ಸಂತೇಪೇಟೆ ಹಾಗೂ ಶಿವರಾಮಪೇಟೆ ಪ್ರದೇಶಗಳಲ್ಲಿ ರಾತ್ರಿ ಕಾರ್ಯಾಚರಣೆ
ದಾಳಿ ಮತ್ತು ತಪಾಸಣೆ ಕಾರ್ಯ ಮುಂದುವರಿಕೆ
ಮೈಸೂರು: ಮಹಾನಗರ ಪಾಲಿಕೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ 227 ಕೆಜಿ ಪ್ಲಾಸ್ಟಿಕ್ ಜಪ್ತಿ ಮಾಡಿದ್ದಾರೆ.
ನಗರ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮತ್ತು ಅಕ್ರಮ ಸಾಗಣೆ ನಿಯಂತ್ರಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸಂತೇಪೇಟೆ ಹಾಗೂ ಶಿವರಾಮಪೇಟೆ ಪ್ರದೇಶಗಳಲ್ಲಿ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ.
ವೇಗಾ ಟ್ರಾನ್ಸ್‌ಪೋರ್ಟ್, ಸಂತೋಷ್ ರಸ್ತೆಯಲ್ಲಿರುವ ಅಂಗಡಿಗಳು, ಶ್ರೀ ಗುರು ರಾಘವೇಂದ್ರ ಟ್ರಾನ್ಸ್‌ಪೋರ್ಟ್, ಮಹದೇಶ್ವರ ಪಾರ್ಸೆಲ್ ಸರ್ವೀಸ್ ಮೇಲೆ ದಾಳಿ ನಡೆದಿದೆ. ಕಾರ್ಯಾಚರಣೆಯಲ್ಲಿ ಪರಿಸರ ಇಂಜಿನಿಯರ್ ಮೈತ್ರಿ, ಆರೋಗ್ಯ ನಿರೀಕ್ಷಕ ಮಂಜು ಕುಮಾರ್ ಮತ್ತು ಅಭಯ್ ತಂಡ ಭಾಗವಹಿಸಿತ್ತು.
ಸಂತೇಪೇಟೆಯ ಧನ್ವಂತ್ರಿ ಟ್ರೇಡಿಂಗ್ ಅಂಗಡಿ, ನಂದಿ ಪ್ಯಾಕಿಂಗ್ ಅಂಗಡಿ ಮೇಲೂ ದಾಳಿ ನಡೆದಿದ್ದು, 97 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು, 30 ಸಾವಿರ ರೂ. ದಂಡ ವಿಧಿಸಲಾಗಿದೆ. ಪಾಲಿಕೆ ವಲಯ ಕಚೇರಿ-6 ಆರೋಗ್ಯ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.
ನಿಷೇಧಿತ ಪ್ಲಾಸ್ಟಿಕ್ ಬಳಕೆ ಮತ್ತು ಸಾಗಣೆ ಸಂಬಂಧಿಸಿದಂತೆ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ರೀತಿಯ ದಾಳಿ ಮತ್ತು ತಪಾಸಣೆ ಕಾರ್ಯ ಮುಂದುವರಿಸಲಾಗವುದು ಎಂದು ಪಾಲಿಕೆ ತಿಳಿಸಿದೆ.
ಪರಿಸರ ಸಂರಕ್ಷಣೆ ಹಾಗೂ ನಗರ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ನಾಗರಿಕರು ಮತ್ತು ವ್ಯಾಪಾರಸ್ಥರು ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಕೋರಿದೆ.