ಕಾಫಿ, ಟೀ ಬೆಲೆ ಏರಿಕೆಗೆ ಆಕ್ಷೇಪ

ABGP office-bearers submitted a memorandum to C. Narayana Gowda, President of the Hotel Owners' Association. Vikram Iyengar, K. M. Nishanth, and Dayananda Nayak were present.
ಎಬಿಜಿಪಿ ಪದಾಧಿಕಾರಿಗಳು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಅವರಿಗೆ ಮನವಿ ಸಲ್ಲಿಸಿದರು. ವಿಕ್ರಂ ಅಯ್ಯಂಗಾರ್, ಕೆ.ಎಂ.ನಿಶಾಂತ್, ದಯಾನಂದ ನಾಯಕ್ ಇದ್ದರು.
Published on: 

ಹಾಲಿನ ದರ ಹೆಚ್ಚಳದ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಕಾಫಿ ಮತ್ತು ಟೀ ಬೆಲೆಯನ್ನು ಪ್ರತಿ ಲೋಟಕ್ಕೆ 5 ರೂ. ಹೆಚ್ಚಿಸಿರುವುದಕ್ಕೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ (ಎಬಿಜಿಪಿ) ಮೈಸೂರು ಘಟಕ ಆಕ್ಷೇಪ ವ್ಯಕ್ತಪಡಿಸಿದೆ. ಬೆಲೆ ಏರಿಕೆಯನ್ನು ಮರುಪರಿಶೀಲಿಸಿ, ವೈಜ್ಞಾನಿಕ ಲೆಕ್ಕಾಚಾರದ ಆಧಾರದ ಮೇಲೆ ದರ ನಿಗದಿಪಡಿಸುವಂತೆ ಹೋಟೆಲ್ ಮಾಲೀಕರ ಸಂಘಕ್ಕೆ ಮನವಿ ಸಲ್ಲಿಸಿದೆ.

ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಅವರನ್ನು ಸೋಮವಾರ ಭೇಟಿ ಮಾಡಿದ ಪಂಚಾಯತ್ ಕಾರ್ಯಕರ್ತರು, ಒಂದು ಲೀಟರ್ ಹಾಲಿನಲ್ಲಿ ಹಲವು ಲೋಟ ಕಾಫಿ, ಟೀ ತಯಾರಿಸಬಹುದು. ಹೀಗಾಗಿ ಹಾಲಿನ ಪ್ರಮಾಣ, ಸಕ್ಕರೆ, ಇಂಧನ ಹಾಗೂ ಇತರ ನಿರ್ವಹಣಾ ವೆಚ್ಚಗಳನ್ನು ಲೆಕ್ಕಹಾಕಿ ದರ ನಿಗದಿಪಡಿಸಬೇಕು. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕಾಫಿ, ಟೀ ಬೆಲೆ ಹೆಚ್ಚಳ ಮತ್ತಷ್ಟು ಹೊರೆಯಾಗಬಾರದು ಎಂದು ಮನವಿ ಮಾಡಿದ್ದಾರೆ.

ಮನವಿ ಸ್ವೀಕರಿಸಿದ ಸಿ. ನಾರಾಯಣಗೌಡ, ಹಾಲು ಮಾತ್ರವಲ್ಲದೆ ಇತರ ಆಹಾರ ಪದಾರ್ಥಗಳ ಬೆಲೆಯೂ ನಿರಂತರವಾಗಿ ಏರಿಕೆಯಾಗುತ್ತಿದೆ. ಈ ಎಲ್ಲ ವೆಚ್ಚಗಳನ್ನು ಪರಿಗಣಿಸಿ ಹೋಟೆಲ್‌ಗಳಲ್ಲಿ ದರ ಹೆಚ್ಚಿಸಿರಬಹುದು. ಆದರೂ ಹೋಟೆಲ್ ಮಾಲೀಕರೊಂದಿಗೆ ಚರ್ಚಿಸಿ, ಗ್ರಾಹಕರಿಗೆ ಹೊರೆಯಾಗದಂತೆ ಹಾಗೂ ಮಾಲೀಕರಿಗೂ ನಷ್ಟವಾಗದಂತೆ ವೈಜ್ಞಾನಿಕವಾಗಿ ಕಾಫಿ, ಟೀ ದರ ನಿಗದಿಪಡಿಸುವ ಕುರಿತು ಸಂಘದಿಂದ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಎಬಿಜಿಪಿ ಮೈಸೂರು ಘಟಕದ ಉಪಾಧ್ಯಕ್ಷ ವಿಕ್ರಂ ಅಯ್ಯಂಗಾರ್, ಪದಾಧಿಕಾರಿಗಳಾದ ಕೆ.ಎಂ.ನಿಶಾಂತ್, ದಯಾನಂದ ನಾಯಕ್, ಜತ್ತಿ ಪ್ರಸಾದ್, ದೀಪಕ್, ಸುಬ್ರಹ್ಮಣ್ಯರಾಜ್ ಅರಸ್, ನಿವೃತ್ತ ಶಿಕ್ಷಕ ಮಹದೇವಸ್ವಾಮಿ, ಶಿವಲಿಂಗಸ್ವಾಮಿ, ಜಗದೀಶ್ ಇದ್ದರು.