

ಮೈಸೂರು: ಮೈಸೂರು-ಮಂಗಳೂರು ನಡುವೆ ವಿಮಾನಯಾನ ಸೇವೆ ಪ್ರಾರಂಭಕ್ಕೆ ಕೊನೆಗೂ ಕಾಲ ಕೂಡಿ ಬಂದಿದ್ದು, ಡಿ.10ರಿಂದ ಈ ಮಾರ್ಗದಲ್ಲಿ ವಿಮಾನ ಸಂಚಾರ ಶುರುವಾಗಲಿದೆ. ಉಡಾನ್ ಯೋಜನೆಯಡಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಅಂಗ ಸಂಸ್ಥೆಯಾದ ಅಲಯನ್ಸ್ ಏರ್ ವಿಮಾನ ವಾರದಲ್ಲಿ ನಾಲ್ಕು ದಿನ ಸಂಚರಿಸಲಿದೆ.
ಬುಧವಾರ, ಶುಕ್ರವಾರ, ಶನಿವಾರ, ಭಾನುವಾರ ಈ ಸೇವೆ ಇರಲಿದ್ದು, ಮೈಸೂರಿನಿಂದ ಬೆಳಗ್ಗೆ 11.15ಕ್ಕೆ ಹೊರಡುವ ವಿಮಾನವು ಮಂಗಳೂರಿಗೆ ಮಧ್ಯಾಹ್ನ 12.15ಕ್ಕೆ ತಲುಪಲಿದೆ. ಅಲ್ಲಿಂದ ಮರಳಿ ಮಧ್ಯಾಹ್ನ 12.40ಕ್ಕೆ ಹೊರಡುವ ವಿಮಾನವು 1.40 ಗಂಟೆಗೆ ಮೈಸೂರಿಗೆ ಬರಲಿದೆ.ಮಂಗಳೂರು ಮೂಲದ ಸುಮಾರು 60 ಸಾವಿರ ಕುಟುಂಬಗಳು ಮೈಸೂರಿನಲ್ಲಿ ವಾಸವಿದ್ದು, ಈ ಹಿನ್ನೆಲೆಯಲ್ಲಿ ಎರಡೂ ನಗರಗಳ ನಡುವೆ ವಿಮಾನ ಹಾರಾಟ ಆರಂಭಿಸುವಂತೆ ಹಲವು ಸಂಘ ಸಂಸ್ಥೆಗಳು, ವಾಣಿಜ್ಯೋದ್ಯಮಿಗಳು ಸೇರಿದಂತೆ ಪ್ರಮುಖರು ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್ 25ರಿಂದಲೇ ಈ ಮಾರ್ಗದಲ್ಲಿ ವಿಮಾನ ಸಂಚಾರವನ್ನು ಆರಂಭಿಸುವುದಾಗಿ ಪ್ರಕಟಿಸಿತ್ತು. ಆದರೆ, ಅನುಮತಿ ದೊರೆತಿರಲಿಲ್ಲ. ಹೀಗಾಗಿ, ಈ ವಿಮಾನ ಸಂಚಾರ ವಿಳಂಬವಾಗಿತ್ತು. ಇದೀಗ ಹಸಿರು ನಿಶಾನೆ ದೊರೆತಿರುವುದು ದಕ್ಷಿಣ ಕನ್ನಡ ಜಿಲ್ಲೆಯ ವಿಮಾನ ಪ್ರಯಾಣಿಕರಿಗೆ ಸಂತಸಕ್ಕೆ ಕಾರಣವಾಗಿದೆ.