ಅಪಘಾತದಲ್ಲಿ ದಂಪತಿ ಸಾವು

ಕೆ.ಆರ್.ನಗರ ತಾಲೂಕಿನ  ಕಗ್ಗರೆ ಮತ್ತು ನಾರಾಯಣಪುರ ಬಳಿ ಅಪಘಾತಕ್ಕೀಡಾದ ಕಾರು ಮತ್ತು ಬೈಕ್.
ಕೆ.ಆರ್.ನಗರ ತಾಲೂಕಿನ ಕಗ್ಗರೆ ಮತ್ತು ನಾರಾಯಣಪುರ ಬಳಿ ಅಪಘಾತಕ್ಕೀಡಾದ ಕಾರು ಮತ್ತು ಬೈಕ್.
Published on
ಕೆ.ಆರ್.ನಗರ: ಸಂಬಂಧಿಯೊಬ್ಬರ ಅಂತ್ಯಕ್ರಿಯೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟರು.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಬೀರನಹಳ್ಳಿ ಗ್ರಾಮದ ನಂಜುಂಡ ಸೋಮಾಚಾರ್ (51), ಪತ್ನಿ ನೇತ್ರಾವತಿ(48) ಮೃತರು.
ಬೀರನಹಳ್ಳಿ ಗ್ರಾಮದವರಾದ ದಂಪತಿ ಮೈಸೂರಿನ ಹೆಬ್ಬಾಳು ಮೂರನೇ ಹಂತದ ಸುಬ್ರಹ್ಮಣ್ಯ ನಗರದಲ್ಲಿರುವ ಮಗಳ ಮನೆಯಲ್ಲಿ ವಾಸವಿದ್ದರು. ನಂಜುಂಡ ಸೋಮಾಚಾರ್ ಕಟ್ಟಡ ಸೆಂಟ್ರಿಂಗ್ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಅರಕಲಗೂಡು ತಾಲೂಕು ರಾಮನಾಥಪುರ ಬಳಿಯ ಮುತ್ತಕದ ಹೊಸೂರು ಗ್ರಾಮದಲ್ಲಿ ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೈಕ್‌ನಲ್ಲಿ ತೆರಳುತ್ತಿದ್ದರು. ಇಲವಾಲ-ಸಾಗರಕಟ್ಟೆ ಮಾರ್ಗವಾಗಿ ತೆರಳುತ್ತಿದ್ದ ವೇಳೆ ನಾರಾಯಣಪುರ-ಕಗ್ಗರೆ ಬಳಿ ವೇಗವಾಗಿ ಎದುರಿನಿಂದ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಬೈಕ್ ಸಮೇತ ಹಾರಿ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ದಂಪತಿಯನ್ನು ಸ್ಥಳೀಯರು ಆಂಬುಲೆನ್ಸ್ ಮೂಲಕ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದರು. ಗಾಯಾಳುಗಳನ್ನು ಪರೀಕ್ಷಿಸಿದ ವೈದ್ಯರು ದಂಪತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಪುತ್ರ ರವಿಕುಮಾರ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪಟ್ಟಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವಗಳನ್ನು ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net