ಕಡಿಮೆ ಅವಧಿಯಲ್ಲಿ ಸೆಸ್ಕ್‌ನಿಂದ ಹಲವು ಪ್ರಗತಿ: ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್‌ರಾಜು ಮಾಹಿತಿ

ಹಿನಕಲ್‌ನ ಸೆಸ್ಕ್ ಪ್ರಧಾನ ಕಚೇರಿಯಲ್ಲಿ  ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೃತ ಸಿಬ್ಬಂದಿ ಕುಟುಂಬಕ್ಕೆ ಪರಿಹಾರದ ಚೆಕ್ ಹಸ್ತಾಂತರಿಸಲಾಯಿತು. ಕೆ.ಎಂ.ಮುನಿಗೋಪಾಲ್‌ರಾಜು, ಡಿ.ಜೆ. ದಿವಾಕರ್, ಶರಣಮ್ಮ ಎಸ್. ಜಂಗಿನ, ಜಿ.ರೇಣುಕಾ, ಡಾ.ಬಿ.ಆರ್.ರೂಪಾ, ಸವಿತಾ ಹೂಗಾರ್, ಉಮೇಶ್ ಇತರರಿದ್ದರು.
ಹಿನಕಲ್‌ನ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೃತ ಸಿಬ್ಬಂದಿ ಕುಟುಂಬಕ್ಕೆ ಪರಿಹಾರದ ಚೆಕ್ ಹಸ್ತಾಂತರಿಸಲಾಯಿತು. ಕೆ.ಎಂ.ಮುನಿಗೋಪಾಲ್‌ರಾಜು, ಡಿ.ಜೆ. ದಿವಾಕರ್, ಶರಣಮ್ಮ ಎಸ್. ಜಂಗಿನ, ಜಿ.ರೇಣುಕಾ, ಡಾ.ಬಿ.ಆರ್.ರೂಪಾ, ಸವಿತಾ ಹೂಗಾರ್, ಉಮೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಂಧನ ಇಲಾಖೆ ಜಾರಿಗೊಳಿಸುವ ಯೋಜನೆಗಳನ್ನು ಸೆಸ್ಕ್ ಸಮರ್ಪಕವಾಗಿ ಜಾರಿಗೊಳಿಸುತ್ತಿದೆ
  • ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಎಲ್ಲರೂ ಒಗ್ಗೂಡಿ ಸಂಸ್ಥೆಯ ಮತ್ತಷ್ಟು ಪ್ರಗತಿಗೆ ಶ್ರಮಿಸೋಣ
ಮೈಸೂರು: ಕುಸುಮ್-ಸಿ ಹಾಗೂ ಕುಸುಮ್-ಬಿ ಯೋಜನೆಗಳ ಸಮರ್ಪಕ ಅನುಷ್ಠಾನ ಸೇರಿದಂತೆ ಸಿಬ್ಬಂದಿಗೆ ಆರೋಗ್ಯ ಸೇವೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಕಡಿಮೆ ಸಮಯ, ಕಡಿಮೆ ವೆಚ್ಚದಲ್ಲಿ ಹಲವು ಪ್ರಗತಿ ಸಾಧಿಸಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್‌ರಾಜು ತಿಳಿಸಿದರು.
ಹಿನಕಲ್‌ನಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ) ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಇಂಧನ ಇಲಾಖೆ ಜಾರಿಗೊಳಿಸುವ ಯೋಜನೆಗಳನ್ನು ಸೆಸ್ಕ್ ಸಮರ್ಪಕವಾಗಿ ಜಾರಿಗೊಳಿಸುತ್ತಿದೆ. ಸಿಬ್ಬಂದಿ ಸುರಕ್ಷತೆಗೂ ಒತ್ತು ನೀಡಿ ಆರೋಗ್ಯದ ಕಡೆಗೂ ಗಮನ ನೀಡಲಾಗುತ್ತಿದೆ. ಜನರಿಗೆ ಇನ್ನಷ್ಟು ಸಮರ್ಪಕ ಸೇವೆ ನೀಡಲು ಇಲಾಖೆಯ ಯೋಜನೆಗಳನ್ನು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಎಲ್ಲರೂ ಒಗ್ಗೂಡಿ ಸಂಸ್ಥೆಯ ಮತ್ತಷ್ಟು ಪ್ರಗತಿಗೆ ಶ್ರಮಿಸೋಣ ಎಂದು ಹೇಳಿದರು.
ಗಣರಾಜ್ಯೋತ್ಸವ ದಿನದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ನೆನೆಯುತ್ತಾ, ಅವರ ಆದರ್ಶಗಳನ್ನು ನಾವೆಲ್ಲ ಪಾಲಿಸಬೇಕಿದೆ. ಜತೆಗೆ ನಮ್ಮ ದೇಶ ಹಾಗೂ ರಾಜ್ಯವನ್ನು ಪ್ರಗತಿಯತ್ತ ಮುನ್ನಡೆಸಲು ನಾವೆಲ್ಲರೂ ಪಣ ತೊಡಬೇಕಿದೆ ಎಂದರು.
ಐದು ಸಾವಿರ ಮೆವಾ ವಿದ್ಯುತ್ ಉತ್ಪಾದಿಸಿ, ಗ್ರಿಡ್‌ಗೆ ಸೇರ್ಪಡೆ ಮಾಡಲು ಕ್ರಮವಹಿಸಲಾಗಿದೆ. ಅಲ್ಲದೇ ಟ್ರಾನ್ಸ್‌ಮಿಷನ್ ವಿಭಾಗದಲ್ಲೂ ಸೆಸ್ಕ್ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಕಳೆದ ಎರಡು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಅನೇಕ ಕೆಲಸಗಳನ್ನು ಮಾಡಲಾಗಿದೆ. 90 ವಿತರಣಾ ಕೇಂದ್ರಗಳು ಹಾಗೂ ಪ್ರಸರಣ ಕೇಂದ್ರಗಳನ್ನು ಬಲಪಡಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಕುಸುಮ್-ಸಿ ಯೋಜನೆ ಅಡಿಯಲ್ಲಿ ಚಾವಿಸಾನಿನಿ ವ್ಯಾಪ್ತಿಯಲ್ಲಿ 900 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಕ್ರಮವಹಿಸಲಾಗಿದೆ. ಬೇಸಿಗೆ ವೇಳೆಯಲ್ಲಿ ವಿದ್ಯುತ್ ಪೂರೈಕೆಗೆ ಒತ್ತಡ ಎದುರಾಗಲಿದ್ದು, ಈ ನಿಟ್ಟಿನಲ್ಲಿ 900 ಮೆ.ವಾ. ವಿದ್ಯುತ್ ಉತ್ಪಾದನೆಯಾದರೆ ಮಾರ್ಚ್ ವೇಳೆಗೆ 600 ಮೆ.ವಾ. ಸೆಸ್ಕ್ ವ್ಯಾಪ್ತಿಗೆ ಸೇರಲಿದೆ ಎಂದು ಹೇಳಿದರು.
ಕುಸುಮ್-ಬಿ ಯೋಜನೆಯಲ್ಲಿ 6000 ರೈತರು ಲಾಭ ಪಡೆದಿದ್ದು, 60 ಮೆ.ವಾ.ವಿದ್ಯುತ್ ಗ್ರಿಡ್‌ನಿಂದ ರೈತರಿಗೆ ಲಭ್ಯವಾಗಲಿದೆ. ಹೀಗಾಗಿ ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದರು.
ಮುಡಾದಿಂದ 22 ಸೈಟ್‌ಗಳನ್ನು ಸೆಸ್ಕ್ ವ್ಯಾಪ್ತಿಗೆ ಪಡೆಯಲಾಗಿದೆ. ಕಚೇರಿ ಹಾಗೂ ಸ್ಟೋರ್‌ಗಳನ್ನು ನಿರ್ಮಿಸಲಾಗುವುದು, ಸ್ಟೇಷನ್ ನಿರ್ಮಾಣಕ್ಕೆ 10 ನಿವೇಶನ ಪಡೆಯಲಾಗಿದೆ. ಹೊಸದಾಗಿ 11 ಕೆವಿ ಮಾರ್ಗಗಳನ್ನು ನಿರ್ಮಾಣಕ್ಕೆ ಸುಮಾರು 100-120 ಹೊಸ ಕೇಂದ್ರಗಳನ್ನು ನಿರ್ಮಿಸಲು ಕ್ರಮ ವಹಿಸಲಾಗಿದ್ದು, ಇದರಿಂದ ವಿದ್ಯುತ್ ಸೋರಿಕೆ, ವಿದ್ಯುತ್ ಅಡಚಣೆ ಹಾಗೂ ನಷ್ಟ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಜತೆಗೆ ಕೊಡಗು ಜಿಲ್ಲೆ ವಿದ್ಯುತ್ ಸಮಸ್ಯೆ ಬಗೆಹರಿಸಲು ಹಾಗೂ ವಿದ್ಯುತ್ ಪೂರೈಕೆ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ 10-15 ವರ್ಷಗಳಿಂದ ಆಗದ ಕೆಲಸವನ್ನು ಕಡಿಮೆ ಅವಧಿಯಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗಿದೆ. ಪಾರಂಪರಿಕ ಹಾಗೂ ಅರಮನೆಗಳ ನಗರಿ ಮೈಸೂರು ನಗರದಲ್ಲಿ ವಿದ್ಯುತ್ ಯುಜಿ ಕೇಬಲ್ ಅಳವಡಿಕೆ, ಹಾಡಿಗಳಲ್ಲಿ ವಿದ್ಯುದ್ದೀಕರಣಕ್ಕೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
1.06 ಕೋಟಿ ರೂ. ಪರಿಹಾರ ವಿತರಣೆ:
ಕರ್ತವ್ಯ ನಿರ್ವಹಣೆ ವೇಳೆ ವಿದ್ಯುತ್ ಅವಘಡದಿಂದ ಇತ್ತೀಚೆಗೆ ಮೃತಪಟ್ಟ ಹನೂರು ಉಪ ವಿಭಾಗ ವ್ಯಾಪ್ತಿಯ ಸೆಸ್ಕ್ ಸಿಬ್ಬಂದಿ ಟಿ.ರಾಹುಲ್ ಕುಟುಂಬಕ್ಕೆ 1.06 ಕೋಟಿ ರೂ. ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು.
ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ.ದಿವಾಕರ್, ಮುಖ್ಯ ಪ್ರಧಾನ ವ್ಯವಸ್ಥಾಪಕಿ (ತಾಂತ್ರಿಕ) ಶರಣಮ್ಮ ಎಸ್.ಜಂಗಿನ, ಮುಖ್ಯ ಆರ್ಥಿಕ ಅಧಿಕಾರಿ ಜಿ.ರೇಣುಕಾ, ಪ್ರಧಾನ ವ್ಯವಸ್ಥಾಪಕಿ (ಆ ಮತ್ತು ಮಾ.ಸಂ) ಡಾ.ಬಿ.ಆರ್.ರೂಪಾ, ಸೆಸ್ಕ್ ಜಾಗೃತ ದಳದ ಎಸ್ಪಿ ಸವಿತಾ ಹೂಗಾರ್, ಕೆನರಾ ಬ್ಯಾಂಕ್ ವಲಯ ವ್ಯವಸ್ಥಾಪಕ ಉಮೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net