ಮಗನ ಮೃತದೇಹ ಪಡೆಯಲು ಹಿಂದೇಟು: ಕಾರಣ ಕೇಳಿದ್ರೆ ಮೃತನ ತಂದೆಯ ಮೇಲೆ ಕೋಪ ಬರದೇ ಇರದು!

Father Son
Published on

ಮೈಸೂರು: ಆತ್ಮಹತ್ಯೆ ಮಾಡಿಕೊಂಡ ಮಗನ ಮೃತದೇಹವನ್ನು ಪಡೆಯಲು ತಂದೆ ನಿರಾಕರಿಸಿರುವ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ.

ನಾಲ್ಕು ದಿನಗಳ ಹಿಂದೆ ಜೆಪಿ ನಗರದ ನಿವಾಸದಲ್ಲಿ ಪ್ರವೀಣ್​ ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರವೀಣ್​ ಮಾದಕ ವ್ಯಸನಿಯಾಗಿದ್ದ. ಈ ವಿಚಾರವನ್ನು ಮುಚ್ಚಿಟ್ಟು ಒಂದೂವರೆ ವರ್ಷದ ಹಿಂದೆ ಪ್ರವೀಣ್‌ಗೆ ಮದುವೆ ಮಾಡಿಕೊಡಲಾಗಿತ್ತು. ಕೆಲಸವಿಲ್ಲದೆ ಮನೆಯಲ್ಲೇ ಉಳಿದಿದ್ದ ಪ್ರವೀಣ್ ಮದುವೆ ನಂತರ ಚಟಗಳನ್ನು ಬಿಟ್ಟಿದ್ದ.

ಇದರ ನಡುವೆ 6 ತಿಂಗಳ ಹಿಂದೆ ಪ್ರವೀಣ್​ ಪತ್ನಿ ಬಾಣಂತನಕ್ಕೆಂದು ತವರು ಮನೆಗೆ ಹೋಗಿದ್ದಳು. ಪತ್ನಿ ಇಲ್ಲದ ವೇಳೆ ಪ್ರವೀಣ್‌ಗೆ ತಂದೆ ರಾಘವ, ಅಣ್ಣ ಗೋವರ್ಧನ್ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಇದರಿಂದ ಮನನೊಂದು ಪ್ರವೀಣ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ಕು ದಿನದಿಂದ ಶವಾಗಾರದಲ್ಲಿರುವ ಪ್ರವೀಣ್ ಮೃತದೇಹವನ್ನು ಪಡೆಯಲು ತಂದೆ ಮುಂದೆ ಬಂದಿಲ್ಲ. ಮೃತದೇಹ ಪಡೆದರೆ ಪ್ರವೀಣ್ ಪತ್ನಿ ಹಾಗೂ ಮಗುವಿಗೆ ಆಸ್ತಿ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ತಂದೆ ಮೃತದೇಹ ಪಡೆದಿಲ್ಲ. ಇದೀಗ ನ್ಯಾಯ ಕೊಡಿಸುವಂತೆ ಪತ್ನಿ ಭೂಮಿಕಾ ಹಾಗೂ ಪೋಷಕರು ಠಾಣೆಯ ಮೆಟ್ಟಿಲೇರಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net