ಜಮೀನಿಗೆ ಊಟ ಕೊಂಡೊಯ್ದ ಮಗಳು ತಂದೆಯಿಂದಲೇ ಹತ್ಯೆ: ಮೈಸೂರಿಗರನ್ನು ಬೆಚ್ಚಿಬೀಳಿಸಿದ ಘಟನೆ

Girl
Published on

ಮೈಸೂರು: ಅನ್ಯಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೊರ್ವ ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಿರಿಯಾಪಟ್ಟಣದ ಗೊಲ್ಲರ ಬೀದಿಯಲ್ಲಿ ನಡೆದಿದೆ.

ಗಾಯತ್ರಿ (19) ಕೊಲೆಯಾದ ಯುವತಿ. ತಂದೆ ಜಯರಾಂನಿಂದಲೇ ಮರ್ಯಾದೆ ಹತ್ಯೆಯಾಗಿದೆ. ಮಗಳು ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದು, ಇದರಿಂದ ಸಮಾಜದಲ್ಲಿ ತಲೆತಗ್ಗಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆನ್ನಲಾಗಿದೆ.

ಗಾಯಿತ್ರಿ ಪಟ್ಟಣದ ಮೆಡಿಕಲ್ ಸ್ಟೋರ್ ಒಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಈಕೆ ಪಟ್ಟಣದ ಉಪ್ಪಾರಗೇರಿ ಬಡಾವಣೆಯ ಯುವಕನನ್ನು ಪ್ರೀತಿಸುತ್ತಿದ್ದಳು. ಅಲ್ಲದೆ, ಅವನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಈ ವಿಷಯವಾಗಿ ಒಂದು ತಿಂಗಳಿನಿಂದ ಮನೆಯಲ್ಲಿ ಪೋಷಕರು ಮತ್ತು ಯುವತಿಯ ನಡುವೆ ಗಲಾಟೆ ನಡೆಯುತ್ತಿತ್ತು.

ಇದರ ನಡುವೆ ಗುರುವಾರ ಮಧ್ಯಾಹ್ನ 12.30 ಗಂಟೆ ಸಮಯದಲ್ಲಿ ಪಟ್ಟಣ ವ್ಯಾಪ್ತಿಯ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ತನ್ನ ತಂದೆಗೆ ಗಾಯತ್ರಿ ಊಟ ತೆಗೆದುಕೊಂಡು ಬಂದಿದ್ದಳು. ಈ ವೇಳೆ ಗಾಯಿತ್ರಿಯೊಂದಿಗೆ ಮಾತನಾಡಿದ ಜಯರಾಂ, ಮಗಳಿಗೆ ಬುದ್ದಿಮಾತು ಹೇಳಿದ್ದ. ಪ್ರೀತಿಸುತ್ತಿರುವ ಯುವಕನನ್ನು ಬಿಟ್ಟು ಬಿಡುವಂತೆ ಒತ್ತಾಯಿಸಿದ್ದಾನೆ. ನಾನು ಬಿಡುವುದಿಲ್ಲ ಏನು ಮಾಡುತ್ತೀಯ ಎಂದು ಗಾಯಿತ್ರಿ ಅಪ್ಪನನ್ನು ಪ್ರಶ್ನಿಸಿದ್ದರಿಂದ ರೊಚ್ಚಿಗೆದ್ದ ಜಯರಾಂ, ಜತೆಯಲ್ಲಿ ಕೃಷಿ ಕೆಲಸಕ್ಕೆಂದು ಇಟ್ಟು ಕೊಂಡಿದ್ದ ಮಚ್ಚಿನಿಂದ ಮಗಳ ಮೇಲೆ ಮಚ್ಚು ಬೀಸಿದ್ದಾನೆ.

ಮಚ್ಚಿನ ಹೊಡೆತ  ತಡೆಯಲು ಯುವತಿ ಕೈ ಅಡ್ಡ ಇಟ್ಟು ಕೊಂಡಿದ್ದರಿಂದ ಕೈಗೆ ಏಟು ಬಿದ್ದಿದೆ. ಬಳಿಕ ಮತ್ತೊಮ್ಮೆ ಮಚ್ಚಿನಿಂದ ಬಲವಾಗಿ ಕುತ್ತಿಗೆಗೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ಘಟನೆಯ ಬಳಿಕ ಆರೋಪಿಯು ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈ ಸಂಬಂಧ ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net