ರಾಜ್ಯದಲ್ಲಿ ಮತದಾರರ ಸಂಖ್ಯೆಯನ್ನು 5.54 ಕೋಟಿಯಿಂದ 4.46 ಕೋಟಿಗೆ ಇಳಿಕೆ
ಬದುಕಿರುವವರನ್ನು ಸಾಯಿಸಿದ್ದಾರೆ. ಒಂದೇ ವ್ಯಕ್ತಿಯ ಹೆಸರು ಎರಡು ಕಡೆ
ಮೈಸೂರು:
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ(ಎಸ್‌ಐಆರ್) ದೇಶದಲ್ಲೇ ಅತ್ಯಧಿಕ ಮತದಾರರನ್ನು ರಾಜ್ಯದಲ್ಲಿ ಡಿಲೀಟ್ ಮಾಡಲಾಗಿದ್ದು, ಅರ್ಹ ಮತದಾರರ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ದೂರಿದರು.
ರಾಜ್ಯದಲ್ಲಿ ಮತದಾರರ ಸಂಖ್ಯೆಯನ್ನು 5.54 ಕೋಟಿಯಿಂದ 4.46 ಕೋಟಿಗೆ ಇಳಿಸಲಾಗಿದೆ. ಬರೋಬರಿ 1.08 ಕೋಟಿ ಮತದಾರನ್ನು ಕೈಬಿಡಲಾಗಿದೆ. ಶೇ.20 ಮತದಾರರನ್ನು ತೆಗೆಯಲಾಗಿದ್ದು, ಇದು ಇಡೀ ದೇಶದಲ್ಲೇ ಹೆಚ್ಚು. ಪಶ್ಚಿಮ ಬಂಗಾಳದಲ್ಲಿ ಶೇ.13 ಮತದಾರರು ಡಿಲೀಟ್ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.
ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆಗೆ ಪಟ್ಟಿ ಪರಿಷ್ಕರಣೆಯ ಜವಾಬ್ದಾರಿ ವಹಿಸಿದ್ದು, ಆರ್‌ಎಸ್‌ಎಸ್ ಸೂಚನೆ ಮೇರೆಗೆ ಕಾಂಗ್ರೆಸ್ ಮತದಾರರನ್ನು ಹುಡುಕಿ ಹುಡುಕಿ ತೆಗೆಯಲಾಗುತ್ತಿದೆ ಎಂದು ಆರೋಪಿಸಿದರು.
ಚುನಾವಣಾ ಆಯೋಗವು ಬಿಜೆಪಿ ಸೂಚನೆಯಂತೆ ವ್ಯವಸ್ಥಿತವಾಗಿ ನಿಜವಾದ ಮತದಾರರನ್ನು ಪಟ್ಟಿಯಿಂದ ಕೈ ಬಿಡುತ್ತಿದೆ. ಬದುಕಿರುವವರನ್ನು ಸಾಯಿಸಿದ್ದಾರೆ. ಒಂದೇ ವ್ಯಕ್ತಿಯ ಹೆಸರು ಎರಡು ಕಡೆ ಇದೆ. ವಿವರ ವ್ಯತ್ಯಾಸವಿರುವ, 2002ರ ಮ್ಯಾಪಿಂಗ್ ವಿವರ ಇಲ್ಲದ 43.81 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿದೆ.
ಇನ್ನೂ ಹೆಚ್ಚುವರಿಯಾಗಿ ಸುಮಾರು 25 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆಯುವ ಸಾಧ್ಯತೆ ಇದೆ ಎಂದು ಹೇಳಿದರು. ಮೈಸೂರು ಜಿಲ್ಲೆಯಲ್ಲಿ ಶೇ.20 ಮತದಾರರನ್ನು ಡಿಲೀಟ್ ಮಾಡಲಾಗಿದೆ. ನರಸಿಂಹರಾಜ ಕ್ಷೇತ್ರದಲ್ಲಿ 1 ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಹಾಕಲಾಗಿದೆ.
ಮೈಸೂರು ನಗರದ ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 4 ಲಕ್ಷ ಮತದಾರ ಹೆಸರನ್ನು ಕಿತ್ತು ಹಾಕಲಾಗಿದೆ. ಕರಡು ಪಟ್ಟಿ ಪ್ರಕಟವಾದ ಒಂದೇ ದಿನಕ್ಕೆ 8 ಸಾವಿರ ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ನಡೆದಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅನೇಕ ನ್ಯೂನತೆಗಳಿವೆ. ಆದ್ದರಿಂದ ಕಾಂಗ್ರೆಸ್ ಸರ್ಕಾರವು ಸುಪ್ರೀಂಕೋರ್ಟ್‌ನ ಮೊರೆ ಹೋಗಬೇಕು ಎಂದು ಹೇಳಿದರು.
