ಯುವತಿಯ ಆತ್ಮಹತ್ಯೆ ಸುದ್ದಿಗೆ ಟ್ವಿಸ್ಟ್​ ಕೊಟ್ಟ ವ್ಯಾಟ್ಸ್​ಆ್ಯಪ್​ ಚಾಟ್​: ನಡೆಯಿತಾ ಮರ್ಯಾದೆ ಹತ್ಯೆ?​

Murder
Published on

ಮೈಸೂರು: ಮೈಸೂರು ತಾಲೂಕಿನ ದೊಡ್ಡ ಕಾನ್ಯ ಗ್ರಾಮದಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಅನ್ಯ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಹೆತ್ತವರೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮೀನಾಕ್ಷಿ (22) ಮೃತ ಯುವತಿ. ಪ್ರೀತಿ ವಿಚಾರ ತಿಳಿಸಿದ ನಂತರ ಮನೆಯವರು ಯುವತಿಗೆ ಮಾನಸಿಕ ಹಿಂಸೆ ನೀಡಿದ್ದಾರೆನ್ನಲಾಗಿದೆ. ಯುವತಿ ಬದುಕಿದ್ದಾಗ ಹಿಂಸೆಯ ಬಗ್ಗೆ ಮೈಸೂರು ಎಸ್ಪಿ ಹಾಗೂ ಒಡನಾಡಿ ಸಂಸ್ಥೆಗೆ ಇ-ಮೇಲ್ ಮೂಲಕ ದೂರು ನೀಡಿದ್ದಳು. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.

ಕಳೆದ ಬುಧವಾರ ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಮನೆಯಲ್ಲೇ ಪತ್ತೆಯಾಗಿದೆ. ಇದಕ್ಕೂ ಮುನ್ನ ನನ್ನ ಅಣ್ಣ ತೀವ್ರ ಹಲ್ಲೆ ಮಾಡಿ ಕತ್ತು ಹಿಸುಕಿ ಸಾಯಿಸಲು ಯತ್ನಿಸಿದ. ಇದನ್ನು ನಮ್ಮ ಮನೆಯವರು ತಡೆಯಲಿಲ್ಲ ಎಂದು ದೂರಿನಲ್ಲಿ ಯುವತಿ ಅಳಲು ತೋಡಿಕೊಂಡಿದ್ದಳು.

ನಾನು ಗೃಹ ಬಂಧನಲ್ಲಿರುವೆ. ನನಗೆ ಜೀವ ಭಯವಿದೆ. ನನ್ನನ್ನು ಕಾಪಾಡಿ ಎಂದು ಮನವಿ ಮಾಡಿದ್ದಳು. ಜೂನ್ 16 ಹಾಗೂ ಆಗಸ್ಟ್ 6ರಂದು ಎರಡು ಬಾರಿ ಎಸ್ಪಿಗೆ ಯುವತಿ ದೂರು ನೀಡಿದ್ದಾಳೆ. ಅನ್ಯ ಜಾತಿ ಯುವಕನನ್ನು ಮದುವೆ ಆಗುತ್ತೇನೆಂದು ಪಟ್ಟು ಹಿಡಿದ್ದಿದ್ದ ಮೀನಾಕ್ಷಿಯನ್ನು ಹೆತ್ತವರೇ ಹತ್ಯೆ ಮಾಡಿರುವ ಶಂಕೆ ಇದೀಗ ವ್ಯಕ್ತವಾಗಿದೆ.

ಸದ್ಯ ಮೈಸೂರು ದಕ್ಷಿಣ ಗ್ರಾಮಾಂತರ ಠಾಣಾ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net