ಫುಟ್‌ಪಾತ್ ಒತ್ತುವರಿ ಕಾರ್ಯಾಚರಣೆ ಕುರಿತು ಪ್ರಾದೇಶಿಕ ಆಯುಕ್ತರೂ ಆದ ಮಹಾನಗರ ಪಾಲಿಕೆ ಆಡಳಿತ ಅಧಿಕಾರಿ ನಿತೇಶ್ ಪಾಟೀಲ್ ಅವರು ಪಾಲಿಕೆ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಎಂ.ಕೆ.ಸವಿತಾ, ಶಿವಶಂಕರ್ ಇನ್ನಿತರರಿದ್ದರು.
ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಬಳಿಕವೂ ಮತ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ಮುಂದುವರಿಯುತ್ತಿದ್ದು, ಅಂತಹವರ ವಿರುದ್ಧ ದಂಡಾಸ್ತ್ರ ಪ್ರಯೋಗ ಮಾಡಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.
ಪಾಲಿಕೆಯ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ಈ ವಿಷಯದ ಕುರಿತು ಪ್ರಾದೇಶಿಕ ಆಯುಕ್ತರೂ ಆದ ಮಹಾನಗರ ಪಾಲಿಕೆ ಆಡಳಿತ ಅಧಿಕಾರಿ ನಿತೇಶ್ ಪಾಟೀಲ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಪಾಲಿಕೆ ವ್ಯಾಪ್ತಿಯಲ್ಲಿನ ಮುಖ್ಯರಸ್ತೆಗಳ ಬದಿಯಲ್ಲಿನ ಸಾರ್ವಜನಿಕ ಕಾಲುದಾರಿ ಒತ್ತುವರಿ ತೆರವು ಕಾರ್ಯಾಚರಣೆ ದಸರಾದೊಳಗೆ ಪೂರ್ಣಗೊಳ್ಳಬೇಕು ಎಂದು ಎಲ್ಲ ವಲಯ ಅಧಿಕಾರಿಗಳಿಗೂ ತಾಕೀತು ಮಾಡಿದರು.
ಈಗಾಗಲೇ ಕೆಲ ಕಡೆ ಫುಟ್‌ಪಾತ್ ಒತ್ತುವರಿ ತೆರವು ಮಾಡಲಾಗಿದೆ. ಕೆಲ ದಿನಗಳ ಬಳಿಕ ಅದೇ ಜಾಗವನ್ನು ಕೆಲವರು ಅನಧಿಕೃತವಾಗಿ ಅತಿಕ್ರಮಣ ಮಾಡಿಕೊಂಡು ವ್ಯಾಪಾರ ವಹಿವಾಟು ಕೈಗೊಳ್ಳುತ್ತಿದ್ದಾರೆ.
ಹೀಗೆ ಲೋಪ ಎಸಗುವ ವರ್ತಕರಿಗೆ ನೋಟಿಸ್ ಜಾರಿ ಮಾಡಿ ದಂಡ ವಸೂಲಿ ಮಾಡಿ. ಅದಕ್ಕಾಗಿ ಪಾಲಿಕೆಯಿಂದಲೇ 30 ಮಾರ್ಷಲ್‌ಗಳನ್ನು ನೇಮಕ ಮಾಡಲಾಗುವುದು. ಸದ್ಯಕ್ಕೆ ಎಫ್‌ಐಆರ್ ದಾಖಲಿಸುವುದು ಬೇಡ ಎಂದು ತಿಳಿಸಿದರು.
ಫುಟ್‌ಪಾತ್ ಮತ್ತೆ ಆಕ್ರಮಿಸಿಕೊಳ್ಳದಂತೆ ನಿಗಾ ವಹಿಸಲು ಪಾಲಿಕೆಯ ಅಭಯ್ ತಂಡ, ಪೊಲೀಸರನ್ನು ಒಳಗೊಂಡ ‘ನಗರಗಸ್ತು ಪಡೆ’ ರಚನೆ ಮಾಡಲಾಗುವುದು ಎಂದು ತಿಳಿಸಿದರು.
