿಯಿಂದ ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೋತ್ಸವ, ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ, ತಾಲೂಕು ವಿಶ್ವಕರ್ಮ ಬ್ರಿಗೇಡ್ ಉದ್ಘಾಟನೆ, ವಿಶ್ವಕರ್ಮ ಅಭಿವೃದ್ಧಿ ಸಹಕಾರ ಸಂಘ ಮತ್ತು ವಿಶ್ವಕರ್ಮ ಮಹಿಳಾ ಘಟಕದ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಕರ್ಮ ಸಮಾಜ ಅತ್ಯಂತ ಪ್ರತಿಭಾನ್ವಿತ ಸಮುದಾಯವಾಗಿದ್ದು, ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ. ನಿಮ್ಮ ಕುಲಕಸುಬಿನಲ್ಲಿ ಆಧುನಿಕತೆಯನ್ನು ತಂದುಕೊಳ್ಳಿರಿ. ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ಅಪ್‌ಗ್ರೇಡ್ ಮಾಡಿಕೊಳ್ಳಿರಿ. ಶಿಕ್ಷಣ ಮತ್ತು ಸಂಘಟನೆಯಿಂದ ಮಾತ್ರ ಅಭಿವೃದ್ಧಿಯೊಂದಿಗೆ ರಾಜಕೀಯ ಅಧಿಕಾರವನ್ನು ಪಡೆಯಲೂ ಸಾಧ್ಯವೆಂದರು.
ಮಹಿಳಾ ಸಂಘಟನೆಗಳು ಮತ್ತು ಯುವ ಬ್ರಿಗೇಡ್ ಸಮುದಾಯ ಏಳಿಗೆಗೆ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಮಹಿಳಾ ಸಬಲೀಕರಣದಿಂದ ಕುಟುಂಬದ ಅಭಿವೃದ್ಧಿ ಸಾಧ್ಯ. ತಾಲೂಕಿನಲ್ಲಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲ ರೀತಿಯಲ್ಲಿ ಸಹಾಯ ನೀಡಲು ನಾನು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.
ಅಯೋಧ್ಯೆಯ ಬಾಲರಾಮನ ಶಿಲ್ಪ ತಯಾರಿಸಿದ ಮೈಸೂರಿನ ಖ್ಯಾತ ಯುವಶಿಲ್ಪಿ ಡಾ.ಅರುಣ್ ಯೋಗಿರಾಜ್ ಮಾತನಾಡಿ, ಭಾರತಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದೆ. ಇದೀಗ ನಮ್ಮ ಕುಲಕಸುಬನ್ನು ಉಳಿಸಿಕೊಂಡು ಸಶಕ್ತರಾಗಬೇಕಿದೆ. ನಮ್ಮ ನಡೆ ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿದೆ. ಕುಲಕಸುಬಿಗೆ ಗೌರವ ನೀಡುವುದರೊಂದಿಗೆ ಶಿಕ್ಷಣ ಮತ್ತು ಆಧುನಿಕ ಪ್ರಪಂಚಕ್ಕೆ ನಮ್ಮನ್ನು ತೆರೆದುಕೊಳ್ಳೋಣವೆಂದರು.
ಕಾಂಗ್ರೆಸ್ ಪಕ್ಷ(ಕೆಪಿಸಿಸಿ) ಒಬಿಸಿ ಘಠಕದ ರಾಜ್ಯ ಉಪಾಧ್ಯಕ್ಷೆ ಪವಿತ್ರಾ ಆಚಾರ್ ಮಾತನಾಡಿ, ದೇಶ ಕಟ್ಟುವಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆ ಅನನ್ಯವಾಗಿದ್ದರೂ ನಾವು ಇಂದಿಗೂ ಕೀಳರಿಮೆಯೊಂದಿಗೆ ಬದುಕುತ್ತಿದ್ದೇವೆ. ಇದು ಸಲ್ಲದು. ನಾವು ಯಾರಿಗೂ ಕಡಿಮೆಯಿಲ್ಲ. ನಾವು ಒಮ್ಮತದಿಂದ ಕಾರ್ಯ ನಿರ್ವಹಿಸೋಣ. ಮಹಿಳೆಯರು ಮನೆಯೊಂದಿಗೆ ಸಮಾಜದ ಏಳಿಗೆಗಾಗಿ ದುಡಿಯಬೇಕು. ಸರ್ಕಾರದ ಸವಲತ್ತು, ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕೆಂದು ಕಿವಿಮಾತು ಹೇಳಿದರು.
ಅರೇಮಾದನಹಳ್ಳಿಯ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಗುರು ಶಿವ ಸುಜ್ಞಾನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಕೆ.ಎನ್.ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್.ನಂದಕುಮಾರ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಸಿ.ಹುಚ್ಚಪ್ಪಾಚಾರ್, ರಾಜ್ಯ ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಕೆ.ಎಸ್.ರೇವಣ್ಣ, ಡಾ.ಭರತ್‌ಕುಮಾರ್, ಡಾ.ಹೇಮಂತ್‌ಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯವಸ್ಥಾಪಕ ಬಿ.ಸಿ.ಮೋಹನ್ ಮಾತನಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಆಂಜನೇಸ್ವಾಮಿ ದೇಗುಲದ ಆವರಣದಿಂದ ಅಂಬೇಡ್ಕರ್ ಭವನದವರೆಗೆ ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರವನ್ನೊಳಗೊಂಡ ವ್ಯ ಮೆರವಣಿಗೆ ಸಂಭ್ರಮದಿಂದ ನೆರವೇರಿತು. ತಾಲೂಕು ಘಟಕದ ಕಾರ್ಯಾಧ್ಯಕ್ಷ ಕೆಂಡಗಣ್ಣ ವಿಶ್ವಕರ್ಮ, ಪ್ರಧಾನ ಕಾರ್ಯದರ್ಶಿ ಎನ್.ಸುರೇಶ್ ಗೌರವ ಸಲಹೆಗಾರ ಕೆ.ಟಿ.ಚಂದ್ರಾಚಾರ್, ಉಪಾಧ್ಯಕ್ಷ ಕೆ.ಎನ್.ಶ್ರೀನಿವಾಸ್, ಯುವ ಬ್ರಿಗೇಡ್‌ನ ಅಧ್ಯಕ್ಷ ಕೆ.ಎನ್.ಶ್ರೀನಿವಾಸ್,ಮಹಿಳಾ ಘಟಕದ ಅಧ್ಯಕ್ಷ ಯಶೋದಾ ತಾಂಡವಮೂರ್ತಿ ಸೇರಿದಂತೆ ಸಮಾಜದವರು ಹಾಜರಿದ್ದರು.
ಅಭಿನವ ಜಕಣಾಚಾರಿ: ವಿಶ್ವಕರ್ಮ ಸಮಾಜದ ತಾಲೂಕು ಘಟಕದ ವತಿಯಿಂದ ಖ್ಯಾತಶಿಲ್ಪಿ ಡಾ.ಅರುಣ್ ಯೋಗಿರಾಜ್‌ರಿಗೆ ಅಭಿನವ ಜಕಣಾಚಾರಿ ಎಂಬ ಬಿರುದು ನೀಡುವ ಮೂಲಕ ಸನ್ಮಾನಿಸಲಾಯಿತು. ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರು ಅರುಣ್ ಅವರಿಗೆ ಎರಡು ಬೆಳ್ಳಿ ಕಡಗಗಳನ್ನು ಕೈಗೆ ತೊಡಿಸುವ ಮೂಲಕ ಗೌರವ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net