ಮುದ್ರಾ ಯೋಜನೆಯಡಿ ಜಿಲ್ಲೆಗೆ 10 ಸಾವಿರ ಕೋಟಿ ರೂ. ಅನುದಾನ: ಟಿ.ಎಸ್.ಶ್ರೀವತ್ಸ

ಭಾರತೀಯ ಜನತಾ ಪಾರ್ಟಿ ಮೈಸೂರು ಮಹಾನಗರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೋಮವಾರ ನೆರವೇರಿತು. ಯದುವೀರ್, ಟಿ.ಎಸ್.ಶ್ರೀವತ್ಸ, ಎಲ್.ನಾಗೇಂದ್ರ, ಕುಂಬ್ರಳ್ಳಿ ಸುಬ್ಬಣ್ಣ, ರಘು ಕೌಟಿಲ್ಯ, ಅನಿಲ್ ಥಾಮಸ್, ತೋಂಟದಾರ್ಯ, ಶಿವಕುಮಾರ್, ಅಪ್ಪಣ್ಣ, ಫಣೀಶ್, ಮಂಜುನಾಥ್, ಎಂ.ಶಿವಕುಮಾರ್, ಡಾ.ರೂಪಾ ಇತರರಿದ್ದರು.
ಭಾರತೀಯ ಜನತಾ ಪಾರ್ಟಿ ಮೈಸೂರು ಮಹಾನಗರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೋಮವಾರ ನೆರವೇರಿತು. ಯದುವೀರ್, ಟಿ.ಎಸ್.ಶ್ರೀವತ್ಸ, ಎಲ್.ನಾಗೇಂದ್ರ, ಕುಂಬ್ರಳ್ಳಿ ಸುಬ್ಬಣ್ಣ, ರಘು ಕೌಟಿಲ್ಯ, ಅನಿಲ್ ಥಾಮಸ್, ತೋಂಟದಾರ್ಯ, ಶಿವಕುಮಾರ್, ಅಪ್ಪಣ್ಣ, ಫಣೀಶ್, ಮಂಜುನಾಥ್, ಎಂ.ಶಿವಕುಮಾರ್, ಡಾ.ರೂಪಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಟಿ.ಎಸ್.ಶ್ರೀವತ್ಸ ಮಾಹಿತಿ
  • ಬಿಜೆಪಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಮೈಸೂರು: ಕೇಂದ್ರ ಸರ್ಕಾರದ ಅನೇಕ ಯೋಜನೆಗಳಿಂದ ಜಿಲ್ಲೆಗೆ ಕೋಟ್ಯಂತರ ರೂಪಾಯಿ ಅನುದಾನ ದೊರಕಿದೆ. ಮುಖ್ಯವಾಗಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 2019 ರಿಂದ 2025 ರವರೆಗೆ ಜಿಲ್ಲೆಗೆ 10 ಸಾವಿರ ಕೋಟಿ ರೂ. ಸಿಕ್ಕಿದ್ದು, ನಮ್ಮ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ನಗರದ ಇಂದ್ರಲೋಕ ಕನ್ವೆಕ್ಷನ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಭಾರತೀಯ ಜನತಾ ಪಾರ್ಟಿ ಮೈಸೂರು ಮಹಾನಗರ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಎಸ್‌ಟಿ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ. ಮೋದಿ ಅವರು ರಾಜ್ಯದ ತೆರಿಗೆ ಪಾಲು ನೀಡುವುದರ ಜತೆಗೆ ದೇಶಾದ್ಯಂತ ಕೋಟ್ಯಂತರ ರೂ. ಅನುದಾನ ನೀಡುವ ಮೂಲಕ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆ ಎಲ್ಲ ಯೋಜನೆಗಳ ಪಾಲು ನಮ್ಮ ರಾಜ್ಯಕ್ಕೂ ಸಿಕ್ಕಿದೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರ ಜನ ಮುದ್ರಾ ಯೋಜನೆಯಿಂದ ಬದುಕುತ್ತಿದ್ದಾರೆ. ಜಲ ಜೀವನ್ ಮಿಷನ್ ಅಡಿಯ 2900 ಕೋಟಿ ರೂ. ಅನುದಾನದಲ್ಲಿ ಜಿಲ್ಲೆಯ ಪ್ರತಿ ಮನೆ ಮನೆಗೆ ಕುಡಿಯುವ ನೀರು ನೀಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳಿಂದ ನಾವು ಕ್ಷೇತ್ರದಲ್ಲಿ ತಲೆ ಎತ್ತಿ ಓಡಾಡುವಂತೆ ಆಗಿದೆ. ಈ ಬಗ್ಗೆ ನಮ್ಮ ಕಾರ್ಯಕರ್ತರು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ನಮ್ಮ ಪಕ್ಷ ಬೂತ್ ಮಟ್ಟದಲ್ಲಿ ಸಕ್ರಿಯವಾಗಬೇಕು. ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಕಡ್ಡಾಯವಾಗಿ ಮನ್ ಕಿ ಬಾತ್ ಕೇಳಬೇಕು. ಅಲ್ಲಿ ಚರ್ಚೆಯಾಗುವ ವಿಷಯಗಳನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಸರ್ಕಾರ ಅಧಿಕಾರದಲ್ಲಿದೆ. ಗೃಹಲಕ್ಷ್ಮಿ ಯೋಜನೆ ಅಡಿ ಜನರಿಗೆ 5 ಸಾವಿರ ಕೋಟಿ ರೂ. ಅನ್ಯಾಯ ಮಾಡಿದ್ದಾರೆ. ಆರಂಭದಲ್ಲೇ ವಾಲ್ಮೀಕಿ ಹಗರಣದಲ್ಲಿ ಸಚಿವರೊಬ್ಬರು ರಾಜೀನಾಮೆ ನೀಡಿ ಜೈಲು ಸೇರಿದರು. ಇದೀಗ ಭ್ರಷ್ಟಾಚಾರ, ಅಕ್ರಮ ಮಾಡಿ ನಾಲ್ಕೈದು ಶಾಸಕರು ಜೈಲಿನಲ್ಲಿ ಇದ್ದು, ಆಡಳಿತ ಪಕ್ಷದ ಹೆಚ್ಚು ಶಾಸಕರು ಜೈಲಿಗೆ ಹೋಗಿರುವುದು ಇವರ ದಾಖಲೆಯಾಗಿದೆ. ಇಂತಹ ಕೆಟ್ಟ ಸರ್ಕಾರದ ವಿರುದ್ಧ ಹೋರಾಟದ ಮನೋಭಾವವನ್ನು ಕಾರ್ಯಕರ್ತರಲ್ಲಿ ಮೂಡಿಸಬೇಕು ಎಂದರು.
ದ್ವೇಷ ಭಾಷಣ ವಿರುದ್ಧ ಕಾಯ್ದೆ ತರಲು ಮುಂದಾಗಿದ್ದಾರೆ. ಮೊದಲಿಗೆ ದೇಷ ಭಾಷಣ ಎಂದರೆ ಏನು ಎಂದು ತಿಳಿಸಬೇಕು. ಉತ್ತರ ಕರ್ನಾಟಕ ಜನರು ಸಾಮಾನ್ಯವಾಗಿ ಮಾತನಾಡುವ ಮಾತು ದಕ್ಷಿಣ ಕರ್ನಾಟಕದ ಜನರಿಗೆ ದ್ವೇಷ ಎನ್ನಿಸಬಹುದು. ಇದು ಅತ್ಯಂತ ಕೆಟ್ಟ ಕಾನೂನು ಎಂದರು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಇಡೀ ವಿಶ್ವದಲ್ಲಿ ಬಿಜೆಪಿ ದೊಡ್ಡ ಪಕ್ಷ. ನಮ್ಮ ಪಕ್ಷದಲ್ಲಿ ವೈವಿಧ್ಯತೆ ಇದೆ. ಎಲ್ಲರಿಗೂ ಸಮಾನ ಅವಕಾಶ ನೀಡಲಾಗುತ್ತದೆ. ನಮ್ಮ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು. ಮುಂದೆ ಬರಲಿರುವ ಸ್ಥಳೀಯ ಸಂಸ್ಥೆ, ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಮತ್ತೆ ಅಧಿಕಾರಕ್ಕೆ ಬರಲು ಸಹಕರಿಸಬೇಕು ಎಂದರು.