ಕಾಲುದಾರಿ ಒತ್ತುವರಿ ತೆರವು
ದಸರಾ ಜಂಬೂ ಸವಾರಿ ಸಾಗುವ ರಾಜಮಾರ್ಗದಲ್ಲಿ ಯಾವುದೇ ಕಾರಣಕ್ಕೂ ಅನಧಿಕೃತ ವ್ಯಾಪಾರಕ್ಕೆ ಅವಕಾಶ ಇಲ್ಲ. ಕಾಲುದಾರಿ ಆಕ್ರಮಣವನ್ನು ತೆರವುಗೊಳಿಸಲೇಬೇಕು. ನಗರ ಪ್ರಮುಖ ರಸ್ತೆಗಳು, ಪ್ರವಾಸಿ ತಾಣಗಳಲ್ಲಿ ಇದುವೇ ಮೊದಲು ಆದ್ಯತೆಯಾಗಬೇಕು ಎಂದು ಪಾಟೀಲ್ ತಿಳಿಸಿದರು.
ಈ ಕಾರ್ಯಾಚರಣೆಗೆ ರಾಜಕೀಯ ಒತ್ತಡ ಬಂದಿಲ್ಲ. ಹಸ್ತಕ್ಷೇಪವನ್ನೂ ಮಾಡಿಲ್ಲ. ಎಲ್ಲ ರಾಜಕಾರಣಿಗಳು, ಜನಪ್ರತಿನಿಧಿಗಳು ಸಹಕಾರ ಕೊಟ್ಟಿದ್ದಾರೆ. ಪಾಲಿಕೆ ಅಧಿಕಾರಿಗಳು ನಿರಾತಂಕವಾಗಿ ಮುಂದುವರಿಯಬೇಕು ಎಂದು ತಿಳಿಸಿದರು.
ತೆರವಿನ ಬಳಿಕ ಕಾಲುದಾರಿಯಲ್ಲೇ ಅವಶೇಷ ಬಿಟ್ಟುಹೋಗಲಾಗುತ್ತಿದೆ. ಇದು ಸರಿಯಲ್ಲ. ಕಾರ್ಯಾಚರಣೆ ಬಳಿಕವೇ ಅದನ್ನೂ ತೆರವುಗೊಳಿಸಿ ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದರು.
ಈ ಕಾರ್ಯಾಚರಣೆಯಿಂದ ಹಾಳಾಗಿರುವ ಫುಟ್‌ಪಾತ್‌ಗಳ ದುರಸ್ತಿಗಾಗಿ ಪಾಲಿಕೆಯಿಂದ 10 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ದುರಸ್ತಿ ಕೆಲಸಗಳ ಪಟ್ಟಿಕೊಡಿ ಎಂದು ತಿಳಿಸಿದರು.
ಫುಟ್‌ಪಾತ್ ಮೇಲೆ ಬೀದಿಬದಿ ವ್ಯಾಪಾರಕ್ಕೆ ‘ನಿರ್ಬಂಧಿತ ಪ್ರದೇಶ’ ಎಂಬ ನಾಮಫಲಕ ಹಾಕಬೇಕು. ಅಲ್ಲಿ ಯಾವುದೇ ಕಾರಣಕ್ಕೂ ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಿಕೊಡಬಾರದು ಎಂದು ಅಧಿಕಾರಿಗಳಿಗೆ ಹೇಳಿದರು.
