ವಿಶ್ವವಿಖ್ಯಾತ ಜಂಬೂಸವಾರಿಗೆ ಸಾಂಸ್ಕೃತಿಕ ನಗರಿ ಸಜ್ಜು

Mys
Published on

| ಸದೇಶ್ ಕಾರ್ವಡ್ ಮೈಸೂರು

ದುಷ್ಟಶಕ್ತಿ ಮೇಲೆ ಶಿಷ್ಟಶಕ್ತಿಯ ವಿಜಯದ ಸಂಕೇತವಾಗಿ ಆಚರಿಸುವ ನಾಡಹಬ್ಬ ದಸರಾ ಉತ್ಸವಕ್ಕೆ ಅ.15ರಂದು ಅರಮನೆ ಆವರಣದಲ್ಲಿ ನಡೆಯುವ ಜಂಬೂಸವಾರಿ ಮೆರವಣಿಗೆಯ ಮೂಲಕ ಸಂಭ್ರಮದ ತೆರೆ ಬೀಳಲಿದೆ. ಸಹಸ್ರಾರು ಜನರ ಹಷೋದ್ಘಾರದ ನಡುವೆ ಸಂಭ್ರಮದಿಂದ ನಡೆಯುತ್ತಿದ್ದ ಜಂಬೂಸವಾರಿ ಮೆರವಣಿಗೆ ಸತತ ಎರಡನೇ ವರ್ಷವೂ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಪಸ್ಥಿತಿಯಲ್ಲಿ ಅರಮನೆ ಆವರಣಕ್ಕೆ ಸೀಮಿತವಾಗಿ ಜರುಗಲಿದೆ. ಅದಕ್ಕಾಗಿ ದಸರಾ ಮಹೋತ್ಸವ ಆಚರಣಾ ಸಮಿತಿ ಸಕಲ ಸಿದ್ಧತೆ ಪೂರ್ಣಗೊಳಿಸಿದೆ.

ಈ ಸಂಭ್ರಮದ ಕ್ಷಣವನ್ನು ಕಣ್ತುಂಬಿಕೊಳ್ಳಲು 500 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆ 500 ಜನರು ಯಾರು ಎಂಬುದನ್ನು ಸರ್ಕಾರ ಇದುವರೆಗೆ ಸ್ಪಷ್ಟಪಡಿಸಿಲ್ಲ. 500 ಜನರು ಮಾತ್ರವಲ್ಲದೆ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿ 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಜಂಬೂಸವಾರಿ ಮೆರವಣಿಗೆಯನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗದೆ ಇರುವವರು ಆನ್​ಲೈನ್ ಮೂಲಕ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.

ಚಾಮುಂಡಿಬೆಟ್ಟದಲ್ಲಿ ಅ.7ರಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಂದ 411ನೇ ದಸರಾ ಉತ್ಸವಕ್ಕೆ ಚಾಲನೆ ದೊರೆಯಿತು. ಅ.15ರಂದು ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದ್ದು, ಅಂದು ಸಂಜೆ 4.36ರಿಂದ 4.46ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಲಿದೆ. ನಂತರ ಸಂಜೆ 5 ರಿಂದ 5.30ಕ್ಕೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅಂಬಾರಿ ಮೇಲೆ ವಿರಾಜಮಾನಳಾಗುವ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ನೆರವೇರಿಸಿದ ನಂತರ ವಿಜಯದಶಮಿ ಮೆರವಣಿಗೆಗೆ ಚಾಲನೆ ದೊರೆಯಲಿದೆ.

