

ಮಡಿಕೇರಿ: ದೇಹ ಸದೃಢವಾಗಿರಲು ಕ್ರೀಡೆ ಸಹಕಾರಿ ಎಂದು ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ಎಂ.ರವಿ.ಕಾಳಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ೨೦೨೨-೨೩ನೇ ಸಾಲಿನ ಮೈಸೂರು ವಿಭಾಗ ಮಟ್ಟದ ಹಾಕಿ ಕ್ರೀಡಾ ಪಂದ್ಯಾವಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೊಡಗು ಆರ್ಮಿಗೆ ಹೆಸರುವಾಸಿಯಾಗಿದೆ. ಹಾಗೆಯೇ ಹಾಕಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದೆ. ಹಾಕಿ ಕ್ರೀಡೆಗೆ ತನ್ನದೇ ಆದ ಹೆಸರಿರುವ ಜಿಲ್ಲೆ ಕೊಡಗು. ಹಾಕಿ ಕ್ರೀಡೆಗೆ ಹೆಚ್ಚು ಮಹತ್ವ ಕೊಡುವಂತ ಕಾರ್ಯಗಳು ನಡೆಯುವುದರಿಂದ ಜಿಲ್ಲೆಯ ಕ್ರೀಡಾಪಟುಗಳು ಆಲ್ ಇಂಡಿಯಾ ಲೆವೆಲ್‌ನಲ್ಲೂ ಸ್ಪರ್ಧಿಸುವಂತಾಗಲಿ ಎಂದು ಶುಭ ಹಾರೈಸಿದರು.
ಕೊಡಗು ಜಿಲ್ಲೆಯ ಹಾಕಿ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲೂ ಪ್ರತಿನಿಧಿಸುತ್ತಿದ್ದಾರೆ. ಹಾಗೆ ದೇಶ ವಿದೇಶ ಮಟ್ಟದಲ್ಲೂ ಶಿಕ್ಷಣದಲ್ಲಿ ಮಾತ್ರವಲ್ಲದೆ ಹಾಕಿ ಕ್ರೀಡೆಯಲ್ಲಿ ಹಾಗೂ ಇತರ ಕ್ರೀಡಾಕೂಟದಲ್ಲಿ ಭಾಗವಹಿಸಿ ತಮ್ಮ ರಾಷ್ಟ್ರದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಸಂತೋ? ವ್ಯಕ್ತಪಡಿಸಿದರು.
ದೇಹ ಸದೃಢವಾಗಿರಲು ಕ್ರೀಡೆ ಸಹಕಾರಿ. ಕ್ರೀಡೆಯಲ್ಲಿ ಸೋಲು ಗೆಲುವು ಎನ್ನುವುದು ಸಾಮಾನ್ಯ. ಕ್ರೀಡೆಯಲ್ಲಿ ಭಾಗವಹಿಸುವುದು ಅತಿ ಮುಖ್ಯ, ಹೀಗೆ ಮುಂದೆ ನಡೆಯುವ ರಾಜ್ಯ, ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸ್ಪರ್ಧಿಸುವಂತಾಗಲಿ ಎಂದು ಶುಭ ಹಾರೈಸಿದರು.
ಕ್ರೀಡಾಕೂಟಕ್ಕೆ ಮಡಿಕೇರಿ ಶಾಸಕರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪೊನ್ನಚ್ಚನ ಶ್ರೀನಿವಾಸ್, ತಹಸಿಲ್ದಾರಾದ ಪಿ.ಎಸ್.ಮಹೇಶ್, ಡಿಡಿಪಿಐ ವೇದಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಟಿ.ಮಂಜುನಾಥ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ್ ಹಾಗೂ ವಿವಿಧ ತಾಲೂಕುಗಳ ಶಾಲಾ ಕಾಲೇಜುಗಳ ಅಧಿಕಾರಿಗಳು ಉಪಸ್ಥಿತರಿದ್ದರು.