ದಸರೆಗಿದೆ ಶತಮಾನಗಳ ಇತಿಹಾಸ: ಜಂಬೂಸವಾರಿಗೆ ಆನೆಗಳ ಬದಲಿಗೆ ವಾಹನ ಬಳಸಬಾರದೇಕೆ?

Dasara 2
Published on

ಶಕ್ತಿ ಸ್ವರೂಪಿಣಿಯಾದ ಮಾತೆಯನ್ನು ಪೂಜಿಸುವ ಶರನ್ನವರಾತ್ರಿ ದೇಶಾದ್ಯಂತ ನಡೆಯುತ್ತದೆ. ಕರ್ನಾಟಕದಲ್ಲಿ ವಿಶೇಷವಾಗಿ ಮೈಸೂರಿನಲ್ಲಿ ನಡೆಯುವ ದಸರಾ ಉತ್ಸವವು ಪೌರಾಣಿಕ, ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆದಿದೆ. ‘ನಾಡ ಹಬ್ಬ ಮೈಸೂರು ದಸರೆ’ಯ ಕುರಿತು ಪುರಾತತ್ವ ಮತ್ತು ಇತಿಹಾಸಜ್ಞ ಡಾ. ಶೆಲ್ವಪಿಳ್ಳೆ ೖ ಅಯ್ಯಂಗಾರ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಎನ್.ಎಸ್. ರಂಗರಾಜು ಹಾಗೂ ಮೈಸೂರಿನ ಕಥೆಗಳು ಖ್ಯಾತಿಯ ಧಮೇಂದ್ರ ಕುಮಾರ್ ಅವರು ‘ವಿಜಯವಾಣಿ ಹಾಗೂ ದಿಗ್ವಿಜಯ 24ಗಿ7 ನ್ಯೂಸ್ ಆಯೋಜಿಸಿದ್ದ ‘ಕ್ಲಬ್​ಹೌಸ್ ಆನ್​ಲೈನ್ ಆಡಿಯೋ ಸಂವಾದ’ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಿದ್ದಾರೆ.

ದಸರೆಗಿದೆ ಶತಮಾನಗಳ ಇತಿಹಾಸ

| ಪ್ರೊ. ಎನ್.ಎಸ್. ರಂಗರಾಜು

ನಾಡಿನ ಐತಿಹಾಸಿಕ ದಸರಾ ಉತ್ಸವದ ವೈಭವ ಮೂರು ಕಾಲಘಟ್ಟಗಳಲ್ಲಿ ನಡೆದು ಬಂದಿದೆ. ಮೊದಲಿಗೆ ವಿಜಯನಗರದ ಹಂಪಿಯಲ್ಲಿ 2ನೇ ದೇವರಾಯನ ಕಾಲದಲ್ಲಿ ಆರಂಭವಾಗಿ

