

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆಯುವ ‘ಗಜಪಯಣ’ಕ್ಕೆ ಆ.21ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಚಾಲನೆ ದೊರೆಯಲಿದ್ದು, ಅರಣ್ಯ ಇಲಾಖೆ ಸಿದ್ಧ್ದತೆ ಮಾಡಿಕೊಂಡಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಐ.ಬಿ.ಪ್ರಭುಗೌಡ ತಿಳಿಸಿದರು.
ಅಂದು ಬೆಳಗ್ಗೆ 10.20 ರಿಂದ 10.45ರ ವರೆಗಿನ ತುಲಾ ಲಗ್ನದಲ್ಲಿ ಸಂಪ್ರದಾಯದಂತೆ ಅರಮನೆ ಪುರೋಹಿತ ಪ್ರಹ್ಲಾದರಾವ್ ಮತ್ತು ತಂಡ ವೀರನಹೊಸಹಳ್ಳಿ ಗೇಟ್ ಬಳಿಯ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ನಂತರ ಗಜಪಡೆಗೆ ಪೂಜೆ ಸಲ್ಲಿಸುವರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗಜಪಯಣಕ್ಕೆ ಚಾಲನೆ ನೀಡಲಿದ್ದಾರೆ. ಆನೆಗಳ ಕಿರು ಪುಸ್ತಕವನ್ನು ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಬಿಡುಗಡೆ ಮಾಡುವರು. ಶಾಸಕ ಜಿ.ಡಿ.ಹರೀಶ್‌ಗೌಡ ಅಧ್ಯಕ್ಷತೆ ವಹಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಸಚಿವ ಕೆ.ವೆಂಕಟೇಶ್, ಶಿವರಾಜ್ ಸಂಗಪ್ಪ ತಂಗಡಗಿ, ಶಾಸಕರಾದ ಅನಿಲ್ ಚಿಕ್ಕಮಾದು, ರಮೇಶ್ ಬಂಡಿಸಿದ್ದೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಆಗಮಿಸಲಿದ್ದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಬೋಸ್ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಆದಿವಾಸಿ ಮಕ್ಕಳ ನೃತ್ಯ, ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಪೂಜಾ ಕುಣಿತ, ಪಟಕುಣಿತ, ಗೊರವರ ಕುಣಿತ, ಗುರುಪುರ ಟಿಬೇಟಿಯನ್ ಶಾಲಾ ಮಕ್ಕಳ ನೃತ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ಕಲಾ ತಂಡಗಳು ಗಜಪಡೆಯ ಮುಂದೆ ಪ್ರದರ್ಶನ ನೀಡಲಿವೆ ಎಂದರು.
ಈ ಬಾರಿ ಗಜಪಯಣ ಚಾಲನೆ ಸಂದರ್ಭ ವಿಜೃಂಭಣೆ, ವಿಭಿನ್ನ, ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜಂಗಲ್ ಇನ್ ರೆಸಾರ್ಟ್ ಬಳಿ ಗಣ್ಯರು ಸೇರಿದಂತೆ ಸುಮಾರು 2 ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮಳೆ ನೀರು ರಕ್ಷಕ ಜರ್ಮನ್ ಟೆಂಟ್‌ನ ಬೃಹತ್ ಪೆಂಡಾಲ್ ಅಳವಡಿಸಲಾಗುತ್ತದೆ. ಭಾಗವಹಿಸುವ ಎಲ್ಲ ಜನರಿಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬೆಳಗ್ಗೆ 11.20ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸುತ್ತಮುತ್ತಲ ಹಳ್ಳಿಯ ಮಕ್ಕಳು, ಸ್ಥಳೀಯ ಕಲಾವಿದರು ಹಾಗೂ ಶಾಲಾ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಗಜಪಯಣದ ಮೂಲಕ ಮೊದಲ ತಂಡದಲ್ಲಿ 9 ಆನೆಗಳನ್ನು ಕರೆತರಲಾಗುತ್ತಿದೆ. ಇದರಲ್ಲಿ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು, ಧನಂಜಯ, ಭೀಮ, ಗೋಪಿ, ಕಂಜನ್, ರೋಹಿತ್, ಏಕಲವ್ಯ, ವರಲಕ್ಷ್ಮೀ ಮತ್ತು ಲಕ್ಷ್ಮೀ ಆನೆಗಳನ್ನು ಇರಲಿವೆ. ಉಳಿದ 5 ಆನೆಗಳನ್ನು 10 ದಿನಗಳ ಬಳಿಕ 2ನೇ ತಂಡದಲ್ಲಿ ಕರೆತಂದು ತಾಲೀಮು ನಡೆಸಲಾಗುವುದು ಎಂದರು.
ಗಜಪಯಣ ಮೂಲಕ ಆಗಮಿಸಿ ಅರಣ್ಯ ಭವನದಲ್ಲಿ ಉಳಿದುಕೊಳ್ಳುವ ಗಜಪಡೆಯನ್ನು ಆ.23ರಂದು ಶುಕ್ರವಾರ ಬೆಳಗ್ಗೆ ಅರಮನೆ ಕರೆತರಲಾಗುತ್ತದೆ. ಈ ಸಂದರ್ಭ ವಿಶೇಷ ಪೂಜೆ ಸಲ್ಲಿಸಿ ಅರಮನೆಗೆ ಆನೆಗಳನ್ನು ಬರ ಮಾಡಿಕೊಳ್ಳಲಾಗುವುದು. 24ರಂದು ಬೆಳಗ್ಗೆ ಆನೆಗಳಿಗೆ ತೂಕ ಪರೀಕ್ಷೆ ನಡೆಯಲಿದ್ದು, ಇದಕ್ಕಿಂತ ಮುಂಚಿತವಾಗಿ ಎಲ್ಲ ಆನೆಗಳಿಗೂ ಒಣ ತಾಲೀಮು ನಡೆಸಲಾಗುತ್ತದೆ ಎಂದು ತಿಳಿಸಿದರು.
ಆನೆಗಳೊಂದಿಗೆ ಆಗಮಿಸುವ ಮಾವುತ, ಕಾವಾಡಿ ಹಾಗೂ ಅವರ ಕುಟುಂಬ ಸದಸ್ಯರಿಗೆ ವಾಸ್ತವ್ಯಕ್ಕೆ 18 ಶೆಡ್‌ಗಳನ್ನು ನಿರ್ಮಿಸಲಾಗಿದೆ. 2ನೇ ತಂಡದ ಆನೆಗಳೊಂದಿಗೆ ಬರುವ ಮಾವುತ ಮತ್ತು ಕಾವಾಡಿಗಳು, ಅವರ ಕುಟುಂಬದವರಿಗೆ ಶೆಡ್ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಆನೆಗಳೊಂದಿಗೆ ಬರುವ ಮಕ್ಕಳ ಓದಿಗೆ ಸಮಸ್ಯೆಯಾಗದಂತೆ ಟೆಂಟ್ ಶಾಲೆ ತೆರೆಯಲಾಗುತ್ತಿದ್ದು, ಅದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ವಲಯ ಅರಣ್ಯಾಧಿಕಾರಿ ಸಂತೋಷ್ ಮನೋಹರ್ ಹೂಗಾರ್ ಇದ್ದರು.