ಬೀದಿಬದಿ ವ್ಯಾಪಾರಕ್ಕಾಗಿ ನಗರದ 52 ಪ್ರದೇಶದಲ್ಲಿ ಜಾಗ ಗುರುತಿಸಲಾಗಿದೆ. ಪರ್ಯಾಯ ಸ್ಥಳವನ್ನೂ ಕಲ್ಪಿಸಲಾಗಿದೆ. ಎಂಎಡಿ(ಮುಡಾ) ನಿರ್ಮಿಸಿರುವ 11 ರೈತರ ಮಾರುಕಟ್ಟೆಗಳಲ್ಲೂ ವ್ಯಾಪಾರ ಮಾಡಲಿ. ಇಂತಹ ಕಡೆ ‘ವ್ಯಾಪಾರ ಸ್ಥಳ’ ಎಂದು ನಾಮಫಲಕ ಅಳವಡಿಸಬೇಕು. ಇಂತಹ ಕಡೆಗೆ ಹೋಗಿ ವರ್ತಕರು ವ್ಯಾಪಾರ ಮಾಡಲು ಅರಿವು ಮೂಡಿಸಬೇಕು ಎಂದು ಹೇಳಿದರು.
ವಿಸ್ತಾರವಾದ ಕಾಲುದಾರಿಯಲ್ಲಿ ಶೇ.30ರಷ್ಟು ಬೀದಿಬದಿ ವ್ಯಾಪಾರಕ್ಕೆ, ಶೇ.70 ಜಾಗ ಜನರ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಡಬಹುದು. ಆದರೆ, ಇದು ಎಲ್ಲ ಕಡೆ ಆಗಬಾರದು ಎಂದೂ ಹೇಳಿದರು .
ಗಲ್ಲಿಯಲ್ಲಿ ಖಾಸಗಿ ವ್ಯಕ್ತಿಗಳಿಂದ ಬಾಡಿಗೆ ವಸೂಲಿ
ಗಲ್ಲಿ ಪ್ರದೇಶವೂ ಒತ್ತುವರಿಯಾಗಿದ್ದು, ಕಾಂಪೌಂಡ್, ಕಾರ್ ಶೆಡ್ ಮಾಡಿಕೊಂಡು ಖಾಸಗಿ ಜಾಗವನ್ನಾಗಿ ಮಾಡಿಕೊಂಡಿದ್ದಾರೆ. ಕೆಲ ಖಾಸಗಿ ವ್ಯಕ್ತಿಗಳು ಬಾಡಿಗೆ ಸಹ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಗಲ್ಲಿ ಪ್ರದೇಶವು ಪಾಲಿಕೆ ಆಸ್ತಿ. ಇದು ಸಹ ತೆರವು ಆಗಬೇಕು. ಅದನ್ನೂ ಪಾರ್ಕಿಂಗ್ ಸೇರಿದಂತೆ ಇನ್ನಿತರ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಬೇಕು. ಬೀದಿ ಬದಿ ವ್ಯಾಪಾರಕ್ಕೂ ಅವಕಾಶವಿದ್ದರೆ ಕಲ್ಪಿಸಿ ಎಂದು **** ತಿಳಿಸಿದರು.
ಅನಾಥ ವಾಹನವೂ ತೆರವು
ಫುಟ್‌ಪಾತ್, ರಸ್ತೆಯಲ್ಲೇ ಅನಧಿಕೃತ ವಾಹನಗಳನ್ನೂ ನಿಲುಗಡೆ ಮಾಡಲಾಗುತ್ತಿದೆ. ಬಿಬಿಎಂಪಿ ಮಾದರಿಯಲ್ಲೂ ಕಾರ್ಯಾಚರಣೆ ನಡೆಸಿ ಇವುಗಳನ್ನು ತೆರವುಗೊಳಿಸಬೇಕು. ವಿದ್ಯಾರಣ್ಯಪುರಂನ ಸಿವೇಜ್ ಫಾರಂನಲ್ಲಿ ಇಂತಹ ವಾಹನಗಳನ್ನು ಹಾಕಬೇಕು. ಅಲ್ಲಿಯ ಭದ್ರತೆಗಾಗಿ ಪೊಲೀಸ್ ಇಲಾಖೆಯಿಂದ ನೀಡುವ ಗೃಹರಕ್ಷಕ ದಳದ ಸಿಬ್ಬಂದಿಯ ವೇತನ, ಸಿಸಿ ಕ್ಯಾಮರಾ ವ್ಯವಸ್ಥೆಯಿಂದ ಪಾಲಿಕೆಯಿಂದ ಮಾಡಲಾಗುತ್ತದೆ ಎಂದು ಪಾಟೀಲ್ ತಿಳಿಸಿದರು.
