6 ನಿಮಿಷದಲ್ಲಿ 10 ಕೋಟಿ ಚಿನ್ನಾಭರಣ ಗಾಯಬ್!

Theft Image
Theft Image
Published on

8.34 ಕೆಜಿ ಬಂಗಾರ * ಶೋರೂಂ ಮಾಲೀಕ ನೀಡಿದ ದೂರಿನಿಂದ ಬಹಿರಂಗ

ಹುಣಸೂರು: 6 ನಿಮಿಷಗಳಲ್ಲಿ 10 ಕೋಟಿ ರೂ. ಮೌಲ್ಯದ 8 ಕೆಜಿ ತೂಕದ ಚಿನ್ನಾಭರಣಗಳನ್ನು ದುಷ್ಕರ್ಮಿಗಳು ದೋಚಿದ್ದಾರೆ.
ನಗರದ ಬೈಪಾಸ್ ರಸ್ತೆಯಲ್ಲಿ ಭಾನುವಾರ ನಡೆದ ದರೋಡೆ ಪ್ರಕರಣದ ಕುರಿತು ಮಳಿಗೆ ಜಂಟಿ ಮಾಲೀಕರಲ್ಲಿ ಒಬ್ಬರಾದ ಕೇರಳದ ಕನ್ನೂರು ಜಿಲ್ಲೆಯ ಸಿನುದ್ದೀನ್ ನಗರಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ದರೋಡೆಯಾದ ಪರಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಪೊಲೀಸರು ಮಾಲೀಕ ನೀಡಿದ ಮಾಹಿತಿಯನ್ವಯ ಪ್ರಥಮಮಾಹಿತಿ ವರದಿ(ಎಫ್‌ಐಆರ್)ಯನ್ನು ದಾಖಲಿಸಿದ್ದಾರೆ.
8.34 ಕೆಜಿ ಚಿನ್ನಾಭರಣ: ಭಾನುವಾರ ಮಧ್ಯಾಹ್ನ 2ಗಂಟೆ 4 ನಿಮಿಷಕ್ಕೆ ಒಳನುಗ್ಗಿದ ದರೋಡೆಕೋರರು 2 ಗಂಟೆ 9 ನಿಮಿಷ(ಕೇವಲ 6 ನಿಮಿಷಗಳಲ್ಲಿ) ಕೋಟ್ಯಂತರ ರೂ.ಬೆಲೆಬಾಳುವ ಚಿನ್ನ ಮತ್ತು ವಜ್ರದ ಆಭರಣಗಳನ್ನು ಬ್ಯಾಗಿನಲ್ಲಿ ಸಲೀಸಾಗಿ ತುಂಬಿಕೊಂಡು ಕಾಲ್ಕಿತ್ತಿದ್ದಾರೆ. ಮಳಿಗೆ ಸಿಬ್ಬಂದಿ ಏನಾಗುತ್ತಿದೆ ಎಂದು ತಿಳಿಯುವುದರೊಳಗೆ ಐವರು ಜಾಗ ಖಾಲಿ ಮಾಡಿದ್ದರು.
ದೋಚಿದ ಚಿನ್ನಾಭರಣಗಳ ವಿವರ: ಖದೀಮರು 12 ಲಾಕೆಟ್‌ಗಳನ್ನು ದೋಚಿದ್ದಾರೆ. ಅದರ ತೂಕ 84.580 ಗ್ರಾಂ. ಅಂತೆಯೇ 8 ಬ್ರಾಸ್ಲೆಟ್(36ಗ್ರಾಂ), 84 ಬಳೆಗಳು(1.310 ಗ್ರಾಂ), 150 ನೆಕ್ಲೆಸ್‌ಗಳು(4,348ಗ್ರಾಂ), 65 ಚೈನ್‌ಗಳು (1207ಗ್ರಾಂ.), 12 ಕಾಲುಚೈನ್‌ಗಳು(66ಗ್ರಾಂ.), 70 ಉಂಗುರಗಳು (241 ಗ್ರಾಂ.), 19 ಕರಿಮಣಿಸರ (574 ಗ್ರಾಂ.), 17 ಕಿವಿಯ ಡ್ರಾಪ್ಸ್ (148ಗ್ರಾಂ.), 13 ಡೈಮಂಡ್ ರಿಂಗ್‌ಗಳು( 16 ಗ್ರಾಂ.) ಆಗಿವೆ. ಒಟ್ಟು 450 ಚಿನ್ನಾಭರಣಗಳನ್ನು ದುಷ್ಕರ್ಮಿಗಳು ದೋಚಿದ್ದು, ಒಟ್ಟು ತೂಕ 8 ಕೆಜಿ 34ಗ್ರಾಂ. ಆಗಿದ್ದು, ಅಂದಾಜು 10 ಕೋಟಿ ರೂ.ಗಳ ಮೌಲ್ಯವನ್ನು ಹೊಂದಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಪಾರ್ಟ್‌ನರ್‌ಶಿಪ್ ಮಾಲೀಕತ್ವ:
