ಮೈಸೂರಿನಲ್ಲಿ ಒಂದೇ ದಿನ 173 ಮೆಟ್ರಿಕ್ ಟನ್ ತ್ಯಾಜ್ಯ ವಿಲೇವಾರಿ

 ನಗರ ಪಾಲಿಕೆಯಿಂದ ಗುರುವಾರ ವಿವಿಧೆಡೆ ಸ್ವಚ್ಛತಾ ಕಾರ್ಯ ನಡೆಯಿತು.
ನಗರ ಪಾಲಿಕೆಯಿಂದ ಗುರುವಾರ ವಿವಿಧೆಡೆ ಸ್ವಚ್ಛತಾ ಕಾರ್ಯ ನಡೆಯಿತು.
Published on

ನಗರ ಪಾಲಿಕೆಯು ಗುರುವಾರ ಒಂದೇ ದಿನ 568 ಜನರ ಸಹಭಾಗಿತ್ವದಲ್ಲಿ 173.66 ಮೆಟ್ರಿಕ್‌ಟನ್ ತ್ಯಾಜ್ಯ ತೆರವುಗೊಳಿಸುವ ಮೂಲಕ 8 ತ್ಯಾಜ್ಯ ಸುರಿಯುವ ಸ್ಥಳಗಳನ್ನು ಸುಂದರ ತಾಣವಾಗಿ ರೂಪಿಸಿದೆ.

ಸ್ವಾತಂತ್ರೊೃೀತ್ಸವ ಸ್ವಚ್ಛತಾ ಅಭಿಯಾನದ ಅಂಗವಾಗಿ ಒಟ್ಟು 80 ತ್ಯಾಜ್ಯ ಸುರಿಯುವ ತಾಣಗಳನ್ನು ತ್ಯಾಜ್ಯ ಮುಕ್ತ ತಾಣಗಳಾಗಿ ಪರಿವರ್ತಿಸುವ ಗುರಿಯನ್ನು ನಗರ ಪಾಲಿಕೆ ಹೊಂದಿದ್ದು, ಇದರ ಭಾಗವಾಗಿ ಗುರುವಾರ ಸ್ವಚ್ಛತಾ ಕಾರ್ಯ ನಡೆಯಿತು.
ವಲಯ-1ರ ಸಾಂದೀಪನಿ ಪ್ರದೇಶ, ವಲಯ-2ರ ಜೆ.ಪಿ.ನಗರದ 18ನೇ ಅಡ್ಡರಸ್ತೆ, ವಲಯ-6ರ ಸಯ್ಯಜಿ ಮಸೀದಿ ಸಮೀಪ ಹಾಗೂ ನಜರ್‌ಬಾದ್ ಮುಖ್ಯರಸ್ತೆ, ವಲಯ-7ರ ನಾಟನಹಳ್ಳಿಯ ಗಣಪತಿ ದೇವಸ್ಥಾನದ ಸಮೀಪ, ವಲಯ-9ರ ಸುಮನಾ ಶಾಲೆಯ ಎದುರು ಹಾಗೂ ಕಲ್ಯಾಣಗಿರಿಯ ಆರ್‌ಜಿಎ ಶಾಲೆಯ ಸಮೀಪ ಮತ್ತು ವಲಯ-8ರ ರಾಜೀವ್‌ನಗರ 2ನೇ ಹಂತದ ಈಡನ್ ಗಾರ್ಡನ್ ಪ್ರದೇಶದಲ್ಲಿರುವ ತ್ಯಾಜ್ಯ ಸುರಿಯುವ ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು.
ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯ ನಿವಾಸಿಗಳು ಸೇರಿದಂತೆ 568 ಜನರು ಭಾಗವಹಿಸಿದ್ದು, 39 ಮಾನವ ಗಂಟೆಗಳ ಕಾರ್ಯಾಚರಣೆಯಲ್ಲಿ 173.66 ಮೆಟ್ರಿಕ್ ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಬಣ್ಣ ಬಳಿಯುವುದು, ಗಿಡಗಳನ್ನು ನೆಡುವುದು ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಲಾಯಿತು.
ಈಡನ್ ಗಾರ್ಡನ್ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ, ಪರಿವರ್ತಿಸಲಾದ ಸ್ಥಳಗಳಲ್ಲಿ ಪುನಃ ತ್ಯಾಜ್ಯ ಸುರಿಯದಂತೆ ನಿರಂತರ ನಿಗಾ ವಹಿಸಬೇಕು. ಸ್ಥಳೀಯ ನಿವಾಸಿಗಳು ಹಾಗೂ ಸಂಘ-ಸಂಸ್ಥೆಗಳು ಈ ತಾಣಗಳ ಸ್ವಚ್ಛತೆ ಮತ್ತು ಸೌಂದರ್ಯವನ್ನು ಸುಸ್ಥಿರವಾಗಿ ಕಾಪಾಡಲು ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸ್ವಚ್ಛತಾ ರಾಯಭಾರಿ ಸೂರಜ್ ಮಾತನಾಡಿ, ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯದೆ, ಮೂಲದಲ್ಲಿಯೇ ತ್ಯಾಜ್ಯವನ್ನು ವಿಂಗಡಿಸಿ ಪಾಲಿಕೆಯ ಸಂಗ್ರಹಣಾ ವಾಹನಗಳಿಗೆ ಹಸ್ತಾಂತರಿಸುವ ಮೂಲಕ ಸ್ವಚ್ಛ ಮೈಸೂರು ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಅಭಿಯಾನದಡಿ ಇದುವರೆಗೆ ಒಟ್ಟು 40 ತ್ಯಾಜ್ಯ ಸುರಿಯುವ ಸ್ಥಳಗಳನ್ನು ಸುಂದರ ತಾಣವಾಗಿ ಪರಿವರ್ತಿಸಲಾಗಿದ್ದು, ಉಳಿದ 40 ಸ್ಥಳಗಳನ್ನು ನಿಗದಿತ ಅವಧಿಯೊಳಗೆ ಪರಿವರ್ತಿಸುವ ಗುರಿ ಹೊಂದಲಾಗಿದೆ. ಪರಿವರ್ತಿತ ಸ್ಥಳಗಳಲ್ಲಿ ಮತ್ತೆ ತ್ಯಾಜ್ಯ ಸುರಿಯದಂತೆ 30 ದಿನಗಳ ಕಾಲ ನಿರಂತರ ಮೇಲ್ವಿಚಾರಣೆ ನಡೆಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ಸುರಿಸುವವರ ವಿರುದ್ಧ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಎಚ್ಚರಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net