ಎಸ್‌ಒಪಿ ರಚನೆ:
ಈ ಕಾರ್ಯಚರಣೆ ಕಟ್ಟುನಿಟ್ಟಾಗಿ ನಡೆಸಲು ಪಾಲಿಕೆಯಿಂದಲೇ ಪ್ರಮಾಣಿತ ಕಾರ್ಯವಿಧಾನವನ್ನು(ಎಸ್‌ಒಪಿ) ರಚನೆ ಮಾಡಲಾಗವುದು. ಆ ಪ್ರಕಾರ ಎಲ್ಲ ಪಾಲಿಕೆಯ ವಲಯಗಳಲ್ಲೂ ಕೆಲಸವಾಗಬೇಕು. ಇದಕ್ಕೆ ವಲಯ ಆಯುಕ್ತರು, ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು ಜವಾಬ್ದಾರಿ ಎಂದು ಆಯುಕ್ತೆ ಎಂ.ಕೆ.ಸವಿತಾ ತಿಳಿಸಿದರು.
ನಗರದ ಪ್ರಮುಖ ರಸ್ತೆಗಳು, ವಾಣಿಜ್ಯ ಪ್ರದೇಶದಲ್ಲಿರುವ ರಸ್ತೆಯ ಫುಟ್‌ಪಾತ್ ಒತ್ತುವರಿ ತೆರವಿಗೆ ಆದ್ಯತೆ ಕೊಡಬೇಕು. ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳು, ಅಪಘಾತ ಆಗುವ ಸಾಧ್ಯತೆ ಇರುವ ಕಡೆ ಇದು ಮೊದಲು ನಡೆಯಬೇಕು. 10 ಸ್ಥಳಗಳ ಆದ್ಯತಾ ಪಟ್ಟಿ ಕೊಡಿ. ಆ ಪ್ರಕಾರವೇ ಕೆಲಸವಾಗಬೇಕು ಎಂದು ಆಯುಕ್ತೆ ಸೂಚಿಸಿದರು.
ಡಿಸಿಪಿ ಸುಂದರ್‌ರಾಜ್ ಮಾತನಾಡಿ, ಪಾಲಿಕೆ ಕೈಗೊಂಡಿರುವ ಈ ಕಾರ್ಯಾಚರಣೆಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ಕೊಡಲಾಗುವುದು. ಅಗತ್ಯ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗುವುದು ಎಂದು ತಿಳಿಸಿದರು. ಎಸಿಪಿ ಶಿವಶಂಕರ್, ಪಾಲಿಕೆ ಅಧಿಕಾರಿಗಳಿದ್ದರು
ರಾಜಮಾರ್ಗವೂ ಹೊರತಲ್ಲ
ದಸರಾ ಕೆಲಸಕ್ಕಾಗಿ 6 ಕೋಟಿ ರೂ. ಬಿಡುಗಡೆಯಾಗಿದ್ದು, ಟೆಂಡರ್ ಕರೆದು ಕೆಲಸ ಶುರು ಮಾಡಲಾಗುವುದು. ತೆರವು ಕಾರ್ಯಾಚರಣೆಯಿಂದ ಹಾನಿಯಾಗಿರುವ ರಾಜಮಾರ್ಗದ ಫುಟ್‌ಪಾತ್ ದುರಸ್ತಿ ಕೆಲಸವೂ ಈ ಅನುದಾನದಲ್ಲೇ ಆಗಬೇಕು. ರಸ್ತೆ ಸಂಚಾರದ ಕುರಿತು ಪೊಲೀಸ್ ಇಲಾಖೆ ಕೆಲಸವನ್ನೂ ಸೇರಿಸಿಕೊಳ್ಳಬೇಕು ಎಂದೂ ನಿರ್ದೇಶಿಸಿದರು.