7 ಜನ ಮರ್ಡರ್ : ಮೈಸೂರಿನಲ್ಲಿ ರಾತ್ರಿ ಪೂರ್ಣ ಕಾರಿನಲ್ಲೇ ಇದ್ದ ಆರೋಪಿ

ಆಸ್ತಿಗಾಗಿ ಏಳು ಜನರನ್ನು ಹತ್ಯೆ ಮಾಡಿದ್ದ ಇಂದುಶೇಖರ್
7 ಜನ ಮರ್ಡರ್ : ಮೈಸೂರಿನಲ್ಲಿ ರಾತ್ರಿ ಪೂರ್ಣ ಕಾರಿನಲ್ಲೇ ಇದ್ದ ಆರೋಪಿ
ಪೊಲೀಸರ ಬಂಧನದಲ್ಲಿ ಆರೋಪಿ ಇಂದುಶೇಖರ್Murder of 7 people: Accused stayed inside the car all night in Mysuru
Published on: 

ಮೈಸೂರು: ಆಸ್ತಿಗಾಗಿ ಏಳು ಜನರನ್ನು ಕೊಲೆ ಮಾಡಿದ್ದ ಆರೋಪಿ ಇಂದುಶೇಖರ್ ತನ್ನ ಕಾರನ್ನು ನಗರದ ಪ್ರಮುಖ ರಸ್ತೆಯಲ್ಲಿ ಪಾರ್ಕ್ ಮಾಡಿ ರಾತ್ರಿ ಇಡೀ ಕಳೆದಿರುವುದು ಪತ್ತೆಯಾಗಿದೆ.

ಕೊಲೆಯಾಗಿದ್ದ ಬಾಮೈದ ಶಿವಕುಮಾರ್, ಆತನ ಪತ್ನಿ ದಿವ್ಯಾ ಮೃತದೇಹವನ್ನು ಚಾಮುಂಡಿಬೆಟ್ಟದ ಅರಣ್ಯ ಪ್ರದೇಶದಲ್ಲಿ ಎಸೆಯಲು ಅ.26ರಂದು ಈತ ನಗರಕ್ಕೆ ಬಂದಿದ್ದ. ಅ.27ರಂದು ಹಿಂದಿರುಗಿದ್ದಾನೆಂದು ಪೊಲೀಸರು ಪತ್ತೆ ಮಾಡಿದ್ದಾರೆ. ಬೆಂಗಳೂರಿನ ರಾಜಾಜಿನಗರದ ಮನೆಯಲ್ಲಿ ಅ.16ರಿಂದ ಪತ್ನಿ ಕುಟುಂಬದ ಸದಸ್ಯರನ್ನು ಸರಣಿ ಕೊಲೆ ಮಾಡಲು ಆರಂಭಿಸಿದ್ದ ಹಂತಕ, ಪತ್ನಿ ಸುನೀತಾ ಮತ್ತು ಅತ್ತೆ ರೂಪಾವತಿಯನ್ನು

ಕೊಂದ ಬಳಿಕ ಶಿವಕುಮಾರ್, ದಿವ್ಯಾ ಅವರನ್ನು ಕೊಲೆ ಮಾಡಿದ್ದ. ಶವವನ್ನು ಕಾರಿನ ಡಿಕ್ಕಿಯಲ್ಲಿ ಮೂಟೆಗಳಲ್ಲಿ ತುಂಬಿಕೊಂಡು ಅ.26ರ ಬೆಳಗ್ಗೆ 10.40ಕ್ಕೆ ಮೈಸೂರು-ಬೆಂಗಳೂರು ಹೆದ್ದಾರಿಯ ಗಣಂಗೂರು ಟೋಲ್ ಪ್ಲಾಜಾ ದಾಟಿ ಮೈಸೂರಿಗೆ ಬಂದಿದ್ದ.

ಹಂತಕ ಚಾಮುಂಡಿಬೆಟ್ಟದ ರಸ್ತೆಯಲ್ಲಿ ಸಂಚರಿಸಿ, ಶವ ಎಸೆಯಲು ಯೋಗ್ಯವಾದ ಸ್ಥಳ ಗುರುತಿಸಿದ್ದಾನೆ. ಬೆಟ್ಟದ ರಸ್ತೆಯಲ್ಲಿ ಎರಡು ಮೂರು ಬಾರಿ ಸಂಚರಿಸಿರುವ ಆತ, ಹಗಲಿನ ವೇಳೆ ವಾಹನ ಸಂಚಾರ ಹೆಚ್ಚಾಗಿದ್ದರಿಂದ ಶವ ಬೀಸಾಡುವ ಗೋಜಿಗೆ ಹೋಗಿಲ್ಲ.

ಸಂಜೆಯಾಗುತ್ತಿದ್ದಂತೆ ಮತ್ತೆ ಬೆಟ್ಟದ ರಸ್ತೆಗೆ ಹೋಗಿದ್ದಾನೆ. ಆ ವೇಳೆಗೆ ಬೆಟ್ಟದ ದೇವಿಕೆರೆಯಲ್ಲಿ ನಡೆಯುವ ತೆಪ್ಪೋತ್ಸವದಲ್ಲಿ ಭಾಗಿಯಾಗಲು ಹಲವು ಭಕ್ತರು, ಪೊಲೀಸರು ವಾಹನಗಳಲ್ಲಿ ಸಂಚರಿಸುತ್ತಿದ್ದ ಕಾರಣ ಶವ ಎಸೆಯಲು ಆಗಿರಲಿಲ್ಲ.

ತೆಪ್ಪೋತ್ಸವ ಮುಗಿದ ಬಳಿಕ ವಾಹನಗಳ ಸಂಚಾರ ಕ್ಷೀಣಿಸಿ ಮಳೆ ಆರಂಭವಾಗಿದ್ದು, ಅದು ಹಂತಕನಿಗೆ ಶವ ಎಸೆಯಲು ವರದಾನವಾಗಿದೆ. ರಾತ್ರಿ 9ರಿಂದ 9.30ರ ವೇಳೆಯಲ್ಲಿ ಶವ ಎಸೆದಿರುವುದಾಗಿ ಹಂತಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ತದನಂತರ ಕಾರನ್ನು ಮೈಸೂರಿನ ಪ್ರಮುಖ ರಸ್ತೆಯಲ್ಲಿ ಪಾರ್ಕ್ ಮಾಡಿ ನಿದ್ದೆಗೆ ಜಾರಿದ್ದಾನೆ. ಮರುದಿನ (ಅ.27ರಂದು) ಬೆಳಗ್ಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿರುವುದಾಗಿ ತನಿಖೆ ಸಂದರ್ಭ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ನಗರದಲ್ಲಿ ಈತನ ಚಲನವಲನವನ್ನು ಪತ್ತೆ ಮಾಡಿರುವ ಪೊಲೀಸರು, ಸಾಕ್ಷೃ ದಾಖಲಿಸಿಕೊಂಡಿದ್ದಾರೆ.

ವಾರಸುದಾರರಿಗೆ ಹಸ್ತಾಂತರ:

ಆರೋಪಿ ಇಂದುಶೇಖರ್ ಚಾಮುಂಡಿಬೆಟ್ಟದ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ ಎರಡು ಶವಗಳ ಮರಣೋತ್ತರ ಪರೀಕ್ಷೆ ಸೋಮವಾರ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಭಾನುವಾರ ಸಂಜೆ ಬೆಟ್ಟದಲ್ಲಿ ಪತ್ತೆಹಚ್ಚಿದ್ದ ಶಿವಕುಮಾರ್, ದಿವ್ಯಾ ದಂಪತಿ ಮೃತದೇಹವನ್ನು ಮೈಸೂರು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಶವಾಗಾರಕ್ಕೆ ಸ್ಥಳಾಂತರಿಸಲಾಗಿತ್ತು. ಸೋಮವಾರ ಬೆಂಗಳೂರಿನ ನಂದಿನಿ ಲೇಔಟ್ ಠಾಣೆ ಇನ್‌ಸೆಕ್ಟರ್ ಎಂ.ಎಲ್.ಶೇಖರ್ ನೇತೃತ್ವದಲ್ಲಿ ಪೊಲೀಸರ ತಂಡ ಮೃತದೇಹವನ್ನು ಪಾಲಕರ ಸಮ್ಮುಖದಲ್ಲಿ ಪಂಚನಾಮೆ ನಡೆಸಿತು. ಬಳಿಕ ಹೇಳಿಕೆ ದಾಖಲಿಸಿ ಮರಣೋತ್ತರ ಪರೀಕ್ಷೆ ನಡೆಸಿ, ಮಧ್ಯಾಹ್ನ 2ಕ್ಕೆ ವಾರಸುದಾರರಿಗೆ ಮೃತದೇಹವನ್ನು ಒಪ್ಪಿಸಲಾಯಿತು.

ಈ ಪ್ರಕರಣದಲ್ಲಿ ಹತ್ಯೆಯಾಗಿದ್ದ ಪುತ್ರ ಪುನೀತ್‌ನ ಅಂತ್ಯಕ್ರಿಯೆ ನಡೆಸಿದ ಬೆಂಗಳೂರಿನ ಗುಡದನಹಳ್ಳಿ ರುದ್ರಭೂಮಿಯಲ್ಲಿ ಈ ಇಬ್ಬರ ಶವಗಳ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿರುವುದಾಗಿ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.