

ಮೈಸೂರು: ಪಾಗಲ್ ಪ್ರೇಮಿಯೊಬ್ಬ ಮನೆಯ ಮುಂದೆ ನಿಂತಿದ್ದ ಯುವತಿಗೆ ಚಾಕು ಇರಿದು ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಮೈಸೂರಿನ ಕೆ.ಆರ್. ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿ ಭಾನುವಾರ ನಡೆದಿದೆ.
ಅಶ್ವಿನಿ (19) ಚಾಕು ಇರಿತಕ್ಕೆ ಒಳಗಾದ ಯುವತಿ. ಯುವಕ ಗಗನ್ ಅಲಿಯಾಸ್ ಕೆಂಚನಿಂದ ಕೃತ್ಯ ನಡೆದಿದೆ. ಚಾಕು ಇರಿತಕ್ಕೆ ಒಳಗಾದ ಯುವತಿ ಅಶ್ವಿನಿಯನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ಒಪ್ಪದಿದ್ದಕ್ಕೆ ಕೃತ್ಯ
ಐದು ವರ್ಷದಿಂದ ಅಶ್ವಿನಿಯನ್ನು ಗಗನ್ ಪ್ರೀತಿಸುತ್ತಿದ್ದನಂತೆ. 18 ವರ್ಷ ಆದ ಬಳಿಕ ಮದುವೆ ಪ್ರಸ್ತಾಪಕ್ಕೆ ಕಾಯುತ್ತಿದ್ದ ಎನ್ನಲಾಗಿದೆ. ಆದರೆ, 18 ವರ್ಷವಾದ ನಂತರವೂ ಅಶ್ವಿನಿ ಮದುವೆಗೆ ಒಪ್ಪಿರಲಿಲ್ಲ. ಅಲ್ಲದೆ, ಯುವತಿ ಮನೆಯವರು ಸಹ ಗಗನ್ಗೆ ಎಚ್ಚರಿಕೆ ನೀಡಿದ್ದರು.
ನೀನೊರ್ವ ಡ್ರೈವರ್, ಮದುವೆ ಆಗಲ್ಲ ಎಂದು ಅಶ್ವಿನಿ ನಿರಾಕರಿಸಿದ್ದರಿಂದ ಬೇಸರಗೊಂಡು ಗಗನ್ ಚಾಕು ಇರಿದಿದ್ದಾನೆ. ಇದಾದ ಬಳಿಕ ತಾನೇ ಠಾಣೆಗೆ ತೆರಳಿ ಶರಣಾಗಿದ್ದಾನೆ. (ದಿಗ್ವಿಜಯ ನ್ಯೂಸ್)