ಮೈಸೂರಿನ ನನೆಗುದಿಗೆ ಬಿದ್ದಿದ್ದ 8 ರಸ್ತೆಗಳ ವಿಸ್ತರಣೆಗೆ ಕ್ರಮ

8 ರಸ್ತೆಗಳ ವಿಸ್ತರಣೆಗೆ ಸಂಬಂಧಿಸಿದಂತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧಿಕಾರಿಗಳ ಸಭೆ ನಡೆಸಿದರು. ತನ್ವೀರ್ ಸೇಠ್, ಜಿ.ಲಕ್ಷ್ಮೀಕಾಂತ್ ರೆಡ್ಡಿ, ಎಸ್.ಯುಕೇಶ್‌ಕುಮಾರ್, ಶೇಖ್ ತನ್ವೀರ್ ಆಸಿಫ್ ಇತರರಿದ್ದರು.
8 ರಸ್ತೆಗಳ ವಿಸ್ತರಣೆಗೆ ಸಂಬಂಧಿಸಿದಂತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧಿಕಾರಿಗಳ ಸಭೆ ನಡೆಸಿದರು. ತನ್ವೀರ್ ಸೇಠ್, ಜಿ.ಲಕ್ಷ್ಮೀಕಾಂತ್ ರೆಡ್ಡಿ, ಎಸ್.ಯುಕೇಶ್‌ಕುಮಾರ್, ಶೇಖ್ ತನ್ವೀರ್ ಆಸಿಫ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ 8 ರಸ್ತೆಗಳ ವಿಸ್ತರಣೆಗೆ ಮುಂದಾಗಿದ್ದು, ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದು ಮತ್ತು ಖಾಸಗಿ ಭೂಮಾಲೀಕರಿಗೆ ಅಭಿವೃದ್ಧಿ ಹಕ್ಕುಗಳ(ಟಿಡಿಆರ್) ಅಡಿ ಪರಿಹಾರ ನೀಡಿ ಮುಂದಿನ ಕ್ರಮ ವಹಿಸಲು ತೀರ್ಮಾನ
ಮೈಸೂರು: ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ 8 ರಸ್ತೆಗಳ ವಿಸ್ತರಣೆಗೆ ಮುಂದಾಗಿದ್ದು, ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದು ಮತ್ತು ಖಾಸಗಿ ಭೂಮಾಲೀಕರಿಗೆ ಅಭಿವೃದ್ಧಿ ಹಕ್ಕುಗಳ(ಟಿಡಿಆರ್) ಅಡಿ ಪರಿಹಾರ ನೀಡಿ ಮುಂದಿನ ಕ್ರಮ ವಹಿಸಲು ತೀರ್ಮಾನಿಸಲಾಗಿದೆ.
ಸಮಾಜ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಯಿತು.
ಅಬ್ಬಾ ರಸ್ತೆ (ಸರ್ಕಾರಿ ಅತಿಥಿ ಗೃಹದಿಂದ ಕಾಳಿಕಾಂಬ ದೇವಸ್ಥಾನದ ವರೆಗೆ) ವಿಸ್ತರಣೆಗೆ ಕರ್ನಾಟಕ ಪೊಲೀಸ್ ಅಕಾಡೆಮಿಯ 18 ಜಾಗದ ಅಗತ್ಯ ಇದೆ. ಗೃಹ ಇಲಾಖೆಯಿಂದ ಅನುಮತಿ ಪಡೆದು ರಸ್ತೆ ವಿಸ್ತರಣೆ ಮಾಡಬೇಕಿದೆ ಎಂದು ಪಾಲಿಕೆಯ ಆಯುಕ್ತ ಶೇಕ್ ತನ್ವೀರ್ ಆಸಿಫ್ ತಿಳಿಸಿದರು.
ತಕ್ಷಣ ಗೃಹ ಇಲಾಖೆಯ ಕಾರ್ಯದರ್ಶಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ಈ ಕುರಿತು ಪ್ರಸ್ತಾವನೆ ಸಲ್ಲಿಸಿದರೆ, ಗೃಹ ಇಲಾಖೆಯಿಂದ ಅನುಮತಿ ಕೊಡಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು-ನೀಲಗಿರಿ ರಸ್ತೆ(ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಫೌಂಟೇನ್ ವೃತ್ತದ ವರೆಗೆ) ವಿಸ್ತರಣೆಗಾಗಿ ಕೆಪಿಟಿಸಿಎಲ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ ಜಾಗವನ್ನು ಪಡೆದುಕೊಂಡು ಮುಂದುವರಿಯಬೇಕು ಎಂದು ಸೂಚಿಸಿದರು.
ಬೆಂಗಳೂರು ನೀಲಗಿರಿ ರಸ್ತೆ(ಫೈವ್ ಲೈಟ್ ವೃತ್ತದಿಂದ ಸಬ್ ಅರ್ಬನ್ ಕಡೆಗೆ ರಸ್ತೆ), ಮಲೆ ಮಹದೇಶ್ವರ ರಸ್ತೆ (ಗೋಪಾಲಸ್ವಾಮಿ ಆಸ್ಪತ್ರೆ ವೃತ್ತದಿಂದ ಬುದ್ಧ ವೃತ್ತದ ವರೆಗೆ ರಸ್ತೆ) ವಿಸ್ತರಣೆ ಬೇಕಾಗಿರುವ ಜಾಗವನ್ನು ಖಾಸಗಿ ಭೂಮಾಲೀಕರಿಗೆ ಅಭಿವೃದ್ಧಿ ಹಕ್ಕುಗಳ(ಟಿಡಿಆರ್) ಅಡಿ ಪರಿಹಾರ ನೀಡಿ ವಶಕ್ಕೆ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
ಎಸ್‌ಪಿ ವೃತ್ತದಿಂದ ಬುದ್ಧ ವೃತ್ತದವರೆಗೆ ರಸ್ತೆ ವಿಸ್ತರಣೆಗೆ ಚಾಮುಂಡಿವಿಹಾರ ಕ್ರೀಡಾಂಗಣದ ಜಾಗ ಅಗತ್ಯ ಇದೆ. ಅದಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಪಾಲಿಕೆಗೆ ಸಚಿವರು ನಿರ್ದೇಶಿಸಿದರು.
ಅಂತೆಯೇ ಪುಲಿಕೇಶಿ ರಸ್ತೆ (ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಅಶೋಕ ರಸ್ತೆವರೆಗೆ), ಹೈದರಲಿ ರಸ್ತೆ (ಅಂಬೇಡ್ಕರ್ ವೃತ್ತದಿಂದ ಅಜೀಜ್ ಸೇಠ್ ಜೋಡಿ ರಸ್ತೆವರೆಗೆ) ಮತ್ತು ಡಾ.ರಾಜ್‌ಕುಮಾರ್ ರಸ್ತೆ ವಿಸ್ತರಣೆಗೆ ತೊಡಕಾಗಿರುವ ಸಮಸ್ಯೆಗಳನ್ನು ಬಗೆಹರಿಸಿ, ಮುಂದುವರಿಬೇಕು ಎಂದು ನಿರ್ದೇಶಿಸಿದರು.
ಮೈಸೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ರಸ್ತೆಗಳ ವಿಸ್ತರಣೆ ಅಗತ್ಯವಾಗಿದೆ. ಅದಕ್ಕಾಗಿ ಕಾಮಗಾರಿ ಕೈಗೊಳ್ಳಬೇಕು. ಜತೆಗೆ ಅಶೋಕರಸ್ತೆ ಸಹ ವಿಸ್ತರಣೆ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಶಾಸಕ ತನ್ವೀರ್ ಸೇಠ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಕೆಪಿಎ ನಿರ್ದೇಶಕ ಎನ್.ವಿಷ್ಣುವರ್ಧನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net