ಕೇರಳ ರಾಜ್ಯದ ವೈನಾಡಿನ ಪಿ.ಎ.ಜಂಷೀದ್ ಮತ್ತು ದೂರು ನೀಡಿರುವ ಕನ್ನೂರಿನ ಸಿನುದ್ದೀನ್ ಇವರಿಬ್ಬರೂ ಈ ಚಿನ್ನಾಭರಣ ಅಂಗಡಿಯ ಜಂಟಿ ಪಾಲುದಾರರಾಗಿದ್ದಾರೆ. ಹುಣಸೂರಿನ ಈ ಶೋರೂಂನ್ನು ಅಸ್ಕರ್ ಅಲಿ ಎನ್ನುವವರು ವ್ಯವಸ್ಥಾಪಕರಾಗಿ ನೋಡಿಕೊಳ್ಳುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಸಿನೀಮೀಯ ರೀತಿಯಲ್ಲಿ ದರೋಡೆ: ರೋಡೆ ನಡೆದ ದಿನ ಸಿನುದ್ದೀನ್ ಕನ್ನೂರಿನಲ್ಲಿದ್ದ ವೇಳೆ ವೇಳೆ 2.15ರ ಸಮಯದಲ್ಲಿ ಪಾರ್ಟ್‌ನರ್ ಜಂಷೀದ್ ಫೋನ್ ಮಾಡಿ ಹುಣಸೂರು ಶೋರೂಂನಲ್ಲಿ ದರೋಡೆ ಆಗಿದೆ ಎಂದು ತಿಳಿಸಿದಾಗ ಕೂಡಲೇ ಅಲ್ಲಿಂದ ಹೊರಟು ಸಂಜೆ 7.30ಕ್ಕೆ ಹುಣಸೂರು ತಲುಪಿದ್ದಾರೆ. ಮ್ಯಾನೇಜರ್ ಅಸ್ಕರ್ ಅವರನ್ನು ವಿಚಾರಿಸಿದಾಗ ಘಟನೆಯನ್ನು ವಿವರಿಸಿದ್ಧಾನೆ.
ಆಸ್ಕರ್ ಮಧ್ಯಾಹ್ನ 2 ಗಂಟೆ 6 ನಿಮಿಷಕ್ಕೆ ಊಟಕ್ಕಾಗಿ ಮಳಿಗೆಯಿಂದ ರೂಮಿಗೆ ತೆರಳಿದ್ದಾಗ ಮಾಲೀಕರಾದ ಜಂಷೀದ್ ಫೋನ್ ಮಾಡಿ ಮಳಿಗೆಯಲ್ಲಿ ದರೋಡೆ ನಡೆಯುತ್ತಿರುವ ಹಾಗಿದೆ ಎಂದು ತಿಳಿಸಿದಾಗ, ಕೂಡಲೇ ಶೋ ರೂಂನ ಮುಖ್ಯದ್ವಾರಕ್ಕೆ ಬಂದಾಗ ಒಳಗೆ ಐವರು ದುಷ್ಕರ್ಮಿಗಳು ಚಿನ್ನಾಭರಣಗಳನ್ನು ದೋಚುತ್ತಿದ್ದುದು ಕಂಡುಬಂತು. ಅವರಲ್ಲಿ ಕೆಲವರು ಮಾಸ್ಕ್, ಮತ್ತೆ ಕೆಲವರು ಹೆಲ್ಮೆಟ್ ಮತ್ತು ಟೋಪಿ ಹಾಕಿಕೊಂಡಿದ್ದರು. ದರೋಡೆಕೋರರ ಪೈಕಿ ಇಬ್ಬರು ಗನ್ ಹಿಡಿದು ಸಿಬ್ವಂದಿಯನ್ನು ಅಲುಗಾಡದಂತೆ ನಿಲ್ಲಲು ಬೆದರಿಸುತ್ತಿದ್ದರು. ಮಿಕ್ಕವರು ಬ್ಯಾಗಿನಲ್ಲಿ ಚಿನ್ನಾಭರಣಗಳನ್ನು ತುಂಬಿಕೊಳ್ಳುತ್ತಿದ್ದರು. ಆಗ ಆಸ್ಕರ್ ಮುಂಬಾಗಿಲನ್ನು ತೆರೆಯಲಾಗದಂತೆ ಗಟ್ಟಿಯಾಗಿ ಹಿಡಿದ ವೇಳೆ ಗನ್ ಹಿಡಿದವರು ನೇರವಾಗಿ ಮುಂಬಾಗಿಲ ಬಳಿಗೆ ಬಂದು ಬಾಗಿಲನ್ನು ಬಲವಾಗಿ ಎಳೆದು ಗನ್ ತೋರಿಸಿ ಹೆದರಿಸಿದರು. ಕೂಡಲೇ ಆಸ್ಕರ್ ರೂಮಿನತ್ತ ಓಡಿದ್ದಾರೆ. ಅಷ್ಟೊತ್ತಿಗಾಗಲೇ ದರೋಡೆಕೋರರು ಬ್ಯಾಗಿನಲ್ಲಿ ಚಿನ್ನಾಭರಣಗಳನ್ನು ತುಂಬಿಸಿಕೊಂಡು ಹೊರನಡೆದರು. ಸಿಬ್ಬಂದಿ ಕೂಗಿಕೊಂಡಾಗ ಅವರೆಡೆ ಗನ್ ತೋರಿಸಿ ಗುಂಡು ಹಾರಿಸಿ ಬೆದರಿಸಿದರು. ಆಸ್ಕರ್ ಮತ್ತವರ ಸಿಬ್ಬಂದಿ ಅವರನ್ನು ಕಾರಿನಲ್ಲಿ ಹಿಂಬಾಲಿಸಿದರೂ ಪ್ರಯೋಜನವಾಗಿಲಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net