

ಮೈಸೂರು: ಸಂಚಾರಿ ಪೊಲೀಸರ ದಂಡ ವಸೂಲಿ ಸಮಯದಲ್ಲಿ ರಿಂಗ್ ರಸ್ತೆಯಲ್ಲಿ ಬೈಕ್ ಸವಾರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಮೈಸೂರು ನಗರ ಪೊಲೀಸ್ ಆಯುಕ್ತರು ಮಹತ್ವದ ಬದಲಾವಣೆ ಮಾಡಿದ್ದಾರೆ.
ವಾಹನ ತಪಾಸಣೆ ಮತ್ತು ದಂಡ ವಸೂಲಿಗೆ ಸಮಯ ನಿಗದಿ ಮಾಡಿರುವ ಬಗ್ಗೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಇಂದು ಮಾಹಿತಿ ನೀಡಿದರು. ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ಮತ್ತು ಮಧ್ಯಾಹ್ನ 3 ರಿಂದ ಸಂಜೆ 5ರವರೆಗೆ ಮಾತ್ರ ಫೈನ್ ಹಾಕುತ್ತೇವೆ ಎಂದು ತಿಳಿಸಿದರು.
ಕಚೇರಿ ಕೆಲಸಗಳಿಗೆ ಹೋಗಿ ಬರುವವರಿಗೆ ತೊಂದರೆ ತಪ್ಪಿಸಲು ಈ ಸಮಯ ಜಾರಿ ಮಾಡಲಾಗಿದೆ. ದಿನಪೂರ್ತಿ ಫೈನ್ ಹಾಕೋದಕ್ಕೆ ಅವಕಾಶ ಇಲ್ಲ. ಶನಿವಾರ ಮತ್ತು ಭಾನುವಾರ ಹಳೆಯ ಕೇಸ್‌ಗಳನ್ನು ಠಾಣೆಗೆ ಬಂದು ಕಟ್ಟಲು ಅವಕಾಶ ನೀಡುತ್ತೇವೆ ಎಂದರು.
ಡ್ರಂಕ್ ಆ್ಯಂಡ್ ಡ್ರೈವ್ ಕೇಸ್ ಮಾತ್ರ ಹಾಕುತ್ತೇವೆ. ಗ್ರಾಮೀಣ ಭಾಗದಿಂದ ಸಿಟಿಗೆ ಜಾಯಿನ್ ಆಗುವ ಜಾಗದಲ್ಲಿ ದಂಡ ಹಾಕುತ್ತೇವೆ. ರಿಂಗ್ ರಸ್ತೆಯಲ್ಲಿ ಅಪಘಾತ ತಡೆಯುವ ಸಲುವಾಗಿ ಜಂಕ್ಷನ್‌ನಲ್ಲಿ ತಪಾಸಣೆ ಮಾಡುತ್ತೇವೆ. ಆಕ್ಸಿಡೆಂಟ್ ಝೋನ್‌ನಲ್ಲಿ ಎಲ್ಲ ರೀತಿಯ ನಿಮಯ ಉಲ್ಲಂಘನೆಯನ್ನೂ ಚೆಕ್ ಮಾಡುತ್ತೇವೆ. ಈ ಎಲ್ಲ ಅಂಶಗಳನ್ನೂ ಒಳಗೊಂಡ ಆದೇಶವನ್ನು ಶೀರ್ಘದಲ್ಲೇ ಹೊರಡಿಸುತ್ತೇನೆಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದರು. (ದಿಗ್ವಿಜಯ ನ್ಯೂಸ್)