ಹಿರಿಯ ಭಾಷಾ ವಿಜ್ಞಾನಿ ಪ್ರೊ. ಕೆ.ವಿ.ನಾರಾಯಣ್ ಇನ್ನಿಲ್ಲ

ಬೆಂಗಳೂರಿನ ಯಲಹಂಕದಲ್ಲಿ ನಿಧನ
ಪ್ರೊ. ಕೆ.ವಿ.ನಾರಾಯಣ್
ಪ್ರೊ. ಕೆ.ವಿ.ನಾರಾಯಣ್
Published on: 

ಪಿರಿಯಾಪಟ್ಟಣ: ಕನ್ನಡದ ಹಿರಿಯ ಭಾಷಾವಿಜ್ಞಾನಿ ಹಾಗೂ ಪ್ರಖ್ಯಾತ ಸಾಹಿತ್ಯ ವಿಮರ್ಶಕ ಪ್ರೊ. ಕೆ.ವಿ.ನಾರಾಯಣ್ ಬೆಂಗಳೂರಿನ ಯಲಹಂಕದಲ್ಲಿ ಶುಕ್ರವಾರ ಹೃದಯಾಘಾತದಿಂದ ನಿಧನರಾದರು.

ಮೂಲತಃ ತಾಲೂಕಿನ ಕಂಪಲಾಪುರ ಗ್ರಾಮದ ವೀರಣ್ಣ ಅವರ ಸುಪುತ್ರರಾದ ಕೆ.ವಿ.ನಾರಾಯಣ್ ಹಂಪಿ ಕನ್ನಡ ವಿವಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿ ಕನ್ನಡದ ಅಸ್ಮಿತೆಯನ್ನು ಶ್ರೀಮಂತಗೊಳಿಸಿದ ಮಹನೀಯರಾಗಿದ್ದು ಕನ್ನಡ ಭಾಷೆಗೆ ಅಪಾರ ಕೊಡುಗೆ ನೀಡಿದ್ದರು. ಪ್ರಸ್ತುತ ಬೆಂಗಳೂರಿನ ಯಲಹಂಕದಲ್ಲಿರುವ ಪುತ್ರನ ಮನೆಯಲ್ಲಿ ನೆಲೆಸಿದ್ದರು.

ನಾರಾಯಣ್ ಅವರ ಪತ್ನಿ ಶ್ರೀಮತಿ ಅವರು ಹೆಸರಾಂತ ಸ್ತ್ರೀವಾದಿ ಚಿಂತಕಿ ಮತ್ತು ಲೇಖಕಿಯಾಗಿದ್ದಾರೆ. ಒಬ್ಬ ಪುತ್ರಿ ವಿದೇಶದಲ್ಲಿ ನೆಲೆಸಿದ್ದಾರೆ.

ತಾಲೂಕಿನ ಕಂಪಲಾಪುರದ ಹೆಮ್ಮೆಯ ಪುತ್ರರಾಗಿದ್ದ ಇವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಾಲೂಕಿನ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ದೇಹದಾನ: ಕೆ.ವಿ.ನಾರಯಣ್ ಅವರ ಮೃತದೇಹವನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಅವರ ಇಚ್ಛೆಯಂತೆ ಕುಟುಂಬದವರು ದೇಹದಾನ ಮಾಡಿದರು. ಇದಕ್ಕೂ ಮೊದಲು ಆಸ್ಪತ್ರೆ ಮುಂಭಾಗ ಸಕಲ ಸರ್ಕಾರಿ ಗೌರವಗಳೊಂದಿಗೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು.