2 ವರ್ಷದಲ್ಲಿ 18 ಸಾವಿರ ಬಿಪಿಎಲ್ ಕಾರ್ಡ್ ರದ್ದು: ಅನರ್ಹರರು ಕಂಗಾಲು

ಬಿಪಿಎಲ್ ಕಾರ್ಡ್ ರದ್ದು
ಬಿಪಿಎಲ್ ಕಾರ್ಡ್ ರದ್ದು
Published on

ಪ್ರಮುಖ ಮುಖ್ಯಾಂಶಗಳು

  • *ಕಳೆದ 8 ತಿಂಗಳಿನಲ್ಲೇ 4,282 ಚೀಟಿಗಳು ಅಮಾನ್ಯ
  • ಅನರ್ಹ ಪಡಿತರ ಚೀಟಿಗಳು ಎಪಿಎಲ್ ಆಗಿ ಪರಿವರ್ತನೆ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ವಿವಿಧ ಕಲ್ಯಾಣ ಯೋಜನೆಗಳು, ಸೌಲಭ್ಯಗಳನ್ನು ಪಡೆಯಲು ಪ್ರಮುಖ ಅರ್ಹತೆಯಾಗಿರುವ ಮತ್ತು ಬಡವರ ಹಸಿವು ನೀಗಿಸುವ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ಮುಂದುವರಿದಿದೆ. 
ಕಳೆದ ಎರಡು ವರ್ಷದಲ್ಲಿ 18,932 ಮತ್ತು ಪ್ರಸಕ್ತ ಸಾಲಿನಲ್ಲಿ 4,282 ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಿ, ಅವುಗಳನ್ನು ಎಪಿಎಲ್ ಚೀಟಿಯಾಗಿ ಪರಿವರ್ತಿಸಲಾಗಿದೆ. 
ಅನರ್ಹಗೊಂಡಿರುವ ಬಡವರು ಸರ್ಕಾರಿ ಸೌಲಭ್ಯಗಿಂತ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಪಡೆಯಲಾಗದೆ ಪರದಾಡುವಂತಾಗಿದೆ.
ಆಪರೇಷನ್ ಬಿಪಿಎಲ್ ಎಂಬ ಹೆಸರಿನಡಿ ಜಿಲ್ಲಾದ್ಯಂತ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ. ಕಳೆದ ಎರಡು ವರ್ಷದಲ್ಲಿ ಅಂತ್ಯೋದಯ ಅನ್ನ ಯೋಜನೆ (ಎಎವೈ) 1,147 ಮತ್ತು ಆದ್ಯತಾ ಕುಟುಂಬ(ಪಿಎಚ್‌ಎಚ್) 17,785 ಸೇರಿದಂತೆ 18,932 ಕಾರ್ಡ್‌ಗಳು ರದ್ದಾಗಿವೆ. 

ಮೈಸೂರು ತಾಲೂಕಿನಲ್ಲೇ ಅನರ್ಹ ಕಾರ್ಡ್‌ಗಳು ಹೆಚ್ಚು:

ಚಾಲ್ತಿಯಲ್ಲಿರುವ 2025-26ನೇ ಸಾಲಿನಲ್ಲಿ ನವೆಂಬರ್‌ವರೆಗೆ 63 ಎಎವೈ, 4219 ಪಿಎಚ್‌ಎಚ್ ಸೇರಿದಂತೆ 4,282 ಪಡಿತರ ಚೀಟಿಗಳು ಅಮಾನ್ಯಗೊಂಡಿವೆ. ಈ ಪೈಕಿ ಮೈಸೂರು ತಾಲೂಕಿನಲ್ಲೇ ಅತಿ ಹೆಚ್ಚು ಅನರ್ಹ ಬಿಪಿಎಲ್ ಪಡಿತರ ಚೀಟಿಗಳು ಪತ್ತೆಯಾಗಿವೆ. ನಂತರ ಸ್ಥಾನದಲ್ಲಿರುವ ನಂಜನಗೂಡು ತಾಲೂಕು ಇದೆ.
 ಉಭಯ ತಾಲೂಕಿನಲ್ಲಿ ಅಕ್ರಮ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ಕೆ.ಆರ್.ನಗರ ತಾಲೂಕಿನಲ್ಲಿ ಅತಿ ಕಡಿಮೆ ಅಂದರೆ 110 ಬಿಪಿಎಲ್ ಕಾರ್ಡ್ ರದ್ದಾಗಿವೆ. ಕಾಡನಂಚಿನ ಸಾಲಿಗ್ರಾಮ, ಎಚ್.ಡಿ.ಕೋಟೆಯಲ್ಲಿ 150 ಬಿಪಿಎಲ್ ಚೀಟಿಗಳು ಅಮಾನ್ಯಗೊಂಡಿವೆ.
ಈ ಮೂಲಕ ನೂರಾರು ಸದಸ್ಯರ ಹೆಸರು ಡಿಲಿಟ್ ಮಾಡಲಾಗಿದೆ. ಇದು ಸರ್ಕಾರಕ್ಕೆ ವರದಾನವಾದರೆ, ಗ್ರಾಹಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹಲವರು ರೇಷನ್‌ಗಾಗಿ ಕಾರ್ಡ್‌ಗಳನ್ನು ಹೊಂದಿರುವುದಕ್ಕಿಂತ ಬಡತನ ರೇಖೆಗಿಂತ ಕೆಳಗಿರುವವರು ಆಸ್ಪತ್ರೆ ಸೌಲಭ್ಯ ಹಾಗೂ ವಿವಿಧ ಸರ್ಕಾರಿ ಸವಲತ್ತು ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಇವುಗಳೆಲ್ಲ ಕೈತಪ್ಪಲಿದೆ.


