ಡೀಪ್‌ಟೆಕ್‌ ಆವಿಷ್ಕಾರಕ್ಕೆ ವೇಗ

ಆವಿಷ್ಕಾರ
ಆವಿಷ್ಕಾರ
Published on

ಪ್ರಮುಖ ಮುಖ್ಯಾಂಶಗಳು

  • ‘ಎಲ್‌ಟಿಟಿಎಸ್‌ ಫಾರ್ಮ್‌’ ಆರಂಭಿಸಿದ ಎಲ್‌ಆ್ಯಂಡ್‌ಟಿ ಟೆಕ್ನಾಲಜಿ ಸರ್ವಿಸಸ್‌; ಪ್ರಯೋಗಾಲಯದಿಂದ ಮಾರುಕಟ್ಟೆಯವರೆಗೆ ನವೋದ್ಯಮಗಳಿಗೆ ನೆರವು
ಮೈಸೂರು: ಪ್ರಯೋಗಾಲಯಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ ಡೀಪ್‌ಟೆಕ್‌ ತಂತ್ರಜ್ಞಾನಗಳನ್ನು ಮಾರುಕಟ್ಟೆಗೆ ತ್ವರಿತವಾಗಿ ಪರಿಚಯಿಸುವ ಉದ್ದೇಶದಿಂದ ಎಲ್‌ಆ್ಯಂಡ್‌ಟಿ ಟೆಕ್ನಾಲಜಿ ಸರ್ವಿಸಸ್‌ (ಎಲ್‌ಟಿಟಿಎಸ್‌) ‘ಎಲ್‌ಟಿಟಿಎಸ್‌ ಫಾರ್ಮ್‌’ (LTTS FARM) ಎಂಬ ನವೋದ್ಯಮ ಸಹಭಾಗಿತ್ವ ವೇದಿಕೆ ಆರಂಭಿಸಿದೆ.
ಎಂಜಿನಿಯರಿಂಗ್‌ ಇಂಟೆಲಿಜೆನ್ಸ್‌ ಆಧಾರಿತ ಸಹಯೋಗ, ಸಹ-ಆವಿಷ್ಕಾರ ಮತ್ತು ಮಾರುಕಟ್ಟೆ ಲಭ್ಯತೆಯ ಮೂಲಕ ತಾಂತ್ರಿಕ ಆವಿಷ್ಕಾರಗಳ ವಾಣಿಜ್ಯೀಕರಣವನ್ನು ವೇಗಗೊಳಿಸುವುದು ವೇದಿಕೆಯ ಪ್ರಮುಖ ಉದ್ದೇಶವಾಗಿದೆ.
‘ಸಹಯೋಗ ಮೊದಲು, ವಾಣಿಜ್ಯೀಕರಣ ನಂತರ’ ಎಂಬ ತತ್ವದಡಿ ರೂಪಿಸಿರುವ ಎಲ್‌ಟಿಟಿಎಸ್‌ ಫಾರ್ಮ್‌, ತಾಂತ್ರಿಕವಾಗಿ ಯಶಸ್ವಿಯಾಗಿ ಪರೀಕ್ಷಿಸಲ್ಪಟ್ಟಿದ್ದು, ಉದ್ಯಮ ಬಳಕೆಗೆ ಸಿದ್ಧವಾಗಿರುವ ಟಿಆರ್‌ಎಲ್‌ 4 ಅಥವಾ ಅದಕ್ಕಿಂತ ಹೆಚ್ಚಿನ ಹಂತದ ತಂತ್ರಜ್ಞಾನ ಹೊಂದಿರುವ ನವೋದ್ಯಮಗಳ ಮೇಲೆ ಗಮನ ಹರಿಸಲಿದೆ.

ಹಲವು ಕ್ಷೇತ್ರಗಳಿಗೆ ಆದ್ಯತೆ

ಸಾಫ್ಟ್‌ವೇರ್‌ ಡಿಫೈನ್ಡ್‌ ಮೊಬಿಲಿಟಿ (ಎಸ್‌ಡಿಎಂ), ಸ್ಥಾವರ ನಿರ್ಮಾಣ ಮತ್ತು ಆಧುನೀಕರಣ, ಇಂಧನ, ಕೈಗಾರಿಕಾ ಸ್ವಯಂಚಾಲನೆ, ಡಿಜಿಟಲ್‌ ತಯಾರಿಕೆ, ಹೊಸ ತಲೆಮಾರಿನ ಕಂಪ್ಯೂಟಿಂಗ್‌ ಮತ್ತು ಡೇಟಾ ಸೆಂಟರ್‌ಗಳು, ಸಾಫ್ಟ್‌ವೇರ್‌ ಪ್ಲಾಟ್‌ಫಾರ್ಮ್‌ಗಳು, ಎಂಜಿನಿಯರಿಂಗ್‌ ಇಂಟೆಲಿಜೆನ್ಸ್‌ ಹಾಗೂ ವೈದ್ಯಕೀಯ ತಂತ್ರಜ್ಞಾನ ಸೇರಿದಂತೆ ಎಲ್‌ಟಿಟಿಎಸ್‌ನ ಪ್ರಮುಖ ತಂತ್ರಜ್ಞಾನ ಆದ್ಯತೆಗಳಿಗೆ ಹೊಂದಿಕೆಯಾಗುವ ನವೋದ್ಯಮಗಳಿಗೆ ಕಾರ್ಯಕ್ರಮದಲ್ಲಿ ಅವಕಾಶ ದೊರೆಯಲಿದೆ.
ಹೊಸ ತಂತ್ರಜ್ಞಾನಗಳು ಮತ್ತು ಪರಿಹಾರಗಳ ಮೂಲಕ ಈ ಕ್ಷೇತ್ರಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿರುವ ನವೋದ್ಯಮಗಳನ್ನೂ ಪರಿಗಣಿಸಲಾಗುವುದು.
ಎಲ್‌ಟಿಟಿಎಸ್‌ನ ಜಾಗತಿಕ ಉಪಸ್ಥಿತಿ, ಕ್ಷೇತ್ರ ಪರಿಣತಿ ಹಾಗೂ ಗ್ರಾಹಕರ ಜಾಲವನ್ನು ಬಳಸಿಕೊಂಡು ತಾಂತ್ರಿಕವಾಗಿ ಸಾಬೀತಾಗಿರುವ ಆವಿಷ್ಕಾರಗಳನ್ನು ಗ್ರಾಹಕರ ಬಳಕೆಗೆ ತರುವುದರಿಂದ ಹಿಡಿದು ದೀರ್ಘಾವಧಿಯ ಬೆಳವಣಿಗೆಯವರೆಗೆ ನವೋದ್ಯಮಗಳಿಗೆ ವ್ಯವಸ್ಥಿತ ಬೆಂಬಲ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಹಂತ ಹಂತವಾಗಿ ಸಹಭಾಗಿತ್ವ

