

ಚಿಕ್ಕಮಗಳೂರು: ಮಂಗಳೂರಿನ ಬಿ.ಸಿ.ರಸ್ತೆಯಲ್ಲಿ ಜ.6 ರಂದು ಕಾಂಗ್ರೆಸ್ ಪಕ್ಷದ ಮೈಸೂರು ವಿಭಾಗ ಮಟ್ಟದ ಪ್ರಮುಖ ಮುಖಂಡರ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶಕ್ಕೆ ಜಿಲ್ಲೆಯಿಂದ 75 ಮಂದಿ ಆಯ್ದ ಮುಖಂಡರಿಗೆ ಆಹ್ವಾನವಿದೆ. 2020-21 ರಲ್ಲಿ ಪಕ್ಷ ಸಂಪೂರ್ಣವಾಗಿ ಸಂಘಟನೆಗೆ ಒತ್ತು ನೀಡಲಿದ್ದು, ಆಡಳಿತ ಪಕ್ಷ ಬಿಜೆಪಿಯ ವೈಫಲ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಹೋರಾಟ ರೂಪಿಸಲಿದೆ ಎಂದರು.
ಕರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ನಡೆದುಕೊಂಡ ರೀತಿ ಹಾಗೂ ಭ್ರಷ್ಟಾಚಾರದ ಬಗ್ಗೆ ಜನಾಕ್ರೋಶ ಹೆಚ್ಚಾಗಿದೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷರು ಸಂಘಟನಾತ್ಮಕ ವಿಚಾರಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಸಂಘಟನೆ ಹಾಗೂ ಹೋರಾಟವನ್ನು ಒಟ್ಟಿಗೆ ಕೊಂಡೊಯ್ಯಲು ತೀರ್ಮಾನಿಸಿದ್ದಾರೆ ಎಂದರು.
ಹೋರಾಟದ ವರ್ಷ:
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ಯಾವುದೇ ವಿಷಯದ ಮೇಲೆ ಚರ್ಚೆಗೆ ಅವಕಾಶ ಸಿಗುತ್ತಿಲ್ಲ. ಸುಗ್ರೀವಾಜ್ಞೆ ಮೂಲಕ ಕಾನೂನು ತರಲಾಗುತ್ತಿದೆ. ಈ ಕಾರಣಕ್ಕಾಗಿ ರೈತರು ಹಾಗೂ ಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದಾರೆ. ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಸ್ಕಾಲರ್‍ಶಿಪ್ ಕಡಿತದಿಂದ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನಗಳು ಬಾರದೆ ಫಲಾನುಭವಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಇವೆಲ್ಲವನ್ನು ಹೋರಾಟದ ಸ್ವರೂಪಕ್ಕೆ ತೆಗೆದುಕೊಂಡು ಈ ವರ್ಷವನ್ನು ಹೋರಾಟದ ವರ್ಷವಾಗಿ ರೂಪಿಸಿದ್ದೇವೆ ಎಂದರು.
ದಿಕ್ಕು ತಪ್ಪಿಸುವ ಪ್ರಯತ್ನ:
ಗ್ರಾಪಂ ಚುನಾವಣೆಯಲ್ಲಿ ಪಕ್ಷ ಬೆಂಬಲಿಸಲು ಎಲ್ಲ ಸ್ಥಾನಗಳಲ್ಲೂ ಸ್ಪರ್ಧಿಸಿ ಫಲಿತಾಂಶ ತಂದುಕೊಟ್ಟಿದ್ದಾರೆ. ಬಿಜೆಪಿ ಈ ಚುನಾವಣೆಯ ಪ್ರತಿ ಹಂತದಲ್ಲೂ ಮತದಾರರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದೆ. ಫಲಿತಾಂಶ ಬಂದ ನಂತರ ಇದು ಒಂದೇ ಪಕ್ಷದ ಪರವಾದ ಫಲಿತಾಂಶ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಕಾಂಗ್ರೆಸ್ ಬೆಂಬಲಿತರು ಹಲವೆಡೆ ಗೆದ್ದು ಬಂದಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 172, ಮೂಡಿಗೆರೆ ಕ್ಷೇತ್ರದಲ್ಲಿ 188, ಚಿಕ್ಕಮಗಳೂರು 85, ಕಡೂರು 270, ತರೀಕೆರೆ 260 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ವಕ್ತಾರ ಎಂ.ಸಿ.ಶಿವಾನಂದಸ್ವಾಮಿ, ಮುಖಂಡರಾದ ಎಚ್.ಪಿ.ಮಂಜೇಗೌಡ, ಹಿರೇಮಗಳೂರು ಪುಟ್ಟಸ್ವಾಮಿ, ರೂಬೆನ್ ಮೋಸಸ್, ಐಟಿ ವಿಭಾಗದ ಜಿಲ್ಲಾಧ್ಯಕ್ಷ ಕಾರ್ತಿಕ್ ಜಿ.ಚೆಟ್ಟಿಯಾರ್ ಸುದ್ದಿಗೋಷ್ಠಿಯಲ್ಲಿದ್ದರು.