ವೋಟು ಹಾಕಿ ಪತ್ನಿ ಗೆಲ್ಲಿಸಿದ ತಪ್ಪಿಗೆ ಭಯಪಡುತ್ತಿರುವ ಜನ: ಬಟ್ಟೆ ಬಿಚ್ಚಿಕೊಂಡು ಬೀದಿಯಲ್ಲಿ ರಂಪಾಟ

Corporator
Published on

ಮೈಸೂರು: ಪತ್ನಿ ಗೆದ್ದಿರುವ ಪಾಲಿಕೆ ವಾರ್ಡಿನಲ್ಲಿ ಪತಿ ಮಹಾಶಯನೊಬ್ಬ ರೌಡಿಯ ರೀತಿ ವರ್ತಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.

ಮೈಸೂರು ನಗರ ಪಾಲಿಕೆ ವಾರ್ಡ್ 63ರ ಸದಸ್ಯೆ ಶಾರದಮ್ಮ ಪತಿ ಈಶ್ವರ್‌ನಿಂದ ಗೂಂಡಾಗಿರಿ ನಡೆದಿದೆ. ನ್ಯಾಯ ಕೇಳಿದ ಜನರ ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದಾನೆ. ಅಲ್ಲದೆ, ಬಟ್ಟೆ ಬಿಚ್ಚಿಕೊಂಡು ಬೀದಿಯಲ್ಲಿಯೇ ರಂಪಾಟ ಮಾಡಿದ್ದಾನೆ. ಜೆ.ಪಿ.ನಗರ 20ನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ.

ಯುಜಿಡಿ ಕಾಮಗಾರಿ ವೇಳೆ ವಿಠಲ್ ಎಂಬುವರ ಮನೆ ವಿದ್ಯುತ್ ಕೇಬಲ್ ಕಡಿತವಾಗಿದ್ದು, ಹೀಗಾಗಿ ತುಂಡಾದ ಕೇಬಲ್ ಸರಿ ಪಡಿಸುವಂತೆ ವಿಠಲ್ ಮನೆಯವರು ಮನವಿ ಮಾಡಿದ್ದರು. ಪದೇಪದೆ ಮನವಿ ಮಾಡಿದ್ದರಿಂದ ಕೋಪಗೊಂಡ ಕಾರ್ಪೊರೇಟರ್ ಪತಿ ಈಶ್ವರ್, ನಿಮ್ಮನ್ನು ನೋಡಿಕೊಳ್ತೀನಿ ಎಂದು ಬೆದರಿಕೆ ಹಾಕಿದ್ದಾನೆ.

ಸ್ಥಳದಲ್ಲಿ ಪೊಲೀಸರಿದ್ದರೂ ಕೇರ್ ಮಾಡದ ಆತ, ಬಟ್ಟೆ ಬಿಚ್ಚಿಕೊಂಡು ಗಲಾಟೆಗೆ ನಿಂತಿದ್ದಾನೆ. ಅಲ್ಲದೆ, ಮನೆ ಮುಂದೆ ರೌಡಿಗಳನ್ನು ಕರೆಸಿ ಬೆದರಿಕೆ ಹಾಕಿದ್ದಾನೆ. ವೋಟು ಹಾಕಿ ಪತ್ನಿ ಗೆಲ್ಲಿಸಿದ ತಪ್ಪಿಗೆ ಇದೀಗ ಜನರು ಭಯಪಡುವಂತಾಗಿದೆ. ವಿದ್ಯಾರಣ್ಯಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net