

ಮೈಸೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಮಾಜಿ ಶಾಸಕ ವಾಸು ಅವರು ಭಾನುವಾರ ಆಹಾರ ಪದಾರ್ಥ ವಿತರಣೆ ಮಾಡಿದರು.
ಪಡುವಾರಹಳ್ಳಿಯ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಹಿಳೆಯರಿಗೆ ಬಾಗಿನ ಅರ್ಪಿಸಿ, ಕಿಟ್ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಾಸು ಮಾತನಾಡಿ, ಯಾವುದೇ ಜಾತಿ, ಧರ್ಮ, ಪಕ್ಷಬೇಧವಿಲ್ಲದೆ ಹಸಿದವರಿಗೆ ಆಹಾರ ಪದಾರ್ಥ ತಲುಪಿಸಬೇಕೆಂಬ ಉದ್ದೇಶದಿಂದಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಟೋಕನ್ ನೀಡಿದ್ದ 2 ಸಾವಿರ ಜನರಿಗೆ ಕಿಟ್ ನೀಡಿದ್ದು, ಇದರಲ್ಲಿ ರಾಗಿ ಹಿಟ್ಟು, ಅಕ್ಕಿ, ಹೆಸರು ಕಾಳು, ಕಡ್ಲೆಕಾಳು, ಅಲಸಂದೆ, ಬೇಳೆಕಾಳು, ಚಹಾಪುಡಿ, ಸಕ್ಕರೆ, ಅಡುಗೆ ಎಣ್ಣೆ, ಉಪ್ಪಿನ ಪ್ಯಾಕೇಟ್ ಇದೆ. ಇನ್ನೂ ಹೆಚ್ಚು ಜನರಿಗೆ ಕಿಟ್ ನೀಡುವ ಆಸೆ ಇದೆ ಎಂದರು.
ಕರೊನಾ ತಡೆಯಲು ಸರ್ಕಾರದ ಸೂಚನೆಯನ್ನು ಸಾರ್ವಜನಿಕರು ಕಟ್ಟು ನಿಟ್ಟಾಗಿ ಪಾಲಿಸಬೇಕು. ಸರ್ಕಾರ ಜನರ ಆರೋಗ್ಯದ ಹಿತದೃಷ್ಟಿಯಿಂದ ಜಾರಿ ಮಾಡಿರುವ ಕ್ರಮಗಳಿಗೆ ಎಲ್ಲರೂ ಬದ್ಧರಾಗಿರಬೇಕು. ಪ್ರತಿಯೊಬ್ಬರೂ ದೈಹಿಕ ಅಂತರ ಕಾಯ್ದುಕೊಳ್ಳುವುದೇ ಕರೊನಾ ಹರಡದಿರಲು ಔಷಧವಾಗಿದೆ. ಸೋಂಕಿನ ವಿರುದ್ಧ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್‌ಗಳು, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಸೇನಾನಿಗಳಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು ಎಂದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ವಾಗ್ಮಿ ಪ್ರೊ.ಕೃಷ್ಣೇಗೌಡ, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಇನ್ನಿತರರು ಪಾಲ್ಗೊಂಡಿದ್ದರು.