ಗಾನಕೋಗಿಲೆ ಎಸ್. ಜಾನಕಿಗೆ ಅಂತಿಮನ ನಮನ ಸಲ್ಲಿಸಲು ಹರಿದು ಬಂದ ಜನಸಾಗರ

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಎಸ್. ಜಾನಕಿ ಅವರ ಅಂತಿಮ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವ ಜನರು
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಎಸ್. ಜಾನಕಿ ಅವರ ಅಂತಿಮ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವ ಜನರು
Published on
ಮೈಸೂರು: ಗಾನಕೋಗಿಲೆ ಎಸ್. ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಬೆಳಗ್ಗಿನಿಂದಲೇ ಜನಸಾಗರವೇ ನಗರದ ಮಹಾರಾಜ ಕಾಲೇಜು ಮೈದಾನದತ್ತ ಹರಿದುಬಂತು. ಸಾವಿರಾರು ಕಣ್ಣುಗಳು ತೇವಗೊಂಡಿದ್ದವು, ಸಾವಿರಾರು ಹೃದಯಗಳು ಭಾರವಾಗಿದ್ದವು. ಮಾತಿಗಿಂತ ಮೌನವೇ ಅಲ್ಲಿ ಹೆಚ್ಚು ಮಾತನಾಡುತ್ತಿತ್ತು.
ಬೆಳಗ್ಗೆ ಒಂಬತ್ತು ಗಂಟೆಗೆ ಸಾರ್ವಜನಿಕ ದರ್ಶನ ಆರಂಭವಾಗುವುದಕ್ಕೂ ಮುನ್ನವೇ ಮೈದಾನದ ಸುತ್ತಲೂ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತಿದ್ದರು. ವಯಸ್ಸಿನ ಮಿತಿಯಿರಲಿಲ್ಲ, ಭಾಷೆಯ ಬೇಧವಿರಲಿಲ್ಲ, ರಾಜ್ಯದ ಗಡಿಯೂ ಅಡ್ಡಿಯಾಗಿರಲಿಲ್ಲ. ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಸಂಗೀತ ಕಲಿಯುವ ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ಕಲಾವಿದರವರೆಗೆ ಎಲ್ಲರೂ ಒಂದೇ ಭಾವನೆಯೊಂ ದಿಗೆ ತಮ್ಮ ನೆಚ್ಚಿನ ಗಾಯಕಿಯ ಅಂತಿಮ ದರ್ಶನ ಪಡೆಯಲು ಕಾತರದಿಂದ ಕಾಯುತ್ತಿದ್ದರು.
ಜಾನಕಿ ಅವರ ಪಾರ್ಥಿವ ಶರೀರದ ಮುಂದೆ ಬಂದ ಕ್ಷಣ ಅನೇಕರು ಕಣ್ಣೀರನ್ನು ತಡೆಯಲಿಲ್ಲ, ಕೈಮುಗಿದು ನಮಸ್ಕರಿಸಿದರು. ಕೆಲವರು ಹೂವಿನ ದಳಗಳನ್ನು ಅರ್ಪಿಸಿದರು. ಇನ್ನೂ ಕೆಲವರು ಅವರ ಅಮರ ಗೀತೆಗಳನ್ನು ಗುನುಗುತ್ತಾ ಕಂಬನಿ ಮಿಡಿದರು. ನಿಮ್ಮ ಹಾಡುಗಳು ಎಂದೆಂದಿಗೂ ನಮ್ಮೊಂದಿಗಿರುತ್ತವೆ ಎಂಬ ಮಾತುಗಳು ಹಲವರ ತುಟಿಗಳಲ್ಲಿ ಕೇಳಿಬಂದವು. ಮಾತುಗಳು ಮುಗಿದ ಕಡೆ ಕಣ್ಣೀರು ಮಾತನಾಡುತ್ತಿತ್ತು.
ಮಧ್ಯಾಹ್ನದ ಬಿಸಿಲೂ ಅಭಿಮಾನಿಗಳ ಪ್ರೀತಿಯನ್ನು ತಡೆಯಲಿಲ್ಲ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರೂ ಯಾರ ಮುಖದಲ್ಲೂ ಅಸಹನೆ ಇರಲಿಲ್ಲ. ತಮ್ಮ ಜೀವನದ ಹಲವು ನೆನಪುಗಳಿಗೆ ಧ್ವನಿಯಾಗಿದ್ದ ಗಾನಕೋಗಿಲೆಗೆ ಕೊನೆಯ ನಮನ ಸಲ್ಲಿಸಬೇಕು ಎಂಬ ಒಂದೇ ಸಂಕಲ್ಪ ಅವರಲ್ಲಿತ್ತು. ಬೆಳಗ್ಗೆ 9 ರಿಂದ ಮಧ್ಯಾಹ್ನ 3ರವರೆಗೆ ನಿರಂತರವಾಗಿ ಜನಸಾಗರ ಹರಿದುಬಂದ ದೃಶ್ಯ ಮಹಾರಾಜ ಕಾಲೇಜು ಮೈದಾನವನ್ನು ಭಾವನೆಗಳ ಸಾಗರವಾಗಿಸಿತ್ತು.
ರಾಜ್ಯದ ವಿವಿಧ ಜಿಲ್ಲೆಗಳ ಜತೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದಲೂ ಅಭಿಮಾನಿಗಳು, ಕಲಾವಿದರು ಮತ್ತು ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಜಾನಕಿ ಅವರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಹಲವರು ಭಾವುಕರಾದರು.
ಅಂತಿಮ ದರ್ಶನ ಮುಗಿದ ಬಳಿಕ ಪಾರ್ಥಿವ ಶರೀರವನ್ನು ಅಲಂಕೃತ ವಾಹನದಲ್ಲಿ ಕಣಿಯನಹುಂಡಿಯತ್ತ ಕೊಂಡೊಯ್ಯುವಾಗ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ನೂರಾರು ಅಭಿಮಾನಿಗಳು ಕೈಮುಗಿದು ಕಣ್ಣೀರಿನ ವಿದಾಯ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net