ರಸ್ತೆಯಲ್ಲಿ ಬಿದ್ದಿದ್ದ 500 ರೂ. ನೋಟಿನ ಆಸೆ ಬಿದ್ದ ಮೈಸೂರಿನ ವ್ಯಕ್ತಿಗೆ ಕ್ಷಣಾರ್ಧದಲ್ಲೇ ಕಾದಿತ್ತು ಶಾಕ್​!

500
Published on

ಮೈಸೂರು: ಆಸೆಗೆ ಬಿದ್ದು ಒಂದು ಕ್ಷಣ ಮೈಮರೆತರೆ ಮುಂದೆ ಪಶ್ಚತಾಪ ಪಡಬೇಕಾಗುತ್ತದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ. ರಸ್ತೆಯಲ್ಲಿ ಬಿದ್ದಿದ್ದ 500 ರೂ. ತೆಗೆದುಕೊಳ್ಳಲು ಹೋದ ವ್ಯಕ್ತಿ 1.50 ಲಕ್ಷ ರೂ. ಕಳೆದುಕೊಂಡು ಇದೀಗ ಯಾತನೆ ಅನುಭವಿಸುತ್ತಿದ್ದಾರೆ.

ಈ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಕಲ್ಕುಣಿಕೆ ಗ್ರಾಮದ ನಿವಾಸಿ ಗಣೇಶ್​, ಡೆಪಾಸಿಟ್​ ಮಾಡಿದ್ದ 1.50 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಬರಲು ಬ್ಯಾಂಕ್​ಗೆ ಹೋಗಿದ್ದರು.

ಹಣವನ್ನು ಡ್ರಾ ಮಾಡಿದ ಬಳಿಕ ಕೆಲಸ ನಿಮಿತ್ತ ಹತ್ತಿರದ ಪೋಸ್ಟ್​ ಆಫೀಸ್​ಗೆ​ ತೆರಳಿದ್ದಾರೆ. ಈ ವೇಳೆ ಗಣೇಶ್​ರನ್ನು ಕೆಲ ದುಷ್ಕರ್ಮಿಗಳು ಹಿಂಬಾಲಿಸಿದ್ದಾರೆ. ಪೋಸ್ಟ್​ ಆಫೀಸ್​ನಲ್ಲಿ ಕೆಲಸ ಮುಗಿಸಿದ ಗಣೇಶ್,​ ದಾರಿ ಮಧ್ಯೆ ಶ್ರೀ ಹೋಟೆಲ್​ನಲ್ಲಿ ಟೀ ಕುಡಿದು ಹೋಗುವಾಗ ರಸ್ತೆ ಮೇಲೆ 500 ಎಸೆದ ದುಷ್ಕರ್ಮಿಗಳು, ಈ ಹಣ ನಿಮ್ಮದೇನಾ? ಎಂದಿದ್ದಾರೆ.

ಈ ವೇಳೆ ಗಣೇಶ್​ 500 ರೂ. ನೋಟನ್ನು ತೆಗೆದುಕೊಳ್ಳಲು ಕೆಳಗೆ ಬಾಗಿದಾಗ ಅವರ ಬಳಿಯಿದ್ದ ಹಣದ ಬ್ಯಾಗ್​ ಕಸಿದು ದುಷ್ಕರ್ಮಿಗಳು ಅಲ್ಲಿಂದ ಬೈಕ್​ ಏರಿ ಪರಾರಿಯಾಗಿದ್ದಾರೆ. ತಕ್ಷಣ ಗಣೇಶ್​ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net