ಗಂಗೋತ್ರಿಯಲ್ಲೊಂದು ‘ಲೆಗಸಿ ಲಾಂಜ್’ ಮ್ಯೂಸಿಯಂ, ಗಮನ ಸೆಳೆಯುತ್ತಿವೆ ಹಳೆಯ ಎಲೆಕ್ಟ್ರಾನಿಕ್ಸ್ ಸಾಧನಗಳು, ಉಪಕರಣಗಳು

ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಇಎಂಆರ್‌ಸಿಯಲ್ಲಿನ ‘ಲೆಗಸಿ ಲಾಂಜ್’
ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಇಎಂಆರ್‌ಸಿಯಲ್ಲಿನ ‘ಲೆಗಸಿ ಲಾಂಜ್’
Published on

ಪ್ರಮುಖ ಮುಖ್ಯಾಂಶಗಳು

  • ಇಎಂಆರ್‌ಸಿಯು ತನಗೆ ಇರುವ ಸೀಮಿತ ಜಾಗದಲ್ಲೇ ಈ ಮ್ಯೂಸಿಯಂ ಅನ್ನು ರೂಪಿಸಿ, ಮುಂದಿನ ಪೀಳಿಗೆಗೆ ಎಲೆಕ್ಟ್ರಾನಿಕ್ಸ್ ಉಪಕರಣಗಳು ಬೆಳೆದು ಬಂದ ಹಾದಿ, ಅವುಗಳು ವಿಕಸನ-ಅಭಿವೃದ್ಧಿ ಹೊಂದಿದ ರೀತಿಯನ್ನು ತಿಳಿಸಿಕೊಡುತ್ತಿದೆ
  • 1932ರ ಇಸವಿಯಿಂದೀಚಿಗಿನ ಮೈಕ್ರೋಫೋನ್‌ಗಳು, ಹೆವಿ ಡ್ಯೂಟಿಯ ಲೈಟ್‌ಗಳು, ಲೈಟ್ ಸ್ಟಾೃಂಡ್‌ಗಳು, ಲೈಟ್‌ಗಳ ಫಿಲ್ಟರ್‌ಗಳು, ವಿಸಿಆರ್, ವಿಸಿಎಚ್, ರೆಕಾರ್ಡಿಂಗ್ ಪ್ಲೇಯರ್, ವಿಸಿಆರ್ ಕ್ಯಾಸೆಟ್‌ಗಳು, ಅರ್ಧ ಗಂಟೆ ಅವಧಿ, ಒಂದು ಗಂಟೆ ಅವಧಿಯ ಟೇಪ್‌ವುಳ್ಳ ಕ್ಯಾಸೆಟ್‌ಗಳು, ಮಿಕ್ಸರ್, ಟ್ರೈಪಾಡ್ಸ್ ಸೇರಿದಂತೆ ಆಗಿನ ಕಾಲದಲ್ಲಿ ಸ್ಟುಡಿಯೋ ಸೆಟ್‌ಅಪ್‌ಗೆ ಬಳಕೆಯಾಗುತ್ತಿದ ಉಪಕರಣಗಳನ್ನು ನೋಡಬಹುದಾಗಿದೆ
  • ದೇಶದಲ್ಲಿ 21 ಮಲ್ಟಿ ಮೀಡಿಯಾ ರಿಸರ್ಚ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಮ್ಯೂಸಿಯಂ ಮಾಡಿರುವುದು ಮೈಸೂರಿನ ಕೇಂದ್ರವೇ ಮೊದಲು. ಹೀಗಾಗಿ ಯಾವ ರೀತಿ ಮಾಡಿದ್ದಾರೆ ಎನ್ನುವುದನ್ನು ತಿಳಿಯುವುದಕ್ಕೆ ಚೆನ್ನೈ, ಹೈದರಾಬಾದ್ ಮುಂತಾದ ಕಡೆಯಿಂದ ತಜ್ಞರು ಬಂದು ನೋಡಿಕೊಂಡು ಹೋಗಿದ್ದಾರೆ