ಕೇಂದ್ರದಲ್ಲಿ ದೇಶದ ಅಭಿವೃದ್ಧಿಯೇ ಗುರಿಯಾಗಿದೆ. ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಕನ್ನಡಿಗರ ಅಭಿವೃದ್ಧಿಗಾಗಿ, ಕನ್ನಡಿಗರ ಬೆಳವಣಿಗೆಗಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ಭಾವನೆ ಮೂಡಿಸಬೇಕು. ಇತ್ತೀಚೆಗೆ ಉತ್ತರ ಭಾರತದ ಎಲ್ಲ ರಾಜ್ಯದ ಚುನಾವಣೆಯಲ್ಲೂ ಬಿಜೆಪಿ ಪರ ಜನಾದೇಶ ಬಂದಿದೆ. ಅಲ್ಲಿನ ಸಂಘಟನೆ ಮತ್ತು ನಾಯಕತ್ವದ ಗುಣದಿಂದ ಅದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲೂ ಅಂತಹ ಫಲಿತಾಂಶ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಕೆಲಸ ಮಾಡಬೇಕು ಎಂದರು.
ಇದೇ ವೇಳೆ ನೂತನ ಪದಾಧಿಕಾರಿಗಳು ಅಧಿಕಾರ ಸ್ಪೀಕರಿಸಿದರು. ಮೈಸೂರು ಮಹಾನಗರ ಅಧ್ಯಕ್ಷ ಹಾಗೂ ಶಾಸಕ ಎಲ್.ನಾಗೇಂದ್ರ ಮಾತನಾಡಿದರು. ಮೈಸೂರು ಗ್ರಾಮಾಂತರ ಘಟಕದ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ರಾಜ್ಯ ಅಲ್ಪಸಂಖ್ಯಾರ ಮೋರ್ಚಾ ಅಧ್ಯಕ್ಷ ಅನಿಲ್ ಥಾಮಸ್, ಮಾಜಿ ಎಂಎಲ್‌ಸಿ ತೋಂಟದಾರ್ಯ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಅಪ್ಪಣ್ಣ, ಫಣೀಶ್, ಮಂಜುನಾಥ್, ಎಂ.ಶಿವಕುಮಾರ್, ಡಾ.ರೂಪಾ ಇತರರಿದ್ದರು.
"

ಜೆಡಿಎಸ್ ಜತೆಯ ಮೈತ್ರಿಯನ್ನು ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಒಪ್ಪಿಕೊಂಡಿದ್ದಾರೆ. ಮೈತ್ರಿ ಬೇಡ ಎನ್ನುವ ಅಧಿಕಾರ ನಮಗೆ ಯಾರಿಗೂ ಇಲ್ಲ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬೇರೆ ಅಪಸ್ವರದ ಮಾತನಾಡಿದ್ದಾರೆ. ಅವರೆಲ್ಲ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗಿಂತ ದೊಡ್ಡವರಲ್ಲ. ಮೈತ್ರಿ ವಿರುದ್ಧ ಅಪಸ್ವರ ಎತ್ತುವವರ ವಿರುದ್ಧ ಪಕ್ಷ ಕಠಿಣ ಕ್ರಮ ಕೈಗೊಳ್ಳುತ್ತದೆ. ಹಾಗಾಗಿ, ಈ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು. ಜತೆಗೆ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿ ಆದರೆ, ನಮ್ಮ ಕ್ಷೇತ್ರದ ಅಭ್ಯರ್ಥಿ ಸೋಲಲಿ ಎಂಬ ಮನೋಭಾವವನ್ನು ದೂರ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net