ಸಾಮಾನ್ಯವಾಗಿ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ (5 ಕಿ.ಮೀ.) ಜಂಬೂಸವಾರಿ ಮೆರವಣಿಗೆ ನಡೆಯುತ್ತದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ವರ್ಷವೂ ಜಂಬೂಸವಾರಿ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿದೆ. ನಂದಿಧ್ವಜಕ್ಕೆ ಪೂಜೆ ನೆರವೇರಿದ ಬಳಿಕ ಮೆರವಣಿಗೆ ಪ್ರಾರಂಭಗೊಳ್ಳಲಿದ್ದು, ನಿಶಾನೆ ಮತ್ತು ನೌಫತ್ ಆನೆಗಳು ಮೆರವಣಿಗೆಯನ್ನು ಮುನ್ನಡೆಸಲಿವೆ. ಈ ಆನೆಗಳ ಹಿಂದೆ ನಾದಸ್ವರ, ವೀರಗಾಸೆ, ಸ್ತಬ್ಧಚಿತ್ರಗಳು, ಸಂಗೀತ ಗಾಡಿ, ಅಶ್ವಾರೋಹಿದಳ ಸಾಗಲಿವೆ. ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯ ನಂತರ 750 ಕೆ.ಜಿ. ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಸಾಗಲಿದ್ದಾನೆ.

ಮೆರವಣಿಗೆ ಸಾಗುವ ದಾರಿ 500 ಮೀಟರ್ ಕೂಡ ದಾಟುವುದಿಲ್ಲ. ಅರಮನೆ ಆವರಣದ ವರಹಸ್ವಾಮಿ ದೇವಾಲಯ ಸಮೀಪದಿಂದ ಆರಂಭವಾಗುವ ಮೆರವಣಿಗೆ ಭುವನೇಶ್ವರಿ ದೇವಾಲಯದವರೆಗೂ ಸಾಗಲಿದೆ. ಅಲ್ಲಿಂದ ಬಲರಾಮ ದ್ವಾರದ ಬಳಿ ಬಲಕ್ಕೆ ತಿರುಗಿ ಕೋಡಿ ಸೋಮೇಶ್ವರ ದೇವಾಲಯದ ರಸ್ತೆಗೆ ಮುಖ ಮಾಡಿ ಸಾಗಿದ ನಂತರ ಮೆರವಣಿಗೆ ಸಮಾಪ್ತಿಗೊಳ್ಳಲಿದೆ. ಒಟ್ಟಾರೆ 30ರಿಂದ 45 ನಿಮಿಷಗಳಲ್ಲಿ ಜಂಬೂಸವಾರಿ ಸಂಪನ್ನಗೊಳ್ಳಲಿದೆ.

ಸಂಭ್ರಮಕ್ಕಿಲ್ಲ ಕೊರತೆ

ಕಳೆದ ಬಾರಿ ಕೇವಲ 60 ಕಿ.ಮೀ.ಗೆ ಸೀಮಿತವಾಗಿದ್ದ ದೀಪಾಲಂಕಾರವನ್ನು ಈ ಬಾರಿ 106 ಕಿ.ಮೀ.ವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಜಂಬೂಸವಾರಿ ಮೆರವಣಿಗೆಯನ್ನು ವೀಕ್ಷಿಸಲು ಸಾಧ್ಯವಾಗದೆ ಇದ್ದರೂ ದಸರಾ ದೀಪಾಲಂಕಾರ ನೋಡುವ ಮೂಲಕ ಜನರು ಸಂಭ್ರಮಿಸುತ್ತಿದ್ದಾರೆ.

2ನೇ ಬಾರಿ ಅಂಬಾರಿ ಹೊರಲಿದ್ದಾನೆ ‘ಅಭಿಮನ್ಯು’

ಆನೆ, ಹುಲಿ ಸೆರೆ ಕಾರ್ಯಾಚರಣೆ ಮೂಲಕ ದೇಶದ ಗಮನ ಸೆಳೆದಿರುವ ಧೈರ್ಯವಂತ 56 ವರ್ಷದ ‘ಅಭಿಮನ್ಯು’ ಆನೆ ಸತತ 2ನೇ ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊರಲಿದ್ದು, ಮಾವುತ ವಸಂತ ಅಂಬಾರಿ ಆನೆಯನ್ನು ಮುನ್ನಡೆಸಲಿದ್ದಾರೆ. ಅಭಿಮನ್ಯುವಿನ ಅಕ್ಕಪಕ್ಕದಲ್ಲಿ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ಚೈತ್ರಾ ಜವಾಬ್ದಾರಿ ನಿರ್ವಹಿಸಲಿವೆ. ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಾಲಸ್ವಾಮಿ ಭಾಗವಹಿಸಲಿದೆ.

