ಮೈಸೂರು ಜಿಲ್ಲೆಯಲ್ಲಿ 5.57 ಲಕ್ಷ ವೋಟರ್ ಡಿಲೀಟ್

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್‌ಐಆರ್)
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್‌ಐಆರ್)
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಐಆರ್ ಕರಡು ಪಟ್ಟಿ ಪ್ರಕಟ
  • ಶೇ.19.90 ಮತದಾರರು ಹೊರಕ್ಕೆ

ಮೈಸೂರು: 

ಚುನಾವಣಾ ಆಯೋಗವು ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್‌ಐಆರ್) ಕರಡು ಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದು ಜಿಲ್ಲೆಯ 5.57 ಲಕ್ಷ ಮತದಾರರನ್ನು (ಎಎಸ್‌ಡಿಡಿಒ) ಹೊರ ಹಾಕಲಾಗಿದೆ. ಇದರ ಪ್ರಮಾಣ 19.90ರಷ್ಟಿದೆ.

ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 22,42,452 ಮತದಾರರಿದ್ದಾರೆ. ಈ ಪೈಕಿ 10,98,058 ಪುರುಷರು, 11,44,256 ಮಹಿಳೆಯರು, 138 ತೃತೀಯ ಲಿಂಗಿಗಳಿದ್ದಾರೆ. ಜೂನ್ 16ರಲ್ಲಿ 27,99,693 ಮತದಾರರಿದ್ದರು. ಈ ಪೈಕಿ 5,57,241 ಮತದಾರರು ಈ ಪಟ್ಟಿಯಿಂದ ಡಿಲೀಟ್ ಆಗಿದ್ದಾರೆ.
ಇಆರ್‌ಒ, ಎಇಆರ್‌ಒ ಕಚೇರಿಗಳಲ್ಲಿ ಕರಡು ಮತದಾರರ ಪಟ್ಟಿಯು ಲಭ್ಯವಿರುತ್ತದೆ. ನೋಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಉಚಿತವಾಗಿ ಒಂದು ಮುದ್ರಿತ ಪ್ರತಿ ಮತ್ತು ಒಂದು ಸಾಫ್ಟ್ ಪ್ರತಿ ವಿತರಣೆ ಮಾಡಲಾಗುವುದು. ಜತೆಗೆ, ಕರಡು ಮತದಾರರ ಪಟ್ಟಿಯು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅಧಿಕೃತ ಜಾಲತಾಣ
https://ceo.karnataka.gov.in ದಲ್ಲಿ ಮತ್ತು ಜಿಲ್ಲೆಯ ಅಧಿಕೃತ ಜಾಲತಾಣದಲ್ಲಿ (https://mysore.nic.in ಲಭ್ಯ ಇದೆ.

 ಸಹ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. 

ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ನಮೂನೆ-6, ತಿದ್ದುಪಡಿ, ಸ್ಥಳಾಂತರಕ್ಕಾಗಿ ನಮೂನೆ-8, ಮತದಾರರ ಪಟ್ಟಿಯಿಂದ ತೆಗೆದುಹಾಕಲು ನಮೂನೆ-7 ಸಲ್ಲಿಸಬಹುದು. ರಾಜಕೀಯ ಪಕ್ಷಗಳಿಂದ ನೇಮಕ ಮಾಡಿರುವ ಬಿಎಲ್‌ಎಗಳು ದಿನವೊಂದಕ್ಕೆ ಗರಿಷ್ಠ 10 ಆಕ್ಷೇಪಣಾ ನಮೂನೆ ಸಲ್ಲಿಸಬಹುದು.
ಮತದಾರರ ಕರಡು ಪಟ್ಟಿಯಲ್ಲಿದ್ದು, ಮ್ಯಾಪಿಂಗ್ ಆಗಿಲ್ಲದ (ನೋ ಮ್ಯಾಪಿಂಗ್) 15,854 ಮತ್ತು ಮ್ಯಾಪಿಂಗ್ ಆಗಿದ್ದು ವ್ಯತ್ಯಾಸಗಳಿರುವ 1,12,270 ಮಂದಿ ಸೇರಿದಂತೆ ಇಂತಹ 1,28,124 ಮತದಾರರಿದ್ದಾರೆ. ಇಂತಹವರಿಗೆ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳು (ಇಆರ್‌ಒ) ನೋಟಿಸ್ ನೀಡಿದ್ದಾರೆ. 
ಅವುಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲು ಸಹಾಯಕವಾಗಲೆಂದು ಹಾಗೂ ಮತದಾರರ ನೋಂದಣಾಧಿಕಾರಿಗಳಿಗೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿ ನೇಮಕ ಮಾಡುವ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.
ನೋಟಿಸ್ ಪಡೆದ ಮತದಾರರು ಅಗತ್ಯ ದಾಖಲಾತಿ ಸಲ್ಲಿಸಬೇಕು. ಅವುಗಳನ್ನು ಪರಿಶೀಲಿಸಿ ದಾಖಲಾತಿಗಳ ನೈಜತೆ ಖಚಿತಪಡಿಸಿಕೊಂಡು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಅಂತಿಮ ಆದೇಶ ಹೊರಡಿಸಲಿದ್ದಾರೆ. ಬಳಿಕ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು. ಇಆರ್‌ಒ, ಎಇಆರ್‌ಒ ಕಚೇರಿಗಳಲ್ಲಿ ಅಂತಿಮ ಪಟ್ಟಿಯು ಲಭ್ಯವಿರುತ್ತದೆ. ಈ ಪಟ್ಟಿಯನ್ನು ನೋಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ವಿತರಣೆ ಮಾಡಲಾಗುವುದು. ಅಧಿಕೃತ ಜಾಲತಾಣ https://ceo.karnataka.gov.in  ದಲ್ಲಿಯೂ ಲಭ್ಯಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ

ಮೇಲ್ಮನವಿ ಸಲ್ಲಿಸಲು ಅವಕಾಶ

 ಮತದಾರರ ಅಂತಿಮ ಪಟ್ಟಿಯ ಪ್ರಕಟಣೆಯ ನಂತರ ಮತದಾರರ ನೋಂದಣಾಧಿಕಾರಿ (ಇಆರ್‌ಒ) ಆದೇಶದಿಂದ ಬಾಧಿತರಾದವರು ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಗೆ (ಡಿಇಒ)ಪ್ರಥಮ ಮೇಲ್ಮನವಿ ಸಲ್ಲಿಸಬಹುದು. ಅವರ ಆದೇಶದಿಂದ ಬಾಧಿತರಾದವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ 2ನೇ ಮೇಲ್ಮನವಿ ಸಲ್ಲಿಸಬಹುದು ಎಂದೂ ಡಿಸಿ ತಿಳಿಸಿದ್ದಾರೆ.

ಎಸ್‌ಐಆರ್ ವೇಳಾಪಟ್ಟಿ

ಮತದಾರರ ಕರಡು ಪಟ್ಟಿಯಿಂದ ಹೊರ ಹಾಕಿರುವ ವೋಟರ್‌ಗಳ (ಎಎಸ್‌ಡಿಡಿಒ)ವಿವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net