ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜ್ಞಾನ, ವಿಜ್ಞಾನ ಸಮ್ಮಿಲನ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 84ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ,  ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ  ಇದ್ದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 84ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣನೆ
ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜ್ಞಾನ ಮತ್ತು ವಿಜ್ಞಾನದ ಸಮ್ಮಿಲನವಿದೆ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.
ನಗರದ ಅವಧೂತ ದತ್ತಪೀಠ ಆಶ್ರಮದಲ್ಲಿ ಭಾನುವಾರ ಬೆಳಗ್ಗೆ ಆಯೋಜಿಸಿದ್ದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 84ನೇ ಜನ್ಮದಿನೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಮ್ಮ ದೇಶ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇಂದು ಜಗತ್ತಿನಲ್ಲಿ ಕಾಣುವ ಎಲ್ಲ ಸಂಶೋಧನೆಗಳು ಹಾಗೂ ಆವಿಷ್ಕಾರಗಳನ್ನು ಸಾವಿರ ವರ್ಷಗಳ ಹಿಂದೆ ತಮ್ಮ ದಿವ್ಯ ಜ್ಞಾನದಿಂದ ತಿಳಿದು ಜಗತ್ತಿಗೆ ಅಪೂರ್ವವಾದ ಕೊಡುಗೆಯನ್ನು ಕೊಟ್ಟವರು ಭಾರತೀಯ ಋಷಿಮುನಿಗಳು. ಇದು ನಾವೆಲ್ಲ ಹೆಮ್ಮೆ ಪಡಬೇಕಾದ ಸಂಗತಿ ಎಂದು ತಿಳಿಸಿದರು.
ವೈಜ್ಞಾನಿಕವಾಗಿ ನಾವು ಕಾಣುವ ಮೆಟಾಫಿಸಿಕ್ಸ್ ಇರಬಹುದು ಅಥವಾ ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಬಹುದು, ಎಲ್ಲದರಲ್ಲೂ ಕೂಡ ಹಿಂದೆ ಅವರಿಗೆ ಯಾವುದೇ ಉಪಕರಣಗಳಾಗಲಿ, ಮೈಕ್ರೋಸ್ಕೋಪ್ ಆಗಲಿ ಇರಲಿಲ್ಲ. ಆದರೆ ಭಗವಂತನ ಕೃಪೆಯಿಂದ ಮನುಷ್ಯ ತನ್ನನ್ನು ಸಾಧನೆಯಲ್ಲಿ ತೊಡಗಿಸಿಕೊಂಡರೆ, ಆ ಸಾಧನೆಯ ಫಲವಾಗಿ ಜಗತ್ತಿನ ಎಲ್ಲ ಸತ್ಯಗಳನ್ನು ಗುರುತಿಸಲು ಸಾಧ್ಯವಿದೆ ಎನ್ನುವುದು ನಮ್ಮ ಭಾರತೀಯ ಧರ್ಮ ಪರಂಪರೆ ಜಗತ್ತಿಗೆ ಕೊಟ್ಟಿರುವ ಅಪೂರ್ವ ಕೊಡುಗೆಯಾಗಿದೆ ಎಂದರು.
ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ ಹಾಗೆ, ಜಗತ್ತಿಗೆ ಯಾವ್ಯಾವಾಗ ಅಗತ್ಯವಾಗುತ್ತದೆಯೋ, ಆಗೆಲ್ಲ ಮಹಾಪುರುಷರು ಅವತರಿಸುತ್ತಾ ಬರುತ್ತಾರೆ ಎನ್ನುವ ಮಾತು ಜಗತ್ತಿಗೆ ಯಾವತ್ತೂ ಸತ್ಯವಾಗಿ ಉಳಿಯುವಂತದ್ದು ಎಂದು ಹೇಳಿದರು.
ಗಣಪತಿ ಸಚ್ಚಿದಾನಂದ ಸ್ವಾಮೀಜಿ ಗಣಪತಿ ಸಚ್ಚಿದಾನಂದ ಆಶ್ರಮವನ್ನು ಜಗತ್ತಿಗೆ ಲಭ್ಯವಾಗುವಂತೆ ಮಾಡಿದ್ದಾರೆ. ಅದು ಜಗನ್ಮಾನ್ಯವಾಗುವ ಹಾಗೆ ಮಾಡಿದ್ದಾರೆ. ಕರ್ನಾಟಕ, ಆಂಧ್ರ, ತಮಿಳುನಾಡು ಮಾತ್ರವಲ್ಲ, ವಿದೇಶದಲ್ಲಿರುವವರು ಕೂಡ ಶ್ರೀಗಳ ಬಗ್ಗೆ ಅಪಾರವಾದ ಶ್ರದ್ಧಾಭಕ್ತಿ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.
ಒಮ್ಮೆ ಅಮೆರಿಕದಿಂದ ಬರುವಾಗ, ಕಾವಿ ಲಾಂಛನ ಧರಿಸಿದ್ದ ನನ್ನನ್ನು ನೋಡಿ ವ್ಯಕ್ತಿಯೊಬ್ಬರು ಪರಿಚಯ ಮಾಡಿಕೊಂಡು, ನಮ್ಮ ತಾಯಿ ಪ್ರತಿ ವರ್ಷ ಅಮೆರಿಕದಿಂದ ಇಂಡಿಯಾಕ್ಕೆ ಬರುತ್ತಾರೆ. ಅದು ಮುಖ್ಯವಲ್ಲ, ಅವರು ಅಮೆರಿಕದ ಮನೆಯಿಂದ ಸೀದಾ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಬರುತ್ತಾರೆ ಮತ್ತು ಸೀದಾ ಆಶ್ರಮದಿಂದ ಅಮೆರಿಕದ ಮನೆಗೆ ಹೋಗುತ್ತಾರೆ. ಅವರಿಗೆ ಭಾರತದಲ್ಲಿ ಬೇರೆ ಯಾವುದೇ ಆಸಕ್ತಿ ಅಥವಾ ಆಕರ್ಷಣೆ ಇರುವುದಿಲ್ಲ. ಆಶ್ರಮವನ್ನೇ ಮನೆಯಾಗಿ ಮಾಡಿಕೊಂಡು, ಶ್ರೀಗಳ ದರ್ಶನಾಶೀರ್ವಾದ ಪಡೆದು, ಮನಸ್ಸಿಗೆ ಸಂತೋಷ ನೆಮ್ಮದಿ ಪಡೆದುಕೊಂಡು ಹಿಂತಿರುಗುತ್ತಾರೆ ಎಂಬ ಮಾತನ್ನು ತಿಳಿಸಿದ್ದರು. ಆ ಮಟ್ಟಿಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಪ್ರಸಿದ್ಧಿ ಆಗಿದ್ದಾರೆ ಎಂದು ನುಡಿದರು.
ಇದು ಜನ್ಮದಿನೋತ್ಸವದ ಸಪ್ತಾಹ ಕಾರ್ಯಕ್ರಮ. ಏಳು ದಿವಸಗಳೂ ವಿಶೇಷವಾದ ಕಾರ್ಯಕ್ರಮಗಳಿರುತ್ತವೆ. ಹೋಮ, ವಿಶೇಷ ಪೂಜೆಗಳು, ಸಂಗೀತ ಮತ್ತು ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಅಗತ್ಯವಿರುವವರಿಗೆ ಅಗತ್ಯ ವಸ್ತುಗಳ ವಿತರಣೆ ಹೀಗೆ ಒಂದಲ್ಲ ಹತ್ತು ಹಲವು ಕಾರ್ಯಕ್ರಮಗಳನ್ನು ಏಕಕಾಲದಲ್ಲಿ ಹಮ್ಮಿಕೊಂಡಿರುವುದು ಸ್ವಾಮೀಜಿ ಅವರ ಜನ್ಮದಿನೋತ್ಸವದ ಸಂದರ್ಭದಲ್ಲಿ ಎನ್ನುವುದು ಎಲ್ಲರಿಗೂ ಸಂತೋಷವನ್ನುಂಟು ಮಾಡುವ ಸಂಗತಿಯಾಗಿದೆ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರಿಗೂ ಗಣಪತಿ ಸಚ್ಚಿದಾನಂದ ಸ್ವಾಮಿಗಳವರಿಗೂ ಅನನ್ಯವಾದ ಸಂಬಂಧವಿತ್ತು. ಅವರಿಬ್ಬರೂ ಅಂತರಂಗದ ಆಂತರಿಕವಾದ ಬಾಂಧವ್ಯವನ್ನು ಹೊಂದಿದ್ದವರು. ಕಿರಿಯ ಶ್ರೀಗಳವರು ಪೂಜ್ಯರ ಮಗನಂತೆ, ಪಾಲಕರಾಗಿ ಶ್ರೀಗಳು ತೋರಿಸಿದ್ದನ್ನು ಶಿರಸಾವಹಿಸಿ ನೆರವೇರಿಸಿ ಆಶ್ರಮದ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವುದು ಸಂತೋಷದ ಸಂಗತಿ ಎಂದು ಶ್ಲಾಘಿಸಿದರು.

ಕೃತಿಗಳ ಬಿಡುಗಡೆ:

ಇದೇ ಸಂದರ್ಭ ಅಶ್ವತ್ಥನಾರಾಯಣ ಅವರ ‘ದತ್ತಾವತಾರಿ ಮುಕ್ತಕ ಪಿಯೂಷ’ ಮತ್ತು ಸ್ವಾಮೀಜಿಯವರ ಸೀಕ್ರೆಟ್ ಫಾರ್ ಸಕ್ಸಸ್ ಇಂಗ್ಲಿಷ್ ಪುಸ್ತಕದ ತಮಿಳು ಅನುವಾದ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆಶ್ರಮದ ಕಿರಿಯ ಶ್ರೀ ಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net