ಮಕ್ಕಳಿಗೆ ಪಾಠ ಮಾಡುತ್ತಿರುವ ಮುಖ್ಯ ಶಿಕ್ಷಕಿ ಜ್ಯೋತಿ. ಈ ಸಂದರ್ಭದಲ್ಲಿ ಬಿಇಒ ಎಸ್.ಎನ್.ರಾಜು ಸಹ ಹಾಜರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಿ.ಬಿ. ಸರಗೂರು ಶಾಲೆಯಲ್ಲಿ 222 ವಿದ್ಯಾರ್ಥಿಗಳಿಗೆ ಗಣಿತ ಬೋಧನೆ
ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಕರ್ತವ್ಯಪ್ರಜ್ಞೆಗೆ ಜನರು ಮೆಚ್ಚುಗೆ
ಮೈಸೂರು: ಕರ್ತವ್ಯ ನಿರ್ವಹಿಸದೆ ಕಳ್ಳಾಟ ಆಡುವ ಶಿಕ್ಷಕರಿರುವ ಈ ಕಾಲಘಟ್ಟದಲ್ಲಿ ಪತಿ ಸಾವಿನ ದುಃಖದಲ್ಲೂ ಶಿಕ್ಷಕಿಯೊಬ್ಬರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಪತಿಯ ಸಾವಿನ ನೋವಿನಲ್ಲೂ ಶಿಕ್ಷಕಿಯೊಬ್ಬರು ಪರೀಕ್ಷೆ ಎದುರಿಸಲು ಸಜ್ಜಾಗಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟು ಅವರ ಭವಿಷ್ಯಕ್ಕೆ ಮಾರ್ಗದರ್ಶನವಾದ ಅಪರೂಪದ ಘಟನೆ ಇದಾಗಿದೆ.
ತಾಯಿಯೇ ಮೊದಲ ಗುರು. ಆದರೆ ಗುರುವೇ 2ನೇ ತಾಯಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಈ ಮಹಾತಾಯಿ.
ಎಚ್.ಡಿ.ಕೋಟೆ ತಾಲೂಕಿನ ಜಿ.ಬಿ ಸರಗೂರು ಗ್ರಾಮದ ಶಾಲೆಗೆ ಹಾಜರಾಗಿ 222 ವಿದ್ಯಾರ್ಥಿಗಳಿಗೆ ಗಣಿತ ವಿಷಯದ ಪೂರ್ವಸಿದ್ಧತೆ ಕುರಿತು ಮಾರ್ಗದರ್ಶನ ನೀಡಿದ್ದಾರೆ.
ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಅವರ ಈ ಕರ್ತವ್ಯಪ್ರಜ್ಞೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ದಟ್ಟಗಳ್ಳಿ ನಿವಾಸಿಯಾದ ಜ್ಯೋತಿ ಅವರ ಪತಿ ಕಿರಣ್‌ಕುಮಾರ್ (47) ಬುಧವಾರ ಹೃದಯಾಘಾತದಿಂದ ನಿಧನರಾದರು. ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ಇರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಶಿಕ್ಷಕಿ ನೋವನ್ನು ನುಂಗಿಕೊಂಡು ಮರುದಿನ ಗುರುವಾರ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಈ ವಿಷಯ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್.ರಾಜು ಶಾಲೆಗೆ ಭೇಟಿ ನೀಡಿ ಜ್ಯೋತಿ ಅವರಿಗೆ ಸಾಂತ್ವನ ಹೇಳಿದರು. ನಿನ್ನೆಯಷ್ಟೇ ನಿಮ್ಮ ಪತಿ ಅಗಲಿದ್ದಾರೆ. ನೀವು ದುಃಖದಲ್ಲಿದ್ದೀರಿ. ನಿಮ್ಮ ಬದಲಿಗೆ ಬೇರೆ ಶಿಕ್ಷಕರನ್ನು ಎರಡು ದಿನಗಳ ಮಟ್ಟಿಗೆ ನಿಯೋಜಿಸುತ್ತೇವೆ. ನೀವು ಮನೆಗೆ ತೆರಳಬಹುದು ಎಂದು ಸಲಹೆ ನೀಡಿದ್ದಾರೆ.
ಆದರೆ, ಇದನ್ನು ತಿರಸ್ಕರಿಸಿದ ಜ್ಯೋತಿ, ಗಣಿತವನ್ನು ಸಂಪೂರ್ಣವಾಗಿ ನಾನೇ ಬೋಧಿಸಿದ್ದು, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಗಣಿತ ಸ್ವಲ್ಪ ಕಠಿಣವಾಗಿರುತ್ತದೆ. ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಬೇಕು ಎಂಬ ಉದ್ದೇಶದಿಂದ ಶಾಲೆಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ಅವರ ಈ ಕಾರ್ಯಕ್ಕೆ ಪಾಲಕರು, ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದುಃಖದ ನಡುವೆಯೂ ಕರ್ತವ್ಯಕ್ಕೆ ಆದ್ಯತೆ ನೀಡಿದ ಜ್ಯೋತಿ ಅವರ ನಿಷ್ಠೆ, ಸಮಾಜಕ್ಕೆ ಪ್ರೇರಣೆ ಎಂದು ಬಿಇಒ ರಾಜು ಪ್ರಶಂಸಿಸಿದ್ದಾರೆ.