ರದ್ದುಪಡಿಸುವ ಪ್ರಕ್ರಿಯೆ ನಿರಂತರ:

ವಿವಿಧ ಕಾರಣಗಳಿಗೆ ಪಡಿತರ ಚೀಟಿಗಳು ಅನರ್ಹ ಎಂದು ಕೇಂದ್ರ ಸರ್ಕಾರವೇ ಗುರುತಿಸಿದೆ. ರಾಜ್ಯದಲ್ಲಿ ಇವುಗಳ ಸಂಖ್ಯೆ 7.76 ಲಕ್ಷವಾಗಿದೆ. ರಾಜ್ಯ ಸರ್ಕಾರದ ಕುಟುಂಬ ತಂತ್ರಾಂಶದ ಪ್ರಕಾರವೂ ಅನರ್ಹ ಪಡಿತರ ಚೀಟಿಗಳು ಪತ್ತೆಯಾಗಿವೆ. 
ನಿರಂತರ ಪ್ರಕ್ರಿಯೆ ಮೂಲಕ ಇವುಗಳನ್ನು ಹಂತ-ಹಂತವಾಗಿ ರದ್ದುಪಡಿಸುವ ಕಾರ್ಯ ಮುಂದುವರಿಯಲಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಅಕ್ರಮವಾಗಿ ಬಿಪಿಎಲ್ ಕಾರ್ಡ್‌ಗಳನ್ನು ಪಡೆದು ಸರ್ಕಾರದ ಪಡಿತರ ಯೋಜನೆಯ ಲಾಭ ಪಡೆದುಕೊಂಡಿರುವ ಫಲಾನುಭವಿಗಳಿಗೆ ದಂಡ ವಿಧಿಸುವ ಬಗ್ಗೆ ಆಹಾರ ಇಲಾಖೆ ನಿಯಮಗಳನ್ನು ರೂಪಿಸಲು ಈಗಾಗಲೇ ಕಾರ್ಯಪ್ರವೃತ್ತವಾಗಿದೆ. 
ಈ ದಂಡದ ವಿಧಾನವು ಅಕ್ರಮಗಳನ್ನು ತಡೆಗಟ್ಟುವ ಜತೆಗೆ ಸರ್ಕಾರದ ಸಂಪನ್ಮೂಲಗಳನ್ನು ದುರ್ಬಳಕೆ ಪಡಿಸಿಕೊಳ್ಳದಂತೆ ಖಾತ್ರಿಪಡಿಸುವ ಗುರಿ ಹೊಂದಿದೆ.

ಕಾರ್ಡ್ ರದ್ದಾಗಲು ಕಾರಣ ಏನು?

ಕೇಂದ್ರ ಸರ್ಕಾರದ ಆದೇಶದನ್ವಯ ವಾರ್ಷಿಕ 1.20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರು, ಜಿಎಸ್‌ಟಿ ಪಾವತಿದಾರರು, ಸರ್ಕಾರಿ ನೌಕರರು, ನಗರ ಪ್ರದೇಶದಲ್ಲಿ 1 ಸಾವಿರ ಚ.ಅಡಿಗಿಂತ ಹೆಚ್ಚಿನ ವಿಸ್ತಾರದ ಪಕ್ಕಾ ಮನೆ ಹೊಂದಿರುವವರು, ಹೊರ ರಾಜ್ಯಗಳಲ್ಲೂ ಪಡಿತರ ಚೀಟಿ ಹೊಂದಿರುವವರು, ರಾಜ್ಯದಲ್ಲೇ ಎರಡೆರಡು ಪಡಿತರ ಚೀಟಿ ಇದ್ದವರಿಗೆ ಬಿಸಿ ಮುಟ್ಟಿಸಲಾಗಿದೆ.
 ಶತಾಯುಷಿಗಳು, 6ರಿಂದ 12 ತಿಂಗಳ ಅವಧಿಯಲ್ಲಿ ಒಮ್ಮೆಯೂ ಪಡಿತರ ಪಡೆಯದವರು, 7.5 ಎಕರೆಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿದವರು ಪಡೆದುಕೊಂಡಿದ್ದ ಬಿಪಿಎಲ್ ಕಾರ್ಡ್ ಅಸಿಂಧುಗೊಳಿಸಲಾಗಿದೆ. ಆದರೆ ಹಲವೆಡೆ ಅರ್ಹರಿಗೂ ಬಿಪಿಎಲ್ ಪಡಿತರ ಕಾರ್ಡ್ ಬದಲಾವಣೆ ಮಾಡಿರುವ ದೂರುಗಳು ಕೇಳಿಬಂದಿವೆ.

ವಾಪಸ್ ಪಡೆಯಲು ಅವಕಾಶ:

ಅರ್ಹತೆ ಇದ್ದೂ ವಾರ್ಷಿಕ ಆದಾಯದ ಗೊಂದಲದಿಂದಾಗಿ ಕಾರ್ಡ್‌ಗಳು ರದ್ದಾಗಿದ್ದರೆ, ಸೂಕ್ತ ದಾಖಲೆಗಳೊಂದಿಗೆ ಆಹಾರ ಇಲಾಖೆ ಕಚೇರಿ ಅಥವಾ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬಹುದು. 
ಅವುಗಳನ್ನು ಪರಿಶೀಲನೆ ನಡೆಸಿ ಅರ್ಹತೆ ಹೊಂದಿದ್ದರೆ 45 ದಿನದೊಳಗೆ ಮತ್ತೆ ಬಿಪಿಎಲ್ ಕಾರ್ಡ್ ಮರು ಸ್ಥಾಪಿಸಿ ವಿತರಿಸಲಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಈಗಾಗಲೇ ತಿಳಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲೂ ಕಾರ್ಡ್ ರದ್ದಾದ ಸಾಕಷ್ಟು ಜನರು ಮತ್ತೆ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಬಿಪಿಎಲ್ ಕಾರ್ಡ್ ವಾಪಸ್ ನೀಡಲಾಗಿದೆ.

ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಹಣ ಕೂಡ ರದ್ದು

ಬಿಪಿಎಲ್ ಕಾರ್ಡ್ ರದ್ದಾದರೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಸ್ಥಗಿತವಾಗಲಿದೆ. ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಈ ಹಿಂದೆ ಗೃಹಲಕ್ಷ್ಮಿ ಹಣ ನೀಡಲಾಗುತ್ತಿತ್ತು. 
ಆದರೆ, ಇದೀಗ ತೆರಿಗೆ ಕಟ್ಟುವವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗಿದ್ದು, ಇದೀಗ ಅಂತಹವರ ಗೃಹಲಕ್ಷ್ಮಿ ಹಣ ಸಹ ನಿಲ್ಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ  ಈಗಾಗಲೇ ಸ್ಪಷ್ಟಪಡಿಸಿದೆ.

2025-26ನೇ ಸಾಲಿನಲ್ಲಿ ರದ್ದುಗೊಳಿಸಲಾದ ಅನರ್ಹ ಬಿಪಿಎಲ್ ಪಡಿತರ ಚೀಟಿಗಳ ವಿವರ

ಎಚ್.ಡಿ.ಕೋಟೆ 159
ಹುಣಸೂರು         422
ಕೆ.ಆರ್.ನಗರ 110
ಮೈಸೂರು         1119
ನಂಜನಗೂಡು 1030
ಪಿರಿಯಾಪಟ್ಟಣ 356
ಸಾಲಿಗ್ರಾಮ        150
ಸರಗೂರು        144
ತಿ.ನರಸೀಪುರ 792
ಒಟ್ಟು        4282
"

2017ರಲ್ಲಿ ರೂಪಿಸಿರುವ ಮಾನದಂಡಗಳ ವಿರುದ್ಧವಾಗಿ ಪಡೆದಿರುವ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಸಂದರ್ಭದಲ್ಲಿ ಕಂಡುಬರುವ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net