ವಿಜಯನಗರದ ಪತನದವರೆಗೂ (1424-1565) ನಡೆಯಿತು. ಎರಡನೆಯದು ಶ್ರೀರಂಗಪಟ್ಟಣದಲ್ಲಿ ಒಡೆಯರ ಕಾಲದಲ್ಲಿ ಆರಂಭವಾಗಿ ಟಿಪು್ಪ ಪತನದವರೆಗೂ (1610-1799) ಸಾಗಿತು. ಮೂರನೆಯದು ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ (1801ರ ನಂತರ) ಆರಂಭವಾಯಿತು. 16ನೇ ಶತಮಾನದ ರತ್ನಾಕರವರ್ಣಿ ಬರೆದಿರುವ ಭರತೇಶ ವೈಭವದಲ್ಲೇ ದಸರಾ ಕುರಿತು ದಾಖಲೆಯಿದೆ. ಇದು ಸಾಹಿತ್ಯಕ ಪುರಾವೆ. ಉಳಿದಂತೆ ರಾಯಭಾರಿಗಳಾಗಿ ಹೊರದೇಶಗಳಿಂದ ಬಂದವರೂ ದಸರಾ ಕುರಿತು ಬರೆದಿದ್ದಾರೆ. ಉತ್ಖನನಗಳು ಹಾಗೂ ಶಾಸನಗಳ ದಾಖಲೆಗಳೂ ಇವೆ. ದಸರಾಕ್ಕೆ 590 ವರ್ಷಗಳ ಇತಿಹಾಸವಿದೆ. 2ನೇ ದೇವರಾಯನ ಕಾಲದಲ್ಲಿ ಹಂಪಿಯ ಮಹಾನವಮಿ ದಿಬ್ಬದಲ್ಲಿ ದಸರಾ ವೈಭವದಿಂದ ನಡೆಯುತ್ತಿತ್ತು. 1430ರಲ್ಲಿ ದೇಶಕ್ಕೆ ಆಗಮಿಸಿದ್ದ ಇಟಲಿಯ ನಿಕೋಲಸ್ ಡೇ ಕೌಂಟಿ ಹಾಗೂ ಪರ್ಷಿಯನ್​ನ ಅಬ್ದುಲ್ ರಜಾಕ್ ದಸರೆಯ ವೈಭವವನ್ನು ಕಟ್ಟಿಕೊಟ್ಟಿದ್ದಾರೆ. ನಂತರ ಶ್ರೀಕೃಷ್ಣದೇವರಾಯನ ಕಾಲದ ದಸರಾ ಕುರಿತು ಆಗಿನ ಪೋರ್ಚುಗೀಸ್ ಪ್ರವಾಸಿಗರಾದ ಡೊಮ್ಯಾಂಗೋ ಪೇಸ್ ಹಾಗೂ ಫರ್ನಿಯೋನಿಮೇನ್ಜಿ ಬರೆದಿದ್ದಾರೆ. ಆ ದಾಖಲೆ ಆಧರಿಸಿ 1976ರಲ್ಲಿ ಎಸ್.ಆರ್. ರಾವ್ ಹಂಪಿಯ ಮಹಾನವಮಿ ದಿಬ್ಬದಲ್ಲಿ ಉತ್ಖನನ ನಡೆಸಿ ಶೇ. 80ರಷ್ಟು ಮಾಹಿತಿ ಸಂಗ್ರಹಿಸಿದ್ದರು. ನಂತರ ಆರ್.ಸಿ. ಅಗರ್​ವಾಲ್ ಉಳಿದ ಶೇ. 20 ಉತ್ಖನನ ಪೂರ್ಣಗೊಳಿಸಿದರು.

ಮೈಸೂರು ದಸರಾ: ಒಡೆಯರು 1793-94ರಲ್ಲಿ ನಿರ್ವಿುಸಿದ ಸೌಂದರ್ಯ ವಿಲಾಸ ಅರಮನೆ ಸಿಡಿಲು ಬಡಿದು ಸುಟ್ಟುಹೋಯಿತು. ನಂತರ ಅಧಿಕಾರಕ್ಕೆ ಬಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ತಾತ್ಕಾಲಿಕ ಚಪ್ಪರ ನಿರ್ವಿುಸಿ ಪಟ್ಟಾಭಿಷೇಕ ಮಾಡಲಾಯಿತು. ಅವರು ಅಧಿಕಾರಕ್ಕೆ ಬಂದ ನಂತರ ಸಾಕುತಾಯಿ ಲಕ್ಷ್ಮಮ್ಮಣ್ಣಿ ಅವರೊಡಗೂಡಿ ಮೈಸೂರಿನಲ್ಲಿ ಮರದ ಅರಮನೆ ನಿರ್ವಿುಸಲಾಯಿತು. 1801ಕ್ಕೆ ಅದು ಪೂರ್ಣಗೊಂಡಿತು. ಬಳಿಕ ಶ್ರೀರಂಗಪಟ್ಟಣದಿಂದ ಮೈಸೂರಿಗೆ ಸ್ಥಳಾಂತರಗೊಂಡ ಮುಮ್ಮಡಿ ಕೃಷ್ಣರಾಜ ಒಡೆಯರ್ 1801ರಲ್ಲಿ ಮೈಸೂರಿನಲ್ಲಿ ದಸರಾ ಉತ್ಸವ ಆರಂಭಿಸಿದರು. ಆಗ ಆರಂಭವಾದ ದಸರಾ ಉತ್ಸವ ಈವರೆಗೂ ನಡೆದುಕೊಂಡು ಬಂದಿದೆ.

ಅಂಬಾರಿಗೆ ಅನೆಯೇ ಏಕೆ?: ಆನೆ ಸ್ಥಿರತೆ ಮತ್ತು ಶಕ್ತಿ ಹೊಂದಿರುವ ಪ್ರಾಣಿ. ಹಾಗಾಗಿ ಅಂಬಾರಿಗೆ ಆನೆಯೇ ಸೂಕ್ತ. ಮಹಾರಾಜರ ಕಾಲದಲ್ಲಿ ಖೆಡ್ಡ ತೋಡಿ ಅದರಲ್ಲಿ ಆನೆಗಳನ್ನು ಬೀಳಿಸಿ, ಅವುಗಳನ್ನು ತರಬೇತಿ ಪಡೆದ ಬೇರೆ ಆನೆಗಳಿಂದ ಪಳಗಿಸುತ್ತಿದ್ದರು. ಈಗಲೂ ಅಂಬಾರಿ ಹೊರುವ ಆನೆಯನ್ನು ವಿಶೇಷವಾಗಿ ಗುರುತಿಸಿ ತರಬೇತಿ ನೀಡುವ ಪದ್ಧತಿ ಇದೆ. ಅಂಬಾರಿ ಹೊರುವ ಆನೆ ಗಂಭೀರವಾಗಿರಬೇಕು, ಅಂಬಾರಿ ಹೊರಲು ಅದರ ಬೆನ್ನು ಸಮತಟ್ಟಾಗಿರಬೇಕು. ಅಂತಹ ಆನೆಗಳನ್ನೇ ಹುಡುಕಿ ಪಳಗಿಸಲಾಗುತ್ತದೆ.

ಅಂಬಾವಿಲಾಸ ಅರಮನೆ

1897ರ ಫೆಬ್ರವರಿಯಲ್ಲಿ ಮರದ ಅರಮನೆ ಬೆಂಕಿ ಬಿದ್ದು ಸುಟ್ಟು ಹೋಗುತ್ತದೆ. ಅಲ್ಲಿಂದ ಜಗನ್ ಮೋಹನ ಅರಮನೆಗೆ ಸ್ಥಳಾಂತರಗೊಳ್ಳುವ ರಾಜ ಕುಟುಂಬ ಅದೇ ವರ್ಷ ನವೆಂಬರ್​ನಲ್ಲಿ ಮತ್ತೆ ಅರಮನೆ ನಿರ್ವಿುಸುತ್ತದೆ. ಅದೇ ಈಗಿರುವ ಅಂಬಾವಿಲಾಸ ಅರಮನೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಆರಂಭಿಸಿದ ಮೈಸೂರು ದಸರಾ ದೇಶದ ಸ್ವಾತಂತ್ರ್ಯ ನಂತರವೂ ನಡೆದುಕೊಂಡು ಬಂದಿದೆ. 1969ರಲ್ಲಿ ಕೇಂದ್ರ ಸರ್ಕಾರ ರಾಜರಿಗೆ ನೀಡುತ್ತಿದ್ದ ರಾಜಧನ ರದ್ದುಪಡಿಸಿದ ನಂತರ ರಾಜರ ಆಳ್ವಿಕೆ ಕೊನೆಗೊಂಡಿತು. ಇದರಿಂದ 1969ರಲ್ಲಿ ರಾಜರಾಗಿದ್ದ ಜಯಚಾಮರಾಜ ಒಡೆಯರ್ ಸಿಂಹಾಸನದಿಂದ ಕೆಳಗಿಳಿದಿದ್ದು ಮಾತ್ರವಲ್ಲದೆ ದಸರೆಯಲ್ಲಿ ಅಂಬಾರಿ ಏರಲೂ ನಿರಾಕರಿಸಿದರು. ಹಾಗಾಗಿ 1969ರಲ್ಲಿ ದಸರಾ ಉತ್ಸವ ನಡೆಯುವುದಿಲ್ಲ. ಆದರೆ ಆ ಒಂದು ವರ್ಷ ಮೈಸೂರಿನ ಜನರೇ ಸ್ವಯಂ ಪ್ರೇರಣೆಯಿಂದ ಇಡೀ ಮೈಸೂರು ನಗರವನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸುವ ಮೂಲಕ ರಾಜರಿಗೆ ಗೌರವ ಸಲ್ಲಿಸಿದರು. ನಂತರ ಬರುವ ಯಾವ ರಾಜರೂ ಅಂಬಾರಿ ಏರುವುದಿಲ್ಲ. ಕೇವಲ ಸಿಂಹಾಸನದಲ್ಲಿ ಕುಳಿತು ರಾಜದರ್ಬಾರ್ ಹಾಗೂ ಧಾರ್ವಿುಕ ವಿಧಾನಗಳನ್ನು ಮಾತ್ರ ನಡೆಸಿಕೊಂಡು ಬರುತ್ತಿದ್ದಾರೆ. ಹಾಗಾಗಿ 1969ರ ನಂತರ ಮೈಸೂರು ದಸರಾ ಜನಸಾಮಾನ್ಯರ ದಸರಾ ಆಗಿ ಪರಿವರ್ತನೆಯಾಗಿದೆ.

ಯೂರೋಪಿಯನ್ ದರ್ಬಾರ್

ಮುಮ್ಮಡಿ ಕೃಷ್ಣರಾಜ ಒಡೆಯರ್ ಪಟ್ಟಾಭಿಷೇಕ ನಂತರ ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬಂದ ಮೇಲೆ ಬ್ರಿಟಿಷರು ದಸರಾ ಉತ್ಸವದಲ್ಲಿ ಭಾಗವಹಿಸಲು ಮನವಿ ಕಳುಹಿಸುತ್ತಾರೆ. ಅದಕ್ಕಾಗಿಯೇ ಯೂರೋಪಿಯನ್ ದರ್ಬಾರ್​ನಲ್ಲಿ ಬ್ರಿಟಿಷ್ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.

ಶ್ರೀರಂಗಪಟ್ಟಣ ದಸರಾ

ಶ್ರೀರಂಗಪಟ್ಟಣದಲ್ಲಿ (1610-1799) ರಾಜ ಒಡೆಯರ ಕಾಲದಲ್ಲಿ ದಸರಾ ಆರಂಭವಾಯಿತು. 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಮೊದಲ ಬಾರಿಗೆ ದಸರಾ ನಡೆದಿರುವುದಕ್ಕೆ ಅನೇಕ ಪುರಾವೆಗಳು ದೊರೆತಿವೆ. ಕೆಲ ವರ್ಷಗಳ ಹಿಂದೆ ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಶ್ರೀರಂಗಪಟ್ಟಣದ ದಸರಾ ಮಂಟಪವನ್ನು ಗುರುತಿಸಿ, ಸಂರಕ್ಷಿಸಲಾಗಿದೆ. ಅದರಲ್ಲಿ ರಾಜ ಒಡೆಯರ್ ಕಾಲದಲ್ಲಿ ದಸರಾ ನಡೆದಿರುವುದರ ಮಾಹಿತಿ ದಾಖಲಾಗಿದ್ದು, ಕಂಠೀರವ ನರಸರಾಜ ಒಡೆಯರ್ ಮುಂದುವರಿಸಿದರು. ಟಿಪು್ಪ ಪತನದವರೆಗೂ ಶ್ರೀರಂಗಪಟ್ಟಣದಲ್ಲಿ ದಸರಾ ನಡೆಯಿತು.

ಜಂಬೂಸವಾರಿಗೆ ಆನೆಗಳ ಬದಲಿಗೆ ವಾಹನ ಬಳಸಬಾರದೇಕೆ?

ಆನೆ, ಕುದುರೆ, ಪಟ್ಟದ ಕತ್ತಿ ಮತ್ತು ಪಟ್ಟದ ಹಸುವನ್ನು ರಾಜರ ಚತುರಂಗ ಬಲ ಎಂದು ಗುರುತಿಸಲಾಗಿದೆ. ಆನೆ ಲಕ್ಷ್ಮೀ ಸ್ವರೂಪ. ಇವು ರಾಜ್ಯದ ದಿಕ್ಕುಗಳನ್ನು ನಿರ್ಧರಿಸುತ್ತಿದ್ದವು. ಗೆಲುವಿಗೆ ಕುದುರೆ ಬಲ ಬಹಳ ಮುಖ್ಯ. ಇನ್ನು ಪಟ್ಟದ ಕತ್ತಿ ಆಯುಧ ಇಲ್ಲದೆ ಶಾಂತಿ ಸಾಧ್ಯವಿಲ್ಲ. ಹಸು ಸಂಪತ್ತು ಸಮೃದ್ಧಿಗೆ ಕಾರಣ ಎಂದು ಪರಂಪರೆಯಲ್ಲಿಯೇ ಬಂದಿದೆ. ಆನೆಯನ್ನು ಜಂಬೂಸವಾರಿಗೆ ಬಳಸುವುದು ಪ್ರಾಣಿ ಹಿಂಸೆ ಎಂದುಬಿಟ್ಟರೆ ಪರಂಪರೆಯೇ ಉಳಿಯುವುದಿಲ್ಲ. ಹಾಗಾಗಿ ಜಂಬೂಸವಾರಿಗೆ ಆನೆಯನ್ನು ಬಳಸುವುದು ಸಮರ್ಥನೀಯ.

ಮಹಾರಾಜರ ಮೂಲ ಹಾಗೂ ಚಾಮುಂಡಿ ವಿಗ್ರಹದ ವೈಶಿಷ್ಟ್ಯ

ದೊಡ್ಡದೇವರಾಜ ಒಡೆಯರ ಕಾಲದಲ್ಲೇ ಚಾಮುಂಡಿಬೆಟ್ಟ ಇತ್ತು ಎಂದು ದಾಖಲೆ ಸಿಗುತ್ತದೆ. ನಂತರ ಬಂದ ಒಡೆಯರು ಅದಕ್ಕೆ ವೈಭವ ತಂದರು. ಬೆಟ್ಟಕ್ಕೆ ಹೋಗಲು ಮೆಟ್ಟಿಲು ನಿರ್ವಿುಸಿದರು. ನಂದಿಯನ್ನು ಸ್ಥಾಪಿಸಿದರು. ಇದೆಲ್ಲವೂ ದೊಡ್ಡದೇವರಾಜ ಒಡೆಯರ ಕಾಲದಲ್ಲೇ ಆಗಿತ್ತು. ಚಾಮುಂಡಿ ದೇವಾಲಯದ ಪಕ್ಕದಲ್ಲೇ ಮಾರಮ್ಮ ದೇವಾಲಯ ಇದೆ. ಆದರೆ ಪೂಜಾ ಪದ್ಧತಿ ಬದಲಾವಣೆ ಆಗಿದ್ದನ್ನು ಇತಿಹಾಸದಲ್ಲಿ ಗಮನಿಸುತ್ತೇವೆ. ಹಿಂದೆ ಶಿವಾರ್ಚಕರು ಪೂಜೆ ಮಾಡುತ್ತಿದ್ದರು. ನಂತರ ದೀಕ್ಷಿತರು ನಡೆಸುತ್ತಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಮಾರಮ್ಮನ ದೇವಾಲಯವೇ ಆಗಿತ್ತೇ ಎನ್ನುವುದಕ್ಕೆ ಮಾಹಿತಿ ಇಲ್ಲ. ಚಾಮುಂಡಿಬೆಟ್ಟದ ಹಿಂಭಾಗದಲ್ಲಿ ಮಹಾಬಲೇಶ್ವರ ದೇವಾಲಯ ಇದೆ. ಅದು ಗಂಗರ ಕಾಲದಲ್ಲೇ ಇತ್ತು, ಹೊಯ್ಸಳರ ಕಾಲದಲ್ಲಿ ಅಭಿವೃದ್ಧಿಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net