ಪರಸ್ಪರ ಅಂತರದ ಜತೆಗೆ ಸ್ವಚ್ಛತೆಗೆ ಆದ್ಯತೆ ಸಿಗಲಿ

2
Published on

ಮೈಸೂರು: ಬೋಗಾದಿಯಲ್ಲಿರುವ ಆದಿಚುಂಚನಗಿರಿ ಶಾಖಾಮಠಕ್ಕೆ ಭಾನುವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದರು.

ಮೈಸೂರು ಕರೊನಾ ಮುಕ್ತವಾಗಲು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾಡಾಳಿತ ಮತ್ತು ಜನಪ್ರತಿನಿಧಿಗಳ ಶ್ರಮ ಅಧಿಕವಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು, ದೈಹಿಕ ಅಂತರವನ್ನು ಕಾಯ್ದುಕೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಜನರಿಗೆ ಈ ಕುರಿತು ಜಾಗೃತಿ ಉಂಟುಮಾಡಬೇಕು ಎಂದರು.

ಹೊರ ರಾಜ್ಯಗಳು, ವಿದೇಶದಿಂದ ಬಂದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಇದು ಉತ್ತಮ ಕ್ರಮ. ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗಬೇಕು. ಇನ್ಮುಂದೆಯೂ ಕರೊನಾ ಹೀಗೆ ಇರುವುದರಿಂದ ಸುರಕ್ಷತಾ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ. ಮತ್ತೊಮ್ಮೆ ಮೈಸೂರು ಹಸಿರಲಾಗಲಿ, ಸಾಂಸ್ಕೃತಿಕ ಜಿಲ್ಲೆಯತನವನ್ನು ಮತ್ತೆ ಗಳಿಸಿಕೊಳ್ಳಲಿ ಎಂದು ಸ್ವಾಮೀಜಿ ಆಶಿಸಿದರು.

ಪ್ರಾಯೋಗಿಕ ತರಗತಿ ಕಷ್ಟ: ಶಾಲೆಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಹಲವು ಕಡೆ ಆನ್‌ಲೈನ್ ತರಗತಿಗಳು ಆರಂಭವಾಗಿವೆ. ಆದರೆ, ಪ್ರಾಯೋಗಿಕ ತರಗತಿಗಳು ಸದ್ಯಕ್ಕೆ ಕಷ್ಟ. ದೈಹಿಕ ಅಂತರವನ್ನು ಕಾಪಾಡಿಕೊಂಡು ತರಗತಿ ನಡೆಸಬಹುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸಹಕಾರ ಸಂಘಗಳಲ್ಲಿ ಅಕ್ರಮ ಸಹಿಸಲ್ಲ: ಸಚಿವ ಸೋಮಶೇಖರ್ ಮಾತನಾಡಿ, ಸಹಕಾರ ಸಂಘಗಳಲ್ಲಿ ಅಕ್ರಮ ಇದ್ದರೆ ಸಹಿಸುವುದಿಲ್ಲ. ಯಾವುದಾದರೂ ಸಂಘ ಸಂಸ್ಥೆಗಳಲ್ಲಿ ದುಡ್ಡು ಕಟ್ಟಿಸಿಕೊಂಡು ಮೋಸ ಮಾಡಿದ್ದರೆ ಕ್ರಮ ಅನಿವಾರ್ಯ ಎಂದು ತಿಳಿಸಿದರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯಿಂದ ಎಪಿಎಂಸಿ ವ್ಯವಸ್ಥೆಗೆ ಯಾವುದೇ ತೊಂದರೆಯಾಗದು. ಉದಾಹರಣೆಗೆ ಗುಂಡ್ಲುಪೇಟೆಯಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ರೈತ ರಾಜ್ಯದ ಯಾವ ಎಪಿಎಂಸಿ ಇಲ್ಲವೇ ಯಾವುದೇ ಭಾಗದಲ್ಲಿ ಮಾರಾಟ ಮಾಡಬಹುದು. ಎಪಿಎಂಸಿಗೆ ಇರುವ ಅಧಿಕಾರ ತುಸು ತಗ್ಗಲಿದೆ ಅಷ್ಟೇ. ಶೇಕಡಾ ಒಂದೂವರೆಯಷ್ಟು ಬರುತ್ತಿದ್ದ ಸೆಸ್ ಇನ್ಮುಂದೆ ಒಂದು ಕಾಲು ಪರ್ಸೆಂಟ್ ಸಿಗಬಹುದಷ್ಟೆ ಎಂದು ಸಚಿವರು ತಿಳಿಸಿದರು.

ಸಹಕಾರ ಬ್ಯಾಂಕ್‌ಗಳಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರಿಗೆ ಕೃಷಿ ಸಾಲ ಸರಿಯಾದ ಪ್ರಮಾಣದಲ್ಲಿ ಲಭಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ಸಾಲ ವಿತರಣೆಯಾಗುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಇನ್ನಿತರರಿದ್ದರು.

ಡಿಸಿಯನ್ನು ಹೊಗಳಿದ ಶ್ರೀಗಳು : ‘ಯು ಆರ್ ದಿ ಬೆಸ್ಟ್ ಡಿಸಿ’ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಆದಿಚುಂಚನಗಿರಿ ಶ್ರೀ ಹೇಳಿದರು. ಕರೊನಾ ವಿಚಾರದಲ್ಲಿ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮ ಪರಿಶ್ರಮದಿಂದ ಬಹುಬೇಗ ಕೋವಿಡ್-19 ರೋಗ ನಿಯಂತ್ರಣಕ್ಕೆ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀಗಳ ಮಾತಿಗೆ ಧ್ವನಿಗೂಡಿಸಿದ ಸಚಿವ ಸೋಮಶೇಖರ್, ಡಿಸಿ ಲೀಡರ್‌ಶಿಪ್‌ನಲ್ಲಿ ಒಳ್ಳೆ ಟೀಮ್ ವರ್ಕ್ ಆಗಿದೆ. ಹೀಗಾಗಿ ಮೈಸೂರು ಕರೊನಾ ಮುಕ್ತವಾಗಿದೆ ಎಂದು ಶ್ಲಾಘಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net