ಅರ್ಹ ನವೋದ್ಯಮಗಳ ಮೌಲ್ಯಮಾಪನ, ನೋಂದಣಿ, ಸಹ-ಆವಿಷ್ಕಾರ, ಪ್ರಾಯೋಗಿಕ ಯೋಜನೆಗಳ ಅಭಿವೃದ್ಧಿ ಮತ್ತು ವಾಣಿಜ್ಯೀಕರಣ ಸೇರಿದಂತೆ ವಿವಿಧ ಹಂತಗಳಲ್ಲಿ ಕಾರ್ಯಕ್ರಮ ಮುಂದುವರಿಯಲಿದೆ. ಆಯ್ಕೆಯಾಗುವ ತಂತ್ರಜ್ಞಾನಗಳನ್ನು ಪ್ರಾಯೋಜಿತ ಯೋಜನೆಗಳು, ಪರಿಕಲ್ಪನೆಯ ಸಾಕ್ಷ್ಯ (ಪಿಒಸಿ), ಗ್ರಾಹಕರಿಗೆ ಪ್ರಾತ್ಯಕ್ಷಿಕೆ ಹಾಗೂ ವಾಣಿಜ್ಯ ಸಹಭಾಗಿತ್ವಗಳ ಮೂಲಕ ಉದ್ಯಮ ಬಳಕೆಗೆ ತರಲು ಕ್ರಮ ಕೈಗೊಳ್ಳಲಾಗುವುದು.
ಎಲ್‌ಟಿಟಿಎಸ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ, ನಾಸ್ಕಾಂ ಕಾರ್ಯಕಾರಿ ಮಂಡಳಿ ಸದಸ್ಯ ಅಮಿತ್‌ ಛಡ್ಡಾ ಮಾತನಾಡಿ, ಹಲವು ಭರವಸೆಯ ತಂತ್ರಜ್ಞಾನಗಳು ಗ್ರಾಹಕರಿಗೆ ನೇರ ಸಂಪರ್ಕ, ಉದ್ಯಮ ಪರಿಣತಿ ಹಾಗೂ ವಾಣಿಜ್ಯೀಕರಣದ ಅವಕಾಶಗಳ ಕೊರತೆಯಿಂದಾಗಿ ಮಾರುಕಟ್ಟೆ ತಲುಪಲು ಅಡೆತಡೆ ಎದುರಿಸುತ್ತಿವೆ. ಎಲ್‌ಟಿಟಿಎಸ್‌ ಫಾರ್ಮ್‌ ಮೂಲಕ ನವೋದ್ಯಮಗಳಿಗೆ ತಜ್ಞರ ಸಹಯೋಗ, ಜಾಗತಿಕ ಮಾರುಕಟ್ಟೆ ಮತ್ತು ಗ್ರಾಹಕರ ಅಗತ್ಯಗಳ ಅರಿವು, ವಾಸ್ತವ ಜಗತ್ತಿನ ಬಳಕೆಯ ಪರೀಕ್ಷೆ ಹಾಗೂ ಮಾರುಕಟ್ಟೆ ಪ್ರವೇಶಕ್ಕೆ ಅಗತ್ಯವಾದ ಬೆಂಬಲ ಒದಗಿಸಲಾಗುವುದು ಎಂದರು.
ಪ್ರಮುಖ ತಂತ್ರಜ್ಞಾನ ಆದ್ಯತೆಗಳಿಗೆ ಹೊಂದಿಕೆಯಾಗುವ ಆವಿಷ್ಕಾರಗಳನ್ನು ಬೆಳೆಸುವ ಮೂಲಕ ಎಲ್‌ಟಿಟಿಎಸ್‌ ಫಾರ್ಮ್‌ ಸಂಸ್ಥೆಯ ಎಂಜಿನಿಯರಿಂಗ್‌ ಇಂಟೆಲಿಜೆನ್ಸ್‌ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲಿದೆ. ಹೊಸತನದ ಪರಿಕಲ್ಪನೆಗಳನ್ನು ಉದ್ಯಮ ಬಳಕೆಗೆ ಸನ್ನದ್ಧವಾದ ಪರಿಹಾರಗಳಾಗಿ ಪರಿವರ್ತಿಸಿ, ಸ್ಪಷ್ಟವಾದ ವ್ಯವಹಾರಿಕ ಫಲಿತಾಂಶಗಳನ್ನು ಸಾಧಿಸಲು ನೆರವಾಗಲಿದೆ ಎಂದು ಅವರು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net