ನಿವೇಶನ ಖರೀದಿ ಮಾಡಿ ಮನೆ ಕಟ್ಟಿಸಬೇಕೆಂಬುದು ಬಹುತೇಕರ ಕನಸು. ಆದರೆ ಮೈಸೂರು ಜಿಲ್ಲೆಯಲ್ಲಿ 89 ಸಾವಿರ ಕುಟುಂಬಗಳಿಗೆ ವಸತಿ ಇಲ್ಲ. 1 ಲಕ್ಷ ಕುಟುಂಬಗಳಿಗೆ ನಿವೇಶನ ಸಹ ಖರೀದಿಸಲು ಸಾಧ್ಯವಾಗಿಲ್ಲ...!
ಮುಖ್ಯಮಂತ್ರಿ ತವರು ಜಿಲ್ಲೆ, ರಾಜ್ಯದಲ್ಲೇ ಆರ್ಥಿಕವಾಗಿ ಮುಂದುವರಿದ ಪ್ರದೇಶವಾಗಿರುವ ಮೈಸೂರಿನಲ್ಲಿ ವಸತಿರಹಿತರು, ನಿವೇಶನರಹಿತರ ಸಂಖ್ಯೆ ಅಧಿಕವಾಗಿದ್ದು, ರಾಜ್ಯದ ಹಿಂದುಳಿದ ಜಿಲ್ಲೆಗಳ ಗತಿ ಏನು ಎಂಬ ಚಿಂತೆ ಮೂಡಿಸುತ್ತದೆ.
ಮನೆ ನಿರ್ಮಾಣಕ್ಕೆ ಪ್ರಮುಖವಾಗಿ ನಿವೇಶನ ಕೊರತೆಯೇ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಎಲ್ಲ ಕಡೆಗೂ ನಿವೇಶನಗಳ ಕೊರತೆ ಕಾಣಿಸಿದ್ದರಿಂದ ಇದೀಗ ಗುಂಪು ಮನೆ ಯೋಜನೆಗಳನ್ನು ಜಾರಿಗೊಳಿಸುತ್ತಿದೆಯಾದರೂ ಅದಕ್ಕೆ ಬೇಕಾದ ಜಮೀನು ಸಹ ಕೆಲವೆಡೆ ಸಿಗುತ್ತಿಲ್ಲ. ಹೀಗಾಗಿ ಸ್ವಂತ ಮನೆ ಕನಸು ಹಲವರಿಗೆ ನನಸಾಗುತ್ತಿಲ್ಲ.
89,541 ಕುಟುಂಬಗಳು ವಸತಿರಹಿತರು
6,307 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ 30,01,127 ಜನಸಂಖ್ಯೆ ಇರುವ ಮೈಸೂರು ಜಿಲ್ಲೆಯಲ್ಲಿ ಬರೋಬರಿ 1,89,854 ಕುಟುಂಬಗಳಿಗೆ ನಿವೇಶನ, ವಸತಿ ಇಲ್ಲ. 89,541 ಕುಟುಂಬಗಳು ವಸತಿರಹಿತವಾಗಿವೆ. ಈ ಪೈಕಿ ಗ್ರಾಮಾಂತರ ಪ್ರದೇಶದಲ್ಲೇ ಇವರ ಸಂಖ್ಯೆ ಹೆಚ್ಚು. ಹಳ್ಳಿಗಳಲ್ಲಿ 69,989 ಕುಟುಂಬಗಳು ವಸತಿರಹಿತವಾಗಿವೆ. ನಗರ ಪ್ರದೇಶದಲ್ಲಿ 19,552 ಕುಟುಂಬಗಳಿಗೆ ಸೂರು ಇಲ್ಲವಾಗಿದೆ.
1,00,313 ನಿವೇಶನರಹಿತರು
ನಿವೇಶನರಹಿತ ಕುಟುಂಬಗಳ ಸಂಖ್ಯೆಯೂ ಅಧಿಕವಾಗಿದೆ. ನಗರ ಪ್ರದೇಶದಲ್ಲೇ ಬಹಳಷ್ಟು ಜನರಿಗೆ ಸೈಟ್ ಇಲ್ಲ. ಸಿಟಿಗಳಲ್ಲಿ ಈ ಕುಟುಂಬಗಳ ಸಂಖ್ಯೆ 59,884 ಆಗಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ 40,429 ಕುಟುಂಬಗಳಿಗೆ ನಿವೇಶನವೇ ಇಲ್ಲ.
ಗ್ರಾಮೀಣ ಪ್ರದೇಶದಲ್ಲಿ 2018-19ರಲ್ಲಿ ಹಾಗೂ ನಗರ ಪ್ರದೇಶದಲ್ಲಿ 2016-17ರಲ್ಲಿ ನಡೆದ ಸಮೀಕ್ಷೆಯಲ್ಲಿ ವಸತಿ ಮತ್ತು ನಿವೇಶನ ರಹಿತ ಕುಟುಂಬಗಳನ್ನು ಪತ್ತೆ ಮಾಡಲಾಗಿದ್ದು, ಸಮೀಕ್ಷೆ ನಡೆಸಿ ಗ್ರಾಮೀಣ ಪ್ರದೇಶದಲ್ಲಿ 8 ವರ್ಷ, ನಗರ ಪ್ರದೇಶದಲ್ಲಿ 9 ವರ್ಷವಾಗಿದೆ. ಈಗ ಸಮೀಕ್ಷೆ ನಡೆಸಿದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.
