ಸತತ 3ನೇ ಬಾರಿ ನೆಲಮಂಗಲಕ್ಕೆ ಹಿರಿಮೆ; ಜಂಬೂಸವಾರಿಯಲ್ಲಿ ದಕ್ಷಿಣ ಕಾಶಿಯ ದರ್ಶನ

mysuru dasara
Published on

ಬೆಂಗಳೂರು ಗ್ರಾಮಾಂತರ: ನಾಡಹಬ್ಬ ಮೈಸೂರು ದಸರಾದ ಜಂಬೂಸವಾರಿಯಲ್ಲಿ (Mysuru Dasara) ಈ ಬಾರಿ ಗ್ರಾಮಾಂತರ ಜಿಲ್ಲೆಯ ಐತಿಹಾಸಿಕ ಮಹತ್ವ ಸಾರುವ ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ. ದೇವನಹಳ್ಳಿ ಕೋಟೆ, ಮುಕ್ತಿನಾಥೇಶ್ವರ ದೇವಾಲಯ, ಕಪಿಲೇಶ್ವರ ಸ್ವಾಮಿ ದೇವಸ್ಥಾನ, ಮಣ್ಣೆ, ಶಿವಗಂಗೆ ಬೆಟ್ಟದ ಜತೆಗೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಒಳಗೊಂಡ ವಿಶೇಷ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ. 2 ವರ್ಷ ನೆಲಮಂಗಲದ ಶಿವಗಂಗೆ ಬೆಟ್ಟ ಪ್ರದರ್ಶನ ಕಂಡಿತ್ತು. ಈ ಬಾರಿಯೂ ದಕ್ಷಿಣ ಕಾಶಿಯ ಅನಾವರಣಕ್ಕೆ ವೇದಿಕೆ ಸಿದ್ಧವಾಗಿದೆ.

ದೇವನಹಳ್ಳಿ ಕೋಟೆ

ಕ್ರಿ.ಶ.1501ರಲ್ಲಿ ದೇವನಹಳ್ಳಿ ಕೋಟೆಯನ್ನು ದೇವನ ದೊಡ್ಡಿಯಲ್ಲಿ ದೇವರಾಯನ ಒಪ್ಪಿಗೆಯೊಂದಿಗೆ ಮಣ್ಣಿನಿಂದ ನಿರ್ವಿುಸಿದ್ದರು. ಈ ಕೋಟೆಯನ್ನು 20 ಎಕರೆ ವಿಸ್ತೀರ್ಣದಲ್ಲಿ ಅಂಡಾಕಾರದಲ್ಲಿ ನಿರ್ವಿುಸಲಾಗಿದೆ. ಅಂಡಾಕಾರದ ಆಂತರಿಕ ಕೋಟೆಯು ಶುಷ್ಕವಾಗಿದ್ದು, ನಿಯಮಿತ, ಮಧ್ಯಂತರಗಳಲ್ಲಿ 12 ಅರೆ ವೃತ್ತಾಕಾರದ ಕೊತ್ತಲು ಹೊಂದಿದೆ. ಶಿವಗಂಗೆಯನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಬೆಟ್ಟದ ತುದಿಯಲ್ಲಿ ಒಂದು ದೈತ್ಯ ನಂದಿ ಪ್ರತಿಮೆಯನ್ನು ಬಂಡೆಯಲ್ಲಿ ಕೆತ್ತಲಾಗಿದೆ. ಇತಿಹಾಸ, ಸಾಂಸ್ಕೃತಿಕ, ಧಾರ್ವಿುಕ ಮಹತ್ವ ಸಾರುವ ಬೆಟ್ಟವಾಗಿದೆ. ಗಂಗಾಧರೇಶ್ವರ, ಹೊನ್ನಾದೇವಿ ದೇವಾಲಯ ಹಾಗೂ ಒಳಕಲ್ಲು ತೀರ್ಥ, ನಂದಿ ಪ್ರತಿಮೆ, ಪಾತಾಳ ಗಂಗೆ ಇವುಗಳ ಸಂಗಮದ ವಿಶೇಷ ಸ್ಥಳವಾಗಿದೆ.

ಮುಕ್ತಿ ನಾಥೇಶ್ವರ ದೇವಾಲಯ

ದೇವನಹಳ್ಳಿ ಮುಕ್ತಿ ನಾಥೇಶ್ವರ ದೇವಾಲಯ 910ಕ್ಕೂ ಹೆಚ್ಚು ಪುರಾತನವಾದುದು. ಇದು ದ್ರಾವಿಡ ಶೈಲಿಯದು. ಇಲ್ಲಿ ದ್ವಾರ ಮಂಟಪ, ಸುಖನಾಸಿ, ನವರಂಗ, ಗರ್ಭ ಗೃಹಗಳಿರುವ ದೇವಾಲಯದ ಹೊರ ಬಿತ್ತಿಯ ಮೇಲೆ ಕೆತ್ತಿರುವ ಉಬ್ಬು ಶಿಲ್ಪಗಳು ಸುಂದರವಾಗಿವೆ. ಅವುಗಳಲ್ಲಿ ತಾಂಡೇಶ್ವರ, ಗಣಪತಿ, ಶಿವ ವೆಂಕಟೇಶ್ವರ, ಬ್ರಹ್ಮ, ಮಹಿಷಾಸುರ ಮರ್ದಿನಿ ಎಲ್ಲವೂ ಪ್ರಮಾಣ ಬದ್ಧ ಶಿಲ್ಪಗಳಾದರೆ ಗರ್ಭ ಗೃಹದ ಹಿಂಭಾಗದ ಭಿತ್ತಿಯಲ್ಲಿರುವ ಶಿಲ್ಪದಲ್ಲಿ ಶಿವ ವಿಷ್ಣುವಿನ ಲಕ್ಷಣಗಳೆಲ್ಲವೂ ಸೇರಿವೆ. ದೇವಾಲಯವನ್ನು ರಾಜ ರಾಜೇಂದ್ರ ಚೋಳರಿಂದ ನಿರ್ವಿುಸಲಾಗಿದೆ.

ಕಪಿಲೇಶ್ವರ ಸ್ವಾಮಿ ದೇವಸ್ಥಾನ

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯಲ್ಲಿನ ಮಣ್ಣೆ ಗಂಗರ ರಾಜಧಾನಿಯಾಗಿತ್ತು. ನಂತರ ರಾಷ್ಟ್ರಕೂಟರ ಆಡಳಿತಕ್ಕೆ ಸೇರಿದ ಮಾನ್ಯಖೇಟವಾಗಿ 7ನೇ ಶತಮಾನದ ವೇಳೆಗೆ ರಾಜಕೀಯವಾಗಿ ಮಾತ್ರವಲ್ಲದೆ, ಸಾಂಸ್ಕೃತಿಕವಾಗಿಯೂ ಪ್ರಸಿದ್ಧಿ ಪಡೆದಿತ್ತು ಎನ್ನಲಾಗಿದೆ. ಗಂಗರ ಕಾಲದಲ್ಲಿ ನಿರ್ವಣವಾದ ಕಪಿಲೇಶ್ವರ ಸ್ವಾಮಿ ದೇವಸ್ಥಾನ ಪ್ರಮುಖ ಐತಿಹಾಸಿಕ ಕುರುಹಾಗಿದೆ.

ಮೈಸೂರು ದಸರಾ ಜಂಬೂಸವಾರಿಯಂದು ನಡೆಯಲಿರುವ ವಿವಿಧ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಜಿಲ್ಲೆಯ ಮಹತ್ವ ಬಿಂಬಿಸುವ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ದೇವನಹಳ್ಳಿ ಕೋಟೆ, ಮುಕ್ತಿನಾಥೇಶ್ವರ ದೇವಾಲಯ, ಕಪಿಲೇಶ್ವರ ಸ್ವಾಮಿ ದೇವಸ್ಥಾನ, ಮಣ್ಣೆ, ಶಿವಗಂಗೆ ಬೆಟ್ಟ ಒಳಗೊಂಡ ಮೈಸೂರು ದಸರಾ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಸಮಿತಿ ಅನುಮೋದನೆ ಕೊಟ್ಟಿದೆ. ಮೈಸೂರಿನಲ್ಲಿ ಸ್ತಬ್ಧ ಚಿತ್ರ ತಯಾರಿ ಮತ್ತು ಸಿದ್ಧತೆ ನಡೆಯುತ್ತಿದ್ದು, ಜಂಬೂಸವಾರಿಯಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ. | ಉಮಾ ಸಹಾಯಕ ನಿರ್ದೇಶಕಿ, ಖಾದಿ ಮತ್ತು ಗ್ರಾಮ ಉದ್ಯೋಗ ಇಲಾಖೆ ಬೆಂ.ಗ್ರಾಮಾಂತರ ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳು ಅನಾವರಣ ಗೊಳ್ಳಲಿವೆ. ದೇವನಹಳ್ಳಿ ಕೋಟೆ, ಮುಕ್ತಿನಾಥೇಶ್ವರ ದೇವಾಲಯ, ಕಪಿಲೇಶ್ವರ ಸ್ವಾಮಿ ದೇವಸ್ಥಾನ, ಮಣ್ಣೆ, ಶಿವಗಂಗೆ ಬೆಟ್ಟ ಸೇರಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಒಳಗೊಂಡ ಸ್ತಬ್ಧಚಿತ್ರ ಪ್ರದರ್ಶನವಾಗುತ್ತಿದೆ. | ಡಾ.ಕೆ.ಎನ್.ಅನುರಾಧಾ, ಜಿಪಂ ಸಿಇಒ https://www.vijayavani.net/these-video-about-bengaluru-proves

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net