ಮೈಸೂರು: ಅರವತ್ತು-ಎಪ್ಪತ್ತು ವರ್ಷದ ಹಿಂದಿನ ರೇಡಿಯೋ ಅಥವಾ ಗ್ರಾಮಾಫೋನ್‌ಗಳನ್ನು ಈಗಿನ ಜಮಾನದವರು ನೋಡಬೇಕು ಎಂದರೆ ಡಾ.ರಾಜಕುಮಾರ್ ಅವರ ಕಾಲದ ಯಾವುದಾದರೂ ಹಳೆಯ ಸಿನಿಮಾ ವೀಕ್ಷಣೆ ಮಾಡಬೇಕು. ಆ ಸಿನಿಮಾಗಳಲ್ಲಿ  ದೃಶ್ಯಗಳನ್ನು ನೋಡಿ ಇದೇ ರೇಡಿಯೋ, ಇದೇ ಗ್ರಾಮಾಫೋನ್ ಎಂಬ ಕುತೂಹಲ ತಣಿಸಿಕೊಳ್ಳಬೇಕು. ಆದರೆ, ಇಂತಹ ಕುತೂಹಲಿಗಳು ಹಳೆಯ ರೇಡಿಯೋ, ಗ್ರಾಮಾಫೋನ್ ಅಲ್ಲದೇ ಬೇರೆ ಎಲೆಕ್ಟ್ರಾನಿಕ್ಸ್ ಉಪಕರಣಗಳು ಹಾಗೂ ಸಾಧನಗಳನ್ನು ಒಂದೇ ಸೂರಿಡಿ ನೋಡುವ ಅವಕಾಶವನ್ನು ಇಎಂಆರ್‌ಸಿಯು ಕಲ್ಪಿಸಿಕೊಟ್ಟಿದೆ.
ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಇಎಂಆರ್‌ಸಿ (ಎಜುಕೇಷನಲ್ ಮಲ್ಟಿ ಮೀಡಿಯಾ ರಿಸರ್ಚ್ ಸೆಂಟರ್)ಯು ತನ್ನ ಸಂಶೋಧನಾ ಕಾರ್ಯಗಳು ಹಾಗೂ ಕೆಲಸಗಳಿಗೆ ಬಳಕೆ ಮಾಡಿಕೊಂಡಿದ್ದ ಹಳೆಯ ಎಲೆಕ್ಟ್ರಾನಿಕ್ಸ್ ಸಾಧನಗಳು ಹಾಗೂ ಉಪಕರಣಗಳನ್ನು ಒಂದು ಕಡೆ ಒಪ್ಪ ಒರಣವಾಗಿ ಇಟ್ಟು ‘ಲೆಗಸಿ ಲಾಂಜ್’ ಹೆಸರನ್ನು ನಾಮಕರಣ ಮಾಡಿ ಮ್ಯೂಸಿಯಂ ರೂಪ ಕೊಟ್ಟಿದೆ.
ಇಎಂಆರ್‌ಸಿಯು ತನಗೆ ಇರುವ ಸೀಮಿತ ಜಾಗದಲ್ಲೇ ಈ ಮ್ಯೂಸಿಯಂ ಅನ್ನು ರೂಪಿಸಿ, ಮುಂದಿನ ಪೀಳಿಗೆಗೆ ಎಲೆಕ್ಟ್ರಾನಿಕ್ಸ್ ಉಪಕರಣಗಳು ಬೆಳೆದು ಬಂದ ಹಾದಿ, ಅವುಗಳು ವಿಕಸನ-ಅಭಿವೃದ್ಧಿ ಹೊಂದಿದ ರೀತಿಯನ್ನು ತಿಳಿಸಿಕೊಡುತ್ತಿದೆ. ಅಲ್ಲದೆ, ನೋಡಲು ಬಂದವರಿಗೆ ಉಪಕರಣಗಳ ಇತಿಹಾಸ, ಅವುಗಳನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನುವುದರ ಬಗ್ಗೆಯೂ ಕಿರು ಮಾಹಿತಿ ನೀಡಲಾಗುತ್ತಿದೆ.

ಗಮನ ಸೆಳೆಯುತ್ತಿವೆ ಹಳೇ ಉಪಕರಣಗಳು

ಹೇಳಿ-ಕೇಳಿ ಇಎಂಆರ್‌ಸಿಯು ಬಹು ಮಾಧ್ಯಮವನ್ನು ಸಂಶೋಧನಾ ಮಾಡುವ ಕೇಂದ್ರವಾಗಿದೆ. ಇಲ್ಲಿ ದೃಶ್ಯ-ಶ್ರವ್ಯ ಮಾಧ್ಯಮದ ನಿರ್ವಹಣೆಗೆ ಉಪಕರಣಗಳು, ಸಾಧನಗಳು ಅಗತ್ಯವಾಗಿ ಬೇಕೇಬೇಕು. ಈ ಉಪಕರಣಗಳು ಕಾಲ ಕಳೆದಂತೆ ಹಾಗೂ ಹೊಸ ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಉಪಯೋಗಕ್ಕೆ ಬಾರದಂತೆ ಆಗುತ್ತವೆ. ಆಗ ಇಂತಹ ಉಪಕರಣಗಳು ಕಚೇರಿಯ ಗೋದಾಮಿನ ಮೂಲೆಯಲ್ಲಿ ತಣ್ಣಗೆ ಮುದುರಿಕೊಂಡು ಕುಳಿತು ಬಿಡುತ್ತವೆ. ಆದರೆ, ಇಎಂಆರ್‌ಸಿಯ ಇವುಗಳನ್ನೇ ಸ್ವಚ್ಛಗೊಳಸಿ, ಒಂದು ಕಡೆ ಜೋಡಿಸಿಟ್ಟು, ಹೀಗೂ ಮಾಡಬಹುದು ಎನ್ನುವುದಕ್ಕೆ ‘ಮಾದರಿ’ಯನ್ನು ರೂಪಿಸಿದೆ.

ಏನೇನಿದೆ?

1980-2010ರ ಅವಧಿಯಲ್ಲಿ ಚಿತ್ರೀಕರಣ ಮಾಡಲು ಬಳಸುತ್ತಿದ್ದ ಬೀಟಾ ವಿಡಿಯೋ ಕ್ಯಾಮರಾಗಳು, ರೇಡಿಯೋ ಕಾರ್ಯಕ್ರಮಗಳು ಹಾಗೂ ಟಿವಿ ಸಂದರ್ಶನಗಳಲ್ಲಿ ಮಾತನಾಡುವವರ ಕಾಲರ್‌ಗಳಿಗೆ ಅಳವಡಿಸುತ್ತಿದ್ದ 1932ರ ಇಸವಿಯಿಂದೀಚಿಗಿನ ಮೈಕ್ರೋಫೋನ್‌ಗಳು, ಹೆವಿ ಡ್ಯೂಟಿಯ ಲೈಟ್‌ಗಳು, ಲೈಟ್ ಸ್ಟಾೃಂಡ್‌ಗಳು, ಲೈಟ್‌ಗಳ ಫಿಲ್ಟರ್‌ಗಳು, ವಿಸಿಆರ್, ವಿಸಿಎಚ್, ರೆಕಾರ್ಡಿಂಗ್ ಪ್ಲೇಯರ್, ವಿಸಿಆರ್ ಕ್ಯಾಸೆಟ್‌ಗಳು, ಅರ್ಧ ಗಂಟೆ ಅವಧಿ, ಒಂದು ಗಂಟೆ ಅವಧಿಯ ಟೇಪ್‌ವುಳ್ಳ ಕ್ಯಾಸೆಟ್‌ಗಳು, ಮಿಕ್ಸರ್, ಟ್ರೈಪಾಡ್ಸ್ ಸೇರಿದಂತೆ ಆಗಿನ ಕಾಲದಲ್ಲಿ ಸ್ಟುಡಿಯೋ ಸೆಟ್‌ಅಪ್‌ಗೆ ಬಳಕೆಯಾಗುತ್ತಿದ ಉಪಕರಣಗಳನ್ನು ನೋಡಬಹುದಾಗಿದೆ. ಇದಲ್ಲದೆ ಕ್ಯಾಮರಾಗಳನ್ನು ಸಾಗಣೆ ಮಾಡಲು ಬಳಸುತ್ತಿದ್ದ ದೊಡ್ಡ ಗಾತ್ರದ ಬಾಕ್ಸ್‌ಗಳು ಸಹ ನೋಡಲು ಸಿಗುತ್ತವೆ. ಹಲವು ಮಾದರಿಯ ಫೋಟೋ ಕ್ಯಾಮರಾಗಳು, ಲೆನ್ಸ್‌ಗಳು, ವಿಸಿಆರ್‌ನ ಹೆಡ್‌ಗಳು ಸಹ ಇವೆ.

ದಾನಿಗಳು ಕೊಟ್ಟಿದ್ದಾರೆ

ಈ ಮ್ಯೂಸಿಯಂನಲ್ಲಿ ದಾನಿಗಳು ನೀಡಿರುವ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಸಹ ಇಡಲಾಗಿದೆ. 60 ವರ್ಷದ ಹಿಂದಿನ ರೆಡಿಯೋ, ಟೆಪ್‌ರೇಕಾರ್ಡರ್, ಗ್ರಾಮಾಫೋನ್‌ಗಳನ್ನು ದಾನಿಗಳು ನೀಡಿದ್ದಾರೆ. ಇವುಗಳೊಂದಿಗೆ ಅಂದಿನ ಖ್ಯಾತ ಗಾಯಕರ ಹಾಡುಗಳನ್ನು ಒಳಗೊಂಡಿರುವ ‘ತಟ್ಟೆ’ಯನ್ನು ಸಹ ನೀಡಿದ್ದಾರೆ.

ಇದೇ ಮೊದಲು

ದೇಶದಲ್ಲಿ 21 ಮಲ್ಟಿ ಮೀಡಿಯಾ ರಿಸರ್ಚ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಮ್ಯೂಸಿಯಂ ಮಾಡಿರುವುದು ಮೈಸೂರಿನ ಕೇಂದ್ರವೇ ಮೊದಲು. ಹೀಗಾಗಿ ಯಾವ ರೀತಿ ಮಾಡಿದ್ದಾರೆ ಎನ್ನುವುದನ್ನು ತಿಳಿಯುವುದಕ್ಕೆ ಚೆನ್ನೈ, ಹೈದರಾಬಾದ್ ಮುಂತಾದ ಕಡೆಯಿಂದ ತಜ್ಞರು ಬಂದು ನೋಡಿಕೊಂಡು ಹೋಗಿದ್ದಾರೆ. ಹಲವಾರು ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಭೇಟಿ ಕೊಟ್ಟು ಮ್ಯೂಸಿಯಂ ನೋಡಿ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
"

ಈಗಿನ ವಿದ್ಯಾರ್ಥಿಗಳಿಗೆ ಹಿಂದಿನ ಕಾಲದಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಯಾವ ಕ್ಯಾಮರಾ ಬಳಸುತ್ತಿದ್ದರು, ಅವುಗಳ ಮಾದರಿ ಹೇಗಿತ್ತು ಎನ್ನುವುದು ತಿಳಿದಿರುವುದಿಲ್ಲ. ವಿಸಿಆರ್ ಕ್ಯಾಸೆಟ್ ಎಂದರೆ ಗೊತ್ತೇ ಇಲ್ಲ. ಆದ್ದರಿಂದ ಅವುಗಳ ಬಗ್ಗೆ ತಿಳಿಸುವುದಕ್ಕೆ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಬೆಳವಣಿಗೆಯ ಹಾದಿಯನ್ನು ಹೇಳಿಕೊಡುವುದಕ್ಕಾಗಿ ಮ್ಯೂಸಿಯಂ ಸ್ಥಾಪನೆ ಮಾಡಲಾಗಿದೆ. ಮ್ಯೂಸಿಯಂನಲ್ಲಿ ಪ್ರದರ್ಶನ ಮಾಡುವಂತಹ ಉಪಕರಣಗಳು ನಮ್ಮಲ್ಲಿ ಇನ್ನೂ ಹಲವು ಇವೆ. ಮುಂದಿನ ದಿನಗಳಲ್ಲಿ ಇವುಗಳನ್ನು ಬಳಕೆ ಮಾಡಿಕೊಂಡು ಮ್ಯೂಸಿಯಂ ವಿಸ್ತರಣೆ ಮಾಡುವ ಉದ್ದೇಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net