ಕಾಯ್ದಿಟ್ಟಿರುವ ಜಾಗವೂ ಸಾಲದು:
ಅರ್ಹ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಸರ್ಕಾರಿ ಜಮೀನಿಗೆ ಆದ್ಯತೆ ನೀಡಲಾಗುತ್ತಿದೆ. ಸ್ಥಳೀಯವಾಗಿ ಲಭ್ಯ ಇರುವ ಜಮೀನನ್ನು ಮಂಜೂರು ಮಾಡಿಸಿಕೊಂಡು ಬಳಸಿಕೊಳ್ಳಲಾಗುತ್ತಿದೆ.
ಜಿಲ್ಲೆಯ ನಗರ ಪ್ರದೇಶದಲ್ಲಿ 40.08 ಎಕರೆ, ಗ್ರಾಮಾಂತರ ಪ್ರದೇಶದಲ್ಲಿ 45.93 ಎಕರೆ ಪ್ರದೇಶ ಸೇರಿದಂತೆ ಕೇವಲ 86 ಎಕರೆ ಪ್ರದೇಶವನ್ನು ನಿವೇಶನ ಯೋಜನೆಗೆ ಗುರುತಿಸಿ ಕಾಯ್ದಿರಿಸಲಾಗಿದೆ. ಇದು ಸಾಕಾಗುವುದಿಲ್ಲ. ಸರ್ಕಾರಿ ಜಮೀನು ಲಭ್ಯ ಇಲ್ಲದ ಕಡೆಗಳಲ್ಲಿ ಮಾತ್ರ ವಸತಿಗೆ ಸೂಕ್ತ ಖಾಸಗಿ ಜಮೀನು ಖರೀದಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಜಮೀನು ಖರೀದಿ ಸಮಿತಿ ಮೂಲಕ ಕ್ರಮ ವಹಿಸಲಾಗುತ್ತಿದೆ.
ಗುರಿ ತಲುಪಲೂ ಆಗುತ್ತಿಲ್ಲ
ವಿವಿಧ ಯೋಜನೆಯಡಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಇದು ಯಾವುದಕ್ಕೂ ಸಾಕಾಗುತ್ತಿಲ್ಲ. ಬೇಡಿಕೆ ಬೃಹದಾಕಾರದಷ್ಟಿದೆ. ಆದರೆ ಪೂರೈಕೆ ಬಹಳಷ್ಟು ಕಡಿಮೆ. ಗ್ರಾಮೀಣ ಪ್ರದೇಶದಲ್ಲಿ ವಿವಿಧ ಯೋಜನೆಗಳಡಿ 34,872 ಮನೆಗಳ ನಿರ್ಮಾಣಕ್ಕೆ ಗುರಿ ಹಾಕಿಕೊಳ್ಳಲಾಗಿದೆ. ಈ ಪೈಕಿ 24,394 ಮನೆಗಳಷ್ಟೇ ನಿರ್ಮಾಣಗೊಂಡಿವೆ. 10,478 ಮನೆಗಳ ನಿರ್ಮಾಣ ಇನ್ನೂ ಬಾಕಿ ಉಳಿದಿದೆ.
ಇನ್ನು ನಗರ ಪ್ರದೇಶದಲ್ಲಿ 10,992 ಮನೆ ನಿರ್ಮಾಣಕ್ಕೆ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ 5,149 ಮನೆಗಳು ಮಾತ್ರ ನಿರ್ಮಾಣವಾಗಿದ್ದು, ಇನ್ನು ಅರ್ಧದಷ್ಟು ಮನೆ ನಿರ್ಮಾಣ ಕಾಮಗಾರಿ ಬಾಕಿ ಇದೆ.
ಜಿಲ್ಲೆಯಲ್ಲಿ ನಗರ, ಗ್ರಾಮಾಂತರ ಪ್ರದೇಶದಲ್ಲಿ 45,864 ಮನೆಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈ ಪೈಕಿ 29,543 ಮನೆಗಳು ಮಾತ್ರ ನಿರ್ಮಾಣಗೊಂಡಿದ್ದು, 16,321 ಮನೆಗಳ ನಿರ್ಮಾಣ ಬಾಕಿ ಉಳಿದಿದೆ. ವರ್ಷಗಳು ಉರುಳಿದರೂ ಗುರಿ ತಲುಪಲು ಹರಸಾಹಸಪಡಲಾಗುತ್ತಿದೆ.
