ಹುಣಸೂರು ನಗರದ ಸರ್ಕಾರಿ ಆದರ್ಶ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಫ್ರೆಷರ್ಸ್ ಪಾರ್ಟಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರಾಂಶುಪಾಲ ಎ.ರಾಮೇಗೌಡ, ಸಿಡಿಸಿ ಉಪಾಧ್ಯಕ್ಷ ಶಿವಕುಮಾರ್.ವಿ.ರಾವ್, ಸದಸ್ಯ ಲಕ್ಷ್ಮೀಕಾಂತ್, ಪ್ರಧಾನ ಭಾಷಣಕಾರ ಮಹದೇವ್ ಇತರರು ಇದ್ದರು.
ವಿದ್ಯಾರ್ಥಿಗಳು ಜ್ಞಾನದೊಂದಿಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯವೆಂದು ತಾಲೂಕಿನ ಕರಿಮುದ್ದನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಮಹದೇವ್ ಅಭಿಪ್ರಾಯಪಟ್ಟರು.
ನಗರದ ಬಾಚಳ್ಳಿ ರಸ್ತೆಯ ಸರ್ಕಾರಿ ಆದರ್ಶ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ವ್ಯಾಸಂಗ ಎನ್ನುವುದು ಕೇವಲ ಅಕ್ಷರ ಕಲಿಕೆಯಾಗಬಾರದು. ಅಕ್ಷರದ ಮೂಲಕ ವಿದ್ಯಾರ್ಥಿಗಳು ಜ್ಞಾನವನ್ನು ಸಂಪಾದಿಸಬೇಕು. ಜ್ಞಾನವು ಮಾನವೀಯತೆಯೊಂದಿಗೆ ಮಿಳಿತವಾದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಮತ್ತು ಜವಾಬ್ದಾರಿಯುತ ನಡವಳಿಕೆ ಕಾಣಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಸಾಧಿಸಬೇಕೆನ್ನುವ ತುಡಿತ, ಉತ್ಸಾಹ, ಛಲ, ಗುರಿ ಎಲ್ಲವೂ ಇರುತ್ತದೆ. ಆದರೆ ಸಂದರ್ಭಗಳನ್ನು ಬಳಸಿಕೊಳ್ಳುವ ವಿವೇಕದ ಕೊರತೆ ಕಾಡುತ್ತದೆ. ಕಾಲೇಜು ಶಿಕ್ಷಣ, ಶಿಕ್ಷಕರು ಎಲ್ಲರೂ ನಿಮ್ಮಲ್ಲಿ ಈ ವಿವೇಕವನ್ನು ಬೆಳೆಸಲು ಶ್ರಮಪಡುತ್ತಾರೆ ಎಂದರು.
ವಿದ್ಯಾರ್ಥಿಗಳು ಸಮಸ್ಯೆಯನ್ನು ಧೈರ್ಯವಾಗಿ ಎದುರಿಸುವ ಮನೋಭಾವ ರೂಪಿಸಿಕೊಳ್ಳಬೇಕು. ಮೊಬೈಲ್ ಎಂಬ ಮುಳ್ಳಿನ ಮೇಲೆ ಮನಸೆಂಬ ಬಟ್ಟೆಯನ್ನು ಹಾಕಿದರೆ ಹರಿಯುವುದು ಬಟ್ಟೆಯೇ ಹೊರತು ಮುಳ್ಳಲ್ಲ. ಮೊಬೈಲ್, ಸಾಮಾಜಿಕ ಜಾಲತಾಣಗಳ ಬಳಕೆ ಎಲ್ಲವೂ ನಿಯಂತ್ರಣದಲ್ಲಿರಲಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎ.ರಾಮೇಗೌಡ ಮಾತನಾಡಿ, ಈ ಕಾಲೇಜು ಆರಂಭಗೊಂಡು ಎರಡನೇ ವರ್ಷ ಇದಾಗಿದ್ದು, ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಕಾಲೇಜಿನ ಮೊದಲ ತಂಡದ ದ್ವಿತೀಯ ಪಿಯು ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ. ನಿಮ್ಮ ತಂಡ ಸಾಧನೆಯೊಂದಿಗೆ ಹೊರಬಂದಲ್ಲಿ ನಿಮ್ಮ ಹಿಂದೆ ಬಂದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಕಾಲೇಜಿನಲ್ಲಿ ಆಯೋಜಿಸುವ ಎಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿರಿ. ಕಾಲೇಜಿನ ಹೆಸರಿಗೆ ತಕ್ಕಂತೆ ಆದರ್ಶಪ್ರಾಯರಾಗಿ ಸಮಾಜಕ್ಕೆ ನಿಮ್ಮ ಕೊಡುಗೆ ನೀಡಿರಿ ಎಂದು ಸಲಹೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶಿವಕುಮಾರ್.ವಿ.ರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸದಸ್ಯ ಲಕ್ಷ್ಮೀಕಾಂತ್, ಆದರ್ಶ ಪ್ರೌಢಶಾಲೆ ಮುಖ್ಯಶಿಕ್ಷಕ ಚಂದ್ರಕುಮಾರ್ ಮಾತನಾಡಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಪ್ರದರ್ಶನದ ಮೂಲಕ ಸಂಭ್ರಮಿಸಿದರು. ಪ್ರಾಧ್ಯಾಪಕರಾದ ಆರ್.ಕೆ.ದರ್ಶನ್, ರಮೇಶ್, ಸುಮಿತ್ರಾ, ಸಿ.ಎನ್.ಚಿನ್ಮಯಿ, ಮೋನಿಷಾ, ರವಿಕುಮಾರ್, ಮಮತಾ, ಸುನಯನಾ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.