ಆನೆಗಳ ಆತಂಕ ಬೇಡ

ಶ್ರೀರಂಗಪಟ್ಟಣ ದಸರಾ ಸಂದರ್ಭ ಪಟಾಕಿಗಳನ್ನು ಆನೆಯ ಬಳಿ ಸಿಡಿಸಿದ ಕಾರಣ ಗೋಪಾಲಸ್ವಾಮಿ ಆನೆ ಆತಂಕಗೊಂಡಿತ್ತು. ಆದರೆ, ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಧನಂಜಯ ನಿಶಾನೆ ಆನೆ, ಗೋಪಾಲಸ್ವಾಮಿ ನೌಫತ್ ಆನೆಯ ಜವಾಬ್ದಾರಿ ನಿರ್ವಹಿಸಲಿವೆ. ಈ ಎರಡು ಆನೆಗಳು ಜಂಬೂಸವಾರಿ ಮೆರವಣಿಗೆ ಪ್ರಾರಂಭಗೊಳ್ಳುವ ಮುನ್ನವೇ ಸ್ತಬ್ಧಚಿತ್ರದ ಮೆರವಣಿಗೆಯೊಂದಿಗೆ ಸಾಗುತ್ತವೆ. ಹೀಗಾಗಿ, ಈ ಆನೆಗಳಿಗೆ ಕುಶಾಲತೋಪು ಸಿಡಿಸುವ ಶಬ್ದ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಅಲ್ಲದೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಡಿಸಿಎಫ್ ಕರಿಕಾಳನ್ ‘ವಿಜಯವಾಣಿ’ಗೆ ತಿಳಿಸಿದರು.

ಸಂಭ್ರಮದ ದಸರಾ

ಮೈಸೂರು ರಾಜಮನೆತನದವರು ಅಂಬಾವಿಲಾಸ ಅರಮನೆಯಲ್ಲಿ ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನ, ಖಾಸಗಿ ದರ್ಬಾರ್ ನಡೆಯುತ್ತಿದೆ. ಅ.15ರಂದು ಅರಮನೆ ಆವರಣದಲ್ಲಿ ವಿಜಯದಶಮಿ ಯಾತ್ರೆ ನಡೆಯಲಿದೆ. ಅಂದು ಬೆಳಗ್ಗೆ 5.45ಕ್ಕೆ ಅರಮನೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳು ಆಗಮಿಸಲಿವೆ. ಬೆಳಗ್ಗೆ 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ ನೆರವೇರಲಿದೆ. 7.20ರಿಂದ 7.40ರವರೆಗೆ ವಿಜಯದಶಮಿ ಮೆರವಣಿಗೆ ಜರುಗಲಿದ್ದು, ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣದ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ಸಾಗಲಿದೆ. ಬಳಿಕ ದೇಗುಲದಲ್ಲಿ ಬನ್ನಿ ಮರಕ್ಕೆ ಯದುವೀರ ಪೂಜೆ ಸಲ್ಲಿಸಲಿದ್ದಾರೆ.

ಇಂದು ಆಯುಧಪೂಜೆ

ಅರಮನೆಯಲ್ಲಿ ಅ.14 ರಂದು ಆಯುಧಪೂಜೆ ನಡೆಯಲಿದ್ದು, ಬೆಳಗ್ಗೆ 5.30 ರಿಂದ ಪೂಜಾ ವಿಧಿವಿಧಾನ ಪ್ರಾರಂಭಗೊಳ್ಳಲಿದೆ. ಬೆಳಗ್ಗೆ 7.45ಕ್ಕೆ ಅರಮನೆಯಂದ ಆಯುಧಗಳನ್ನು ಅರಮನೆ ಆವರಣದ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಮಾಡಿ, ನಂತರ ಪೂಜೆ ಸಲ್ಲಿಸಿ ಅರಮನೆ ಕಲ್ಯಾಣಮಂಟಪಕ್ಕೆ ತರಲಾಗುವುದು. ಬೆಳಗ್ಗೆ 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net