2022-23ರಲ್ಲಿ ಶುರು ಮಾಡಿರುವ ಬಹುತೇಕ ಮನೆಗಳು ಇನ್ನ್ನು ಪೂರ್ಣಗೊಂಡಿಲ್ಲ. ಮನೆಗಳ ನಿರ್ಮಾಣ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ನಿಧಾನಗತಿ ಪ್ರಕ್ರಿಯೆಗಳು, ಕಾಮಗಾರಿಗಳು ನಡೆಯುತ್ತಿರುವುದರಿಂದ ಮನೆ ಹಂಚಿಕೆ ವಿಳಂಬವಾಗುತ್ತಿದೆ. ಇದು ಸೂರಿನ ಆಕಾಂಕ್ಷಿಗಳಲ್ಲಿ ಬೇಸರ ಉಂಟು ಮಾಡಿದೆ.
ಬಾಡಿಗೆ ಮನೆ, ತಗಡಿನ ಶೆಡ್‌ಗಳಲ್ಲಿ ವಾಸ:
ಪ್ರಸ್ತುತ ದಿನಗಳಲ್ಲಿ ಸ್ವಂತ ಮನೆ ಬಡವರಿಗೆ ಭಾರವೇ ಆಗುತ್ತಿದೆ. ಬಹಳಷ್ಟು ಜನರು ವಸತಿ ಮತ್ತು ನಿವೇಶನ ಇಲ್ಲದೇ ನಿರಾಶ್ರಿತರಾಗಿದ್ದು, ಬಾಡಿಗೆ ಮನೆ, ತಗಡಿನ ಶೆಡ್‌ಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿಗಿಂತ ನಿವೇಶನ ರಹಿತರ ಸಂಖ್ಯೆ ಹೆಚ್ಚುತ್ತಿರುವುದು ಸವಾಲಾಗಿ ಪರಿಣಮಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ಸ್ವಂತ ನಿವೇಶನ ಇದ್ದರೂ ಮನೆ ನಿರ್ಮಾಣಕ್ಕೆ ಬೇಕಾದಷ್ಟು ಆರ್ಥಿಕ ಬಲ ಇಲ್ಲ. ನಗರ ಪ್ರದೇಶಗಳಲ್ಲಿ ಬಡವರಿಗೆ ಸೈಟ್ ಸಿಗದ ಕಾರಣ ಸ್ವಂತ ಮನೆ ಬಲು ದುಬಾರಿಯಾಗಿದೆ.
ನಿವೇಶನ ರಹಿತರಿಗೆ ಏನು ಪರಿಹಾರ?
ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಮನೆ ನಿರ್ಮಿಸಲು ಸಾಮಾನ್ಯ ವರ್ಗದವರಿಗೆ 1.20 ಲಕ್ಷ ರೂ., ಎಸ್‌ಸಿ-ಎಸ್‌ಟಿ 1.50 ಲಕ್ಷ ರೂ. ನೀಡಲಾಗುತ್ತಿದೆ. ಆದರೆ ಇದು ಏತಕ್ಕೂ ಸಾಲದು ಎಂಬ ಮಾತಿದೆ. ಇದೀಗ ರಾಜ್ಯ ಸರ್ಕಾರ ಈ ಮೊತ್ತವನ್ನು 4 ಹಾಗೂ 4.50 ಲಕ್ಷ ರೂ.ಗೆ ಹೆಚ್ಚಿಸುವ ಬಗ್ಗೆ ಆಲೋಚಿಸುತ್ತಿದೆ. ಆದರೆ ನಿವೇಶನ ರಹಿತರಿಗೆ ಏನು ಪರಿಹಾರ ಎಂಬುದರ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಹೀಗಾಗಿ, ಮೊದಲು ನಿವೇಶನ ರಹಿತರಿಗೆ ಒಂದೊಂದು ಸೈಟ್ ಇಲ್ಲವೇ ಗುಂಪು ಮನೆ ನಿರ್ಮಾಣಕ್ಕೆ ಸಾಮೂಹಿಕವಾಗಿ ಜಮೀನು ಖರೀದಿಸಿ ಲ್ಯಾಂಡ್ ಬ್ಯಾಂಕ್ ಮಾಡಿಕೊಳ್ಳಬೇಕಾಗಿದೆ ಎಂಬುದು ಸಾರ್ವಜನಿಕ ಆಗ್ರಹವಾಗಿದೆ.
ಮೈಸೂರು ಜಿಲ್ಲೆಯ ವಿವರ
ವಸತಿ ರಹಿತ ಕುಟುಂಬಗಳು ನಿವೇಶನ ರಹಿತ ಕುಟುಂಬಗಳು
ಗ್ರಾಮೀಣ ಪ್ರದೇಶ69,98940,429
ನಗರ ಪ್ರದೇಶ19,55259,884
ಒಟ್ಟು 89,5411,00,313
"
ವಿವಿಧ ವಸತಿ ಯೋಜನೆಯಡಿ ಮನೆಗಳ ಹಂಚಿಕೆ ಪ್ರಗತಿಯಲ್ಲಿದೆ. ಕೆಲ ಕಡೆ ಮನೆಗಳ ನಿರ್ಮಾಣ ನಡೆದಿದ್ದು, ಕೆಲಸ ಪೂರ್ಣಗೊಂಡ ಬಳಿಕ ಮಾರ್ಗಸೂಚಿ ಪ್ರಕಾರ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು.