ಚಾಮುಂಡಿ ಬೆಟ್ಟಕ್ಕೆ 13 ದಿನಗಳಲ್ಲಿ 8.61 ಲಕ್ಷ ಭಕ್ತರು ಭೇಟಿ

ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರ ಸೇರಿರುವ ಭಕ್ತರ ದಂಡು
ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರ ಸೇರಿರುವ ಭಕ್ತರ ದಂಡು
Published on

ಪ್ರಮುಖ ಮುಖ್ಯಾಂಶಗಳು

  • ಆಷಾಢದಲ್ಲಿ ಚಾಮುಂಡಿ ಬೆಟ್ಟದಲ್ಲಿ ಜನ ಜಾತ್ರೆ
  • 2 ಸಾವಿರ ರೂ. ಟಿಕೆಟ್‌ನಿಂದ 3 ಕೋಟಿ ರೂ. ಸಂಗ್ರಹ

ಮೈಸೂರು: 

ಆಷಾಢ ಮಾಸದ 13 ದಿನಗಳಲ್ಲಿ ಚಾಮುಂಡಿಬೆಟ್ಟದಲ್ಲಿ ನೆಲೆಸಿರುವ ನಾಡದೇವಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ 8.61 ಲಕ್ಷ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದು, 2 ಸಾವಿರ ಟಿಕೆಟ್ ಪಡೆದ ಭಕ್ತರಿಂದ 3.08 ಕೋಟಿ ರೂ. ಸಂಗ್ರಹವಾಗಿದೆ.

ಆಷಾಢ ಮಾಸದ ನಾಲ್ಕು ಶುಕ್ರವಾರ, ವರ್ಧಂತಿ ದಿನ ಹಾಗೂ ವಾರಾಂತ್ಯದ ದಿನ ಸೇರಿದಂತೆ 13 ದಿನಗಳಲ್ಲಿನ ಲೆಕ್ಕ ಇದಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. 
ಆಷಾಢ ಶುಕ್ರವಾರದೊಂದಿಗೆ ವಾರಾಂತ್ಯ ದಿನವಾದ ಶನಿವಾರ, ಭಾನುವಾರ ಬೆಟ್ಟಕ್ಕೆ ಭೇಟಿ ನೀಡಿರುವ ಭಕ್ತರ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳವಾಗಿದೆ.
ಆಷಾಢ ಮಾಸದ ಮೊದಲ ಶುಕ್ರವಾರವಾದ ಜು.17ರಂದು 55,000, 2ನೇ ಶುಕ್ರವಾರ(ಜು.24) 75,000, 3ನೇ ಶುಕ್ರವಾರ(ಜು.31) 98,500 ಹಾಗೂ ಕೊನೆಯ ಆಷಾಢ ಶುಕ್ರವಾರ(ಆ.7) 1.25 ಲಕ್ಷ, ಆ.4ರಂದು ನಡೆದ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ದಿನ 89,000 ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದಿದ್ದಾರೆ. 
ಶನಿವಾರ ಮತ್ತು ಭಾನುವಾರದಂದು ಸರಾಸರಿ 36,000ರಿಂದ 78,000 ಭಕ್ತರು ಭೇಟಿ ನೀಡಿದ್ದಾರೆ ಎಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಂದಾಜಿಸಿದೆ.
ಆಷಾಢ ನಾಲ್ಕು ಶುಕ್ರವಾರಗಳಲ್ಲಿ 3,53,500 ಭಕ್ತರು ಭೇಟಿ ಕೊಟ್ಟಿದ್ದಾರೆ. ನಾಲ್ಕು ಶನಿವಾರಗಳಲ್ಲಿ 1,98,000, ನಾಲ್ಕು ಭಾನುವಾರದಂದು 2,20,500 ಹಾಗೂ ಆ.4ರ ವರ್ಧಂತಿ ದಿನ 89,000 ಭಕ್ತರು ದೇವಾಲಯಕ್ಕೆ ಬಂದು ಹೋಗಿದ್ದಾರೆ. ಜತೆಗೆ, ಆ.7ರಿಂದ ಆ.9 ವರೆಗಿನ 2.78 ಲಕ್ಷ ಭಕ್ತರು ಬೆಟ್ಟಕ್ಕೆ ಭೇಟಿ ನೀಡಿರುವುದು ವಿಶೇಷ. 8,45,579 ಭಕ್ತರು ಧರ್ಮದರ್ಶನದ ಸಾಲಿನ ಮೂಲಕ ದೇವಿಯ ದರ್ಶನ ಪಡೆದಿದ್ದಾರೆ.
2 ಸಾವಿರ ರೂ. ಟಿಕೆಟ್ ಪಡೆದು ವಿಶೇಷ ದರ್ಶನ ಪಡೆದ ಭಕ್ತರ ಸಂಖ್ಯೆ 15,421 ಜನರಿದ್ದಾರೆ. ಟಿಕೆಟ್ ಮಾರಾಟದಿಂದ 3,08,42,000 ಆದಾಯ ಸಂಗ್ರಹವಾಗಿದೆ. ಕೇವಲ ಶೇ.1.79ರಷ್ಟು ಮಾತ್ರ ವಿಶೇಷ ದರ್ಶನ ಮಾಡಿದ್ದು, ಶೇ.98.21ರಷ್ಟು ಭಕ್ತರು ಧರ್ಮ ದರ್ಶನ ಪಡೆದಿದ್ದಾರೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಡಾ.ಎಂ.ಜೆ.ರೂಪ ತಿಳಿಸಿದ್ದಾರೆ. 

ಕೆಎಸ್‌ಆರ್‌ಟಿಸಿಗೂ ಆದಾಯ

ಆಷಾಢ ಮಾಸದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ಭಕ್ತರ ಅನುಕೂಲಕ್ಕಾಗಿ 4,935 ಟ್ರಿಪ್ ಬಸ್ ಸಂಚಾರ ಮಾಡಿದೆ. 2,522 ಟ್ರಿಪ್ ಸಾಮಾನ್ಯ ಬಸ್, 602 ಟ್ರಿಪ್ ವೋಲ್ವೋ ಬಸ್ ಹಾಗೂ 1,811 ಟ್ರಿಪ್ ನಗರ ಸಾರಿಗೆ ಬಸ್ ಬೆಟ್ಟಕ್ಕೆ ಸಂಚರಿಸಿವೆ.
ಜು.17ರಂದು 470 ಟ್ರಿಪ್, ಆ.7ರಂದು 466 ಟ್ರಿಪ್‌ಗಳು ಸಂಚರಿಸಿವೆ. ಈ ಆಷಾಢ ಮಾಸದಲ್ಲಿ 82,01,834 ರೂ. ಆದಾಯ ಸಂಗ್ರಹವಾಗಿದೆ ಎಂದು ನಗರ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net