ನೀರು ಬಿಡುವುದಾದರೂ ಹೇಗೆ?
ತಮಿಳುನಾಡಿಗೆ ಮತ್ತೆ 9 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದು ಆದೇಶಿಸಲಾಗಿದ್ದು, ಕಾವೇರಿ ಕಣಿವೆ ಜಲಾಶಯಗಳಲ್ಲಿ 75 ಟಿಎಂಸಿ ನೀರು ಸಂಗ್ರಹವಿದ್ದು, ಮುಂದಿನ ಏಪ್ರಿಲ್ ತನಕ 55 ಟಿಎಂಸಿ ಕುಡಿಯಲು ನೀರು ಬೇಕು. ನೀರಿಲ್ಲದಿದ್ದರೂ ಬಿಡುವುದಾದರೂ ಹೇಗೆ? ಎಂದು ಲಕ್ಷ್ಮಣ್ ಪ್ರಶ್ನಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಎದುರು ರಾಜ್ಯದ ಅಧಿಕಾರಿಗಳು ವಸ್ತುಸ್ಥಿತಿಯನ್ನು ವಿವರಿಸುತ್ತಿಲ್ಲವೇ? ಈ ಕುರಿತು ಅನುಮಾನ ಇದೆ ಎಂದು ದೂರಿದರು.
ವಿ.ಸೋಮಣ್ಣ ವಿರುದ್ಧ ಕಿಡಿ
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ರಾಹುಲ್ ಗಾಂಧಿ ಅವರನ್ನು ನಾಲಾಯಕ್ ಎಂದಿರುವ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಸಾಮಾನ್ಯ ಜ್ಞಾನ ಇಲ್ಲ. ರೈಲ್ವೆಯೊಂದಿಗೆ ಜಲಶಕ್ತಿ ಖಾತೆ ಹೊಂದಿರುವ ಇವರು ರಾಜ್ಯದ ಪರವಾಗಿ ಮಾತನಾಡಿ. ರಾಜ್ಯದ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಸರ್ಕಾರದ ತಂಡವನ್ನು ಕಳುಹಿಸಬೇಕು ಎಂದೂ ಆಗ್ರಹಿಸಿದರು.
ಕೇರಳದ ಪಾಲಕ್ಕಾಡ್ ವಿಭಾಗದಿಂದ ಮಂಗಳೂರು ವಿಭಾಗವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆ ಮಾಡಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅವಧಿಯಲ್ಲಿ ಆಗಿದ್ದ ತಪ್ಪನ್ನು ಈಗ ಸರಿಪಡಿಸಲಾಗಿದೆ. ಇದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸುತ್ತಿರುವುದು ಹಾಸ್ಯಾಸ್ಪದ ಎಂದು ಕಿಡಿಕಾರಿದರು.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳ ನಾಯಕರು ಅಧಿವೇಶನ ನಡೆಯಲು ಬಿಡಲಿಲ್ಲ. ಕೇಂದ್ರದ 33 ಸಚಿವರ ವಿರುದ್ಧ ಕ್ರಿಮಿನಲ್ ಕೇಸ್‌ಗಳಿವೆ. ಅವರನ್ನು ರಾಜೀನಾಮೆ ಕೇಳುತ್ತಿರಾ?, ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ ವಿಪಕ್ಷ ನಾಯಕರಾಗಿಯೇ ಮುಂದುವರಿಸುವಂತೆ ಅಮಿತ್ ಷಾ ಅವರನ್ನು ಕೋರುತ್ತೇವೆ.
ಇವರಿಬ್ಬರು ಇದ್ದರೆ ಕಾಂಗ್ರೆಸ್‌ಗೆ ಅನುಕೂಲ ಎಂದರು.
ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ 320 ಕೋಟಿ ರೂ. ಅನುದಾನ ನೀಡಿ 3 ವರ್ಷವಾದರೂ ಪ್ರಗತಿಯಾಗಿಲ್ಲ. 12 ವರ್ಷ ಕೇಂದ್ರದಲ್ಲಿ ಬಿಜೆಪಿ, ಇಲ್ಲಿ ಬಿಜೆಪಿ ಸಂಸದರಿದ್ದರೂ ರನ್‌ವೇ, ವಿಮಾನಯಾನ ಸೇವೆ ವಿಸ್ತರಣೆಯಾಗಿಲ್ಲ. ದಸರಾದಲ್ಲಿಯಾದರೂ ವಿಶೇಷ ವಿಮಾನ ಸೇವೆಯನ್ನು ತರುತ್ತಾರೆಯೇ? ಎಂದು ಪ್ರಶ್ನಿಸಿದರು.